ಮುಂಬೈ (ಪಿಟಿಐ): ಚಿನ್ನಾಭರಣ ವರ್ತಕರ ಖರೀದಿ ಆಸಕ್ತಿ ತೋರಿಸಿದ ಕಾರಣ ಚಿನಿವಾರ ಪೇಟೆಯಲ್ಲಿ ಶನಿವಾರ ಚಿನ್ನದ ಬೆಲೆ ಪ್ರತಿ 10 ಗ್ರಾಂಗಳಿಗೆ ₹ 31,340 ಸಾವಿರ ತಲುಪಿದೆ.
ಒಂದೇ ದಿನದಲ್ಲಿ ಚಿನ್ನ ₹540 ಏರಿಕೆ ಕಂಡಿದ್ದು, ಇದು 29 ತಿಂಗಳ ಗರಿಷ್ಠ ವಾಗಿದೆ. 2014ರ ಫೆಬ್ರುವರಿ 26ರಂದು ಚಿನ್ನ ₹31,530ಕ್ಕೆ ತಲುಪಿತ್ತು.
ಜಾಗತಿಕ ಮಾರುಕಟ್ಟೆಗಳಲ್ಲಿ ಹೂಡಿಕೆದಾರರು ಚಿನ್ನ ಖರೀದಿಗೆ ಆಸಕ್ತಿ ತೋರಿದ ಕಾರಣ ಚಿನ್ನದ ಬೆಲೆ ಏರಿಕೆಯಾಗಿದೆ. ಇದು ಸ್ಥಳೀಯ ಮಾರುಕಟ್ಟೆಯಲ್ಲೂ ಪ್ರಭಾವ ಬೀರಿತು.
ಸ್ಟ್ಯಾಂಡರ್ಡ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗಳಿಗೆ ₹ 315ರಷ್ಟು ಏರಿಕೆಯಾಗಿ ₹ 31,080ಕ್ಕೆ ಮತ್ತು ಅಪರಂಜಿ ಚಿನ್ನವು ₹ 31,230ಕ್ಕೆ ತಲುಪಿತು.
ಆದರೆ, ಪ್ರತಿ ಕೆಜಿ ಬೆಳ್ಳಿಯ ಬೆಲೆ ₹220ರಷ್ಟು ಕುಸಿದಿದ್ದು ₹47,080ಕ್ಕೆ ತಲುಪಿದೆ. ಈ ಬೆಳವಣಿಗೆ ಬೆಳ್ಳಿನಾಣ್ಯ ತಯಾರಿಕರಿಗೆ ವರದಾನವಾಗಿ
ಪರಿಣಮಿಸಿದೆ.
ಮಾರುಕಟ್ಟೆ ಮೇಲೆ ಜಿಎಸ್‌ಟಿ ಪ್ರಭಾವ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಶೀಘ್ರ ಜಾರಿಯಾಗುವ ಲಕ್ಷಣ ಕಾಣುತ್ತಲೇ ಮುಂಬೈ ಷೇರುಪೇಟೆ (ಬಿಎಸ್‌ಇ) ಹಾಗೂ ರಾಷ್ಟ್ರೀಯ ಷೇರುಪೇಟೆ (ನಿಫ್ಟಿ) ಉತ್ತಮ ವಹಿವಾಟು ನಡೆಸಿವೆ.
ಷೇರುಪೇಟೆ ಸಂವೇದಿ ಸೂಚ್ಯಂಕ 249ಅಂಶಗಳಷ್ಟು ಏರಿಕೆ ಕಂಡು 28,051ರಲ್ಲಿ ದಿನದ ವಹಿವಾಟು ಮುಗಿಸಿದೆ. ಅದೇ ರೀತಿ ಎನ್‌ಎಸ್‌ಇ ನಿಫ್ಟಿ 97 ಅಂಶ ಏರಿಕೆ ಕಂಡು 8,638ರಲ್ಲಿ ವಹಿವಾಟು ಮುಗಿಸಿದೆ.
ಚೀನಾದಲ್ಲಿ ಇತ್ತೀಚೆಗೆ ನಡೆದ ಜಿ20 ರಾಷ್ಟ್ರಗಳು ಶೃಂಗಸಭೆಯಲ್ಲಿ ಬ್ರೆಕ್ಸಿಟ್ ಪರಿಣಾಮ ಎದುರಿಸಲು ಹಣಕಾಸು ನೀತಿಯಲ್ಲಿ ಮಾರ್ಪಾಡು ಮಾಡಿಕೊಳ್ಳುವ ನಿರ್ಣಯ ಕೈಗೊಂಡಿರುವುದು ಷೇರುಪೇಟೆ ವಹಿವಾಟು ಚೇತರಿಕೆ ಮೇಲೆ ಪರಿಣಾಮ ಬೀರಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
Comments are closed.