ಸ್ಮಾರ್ಟ್‌ಫೋನ್ ಲೋಕದಲ್ಲೀಗ ಪೋಕ್ ಮನ್ ಗೋ ಜ್ವರ! ಪಾಶ್ಚಾತ್ಯರಂತೂ ಹುಚ್ಚು ಹಿಡಿದವರಂತೆ ಪೋಕ್‌ಮನ್ ಹಿಂದೆ ಬಿದ್ದಿದ್ದಾರೆ. ಕೆಲವರು ಪ್ರಾಣವನ್ನೂ ಕಳೆದು ಕೊಂಡಿದ್ದಾರೆ. ಇದೇ ಕಾರಣಕ್ಕೆ ಪೋಕ್‌ಮನ್ ಗೋ ಇನ್ನಿಲ್ಲದಂತೆ ಸದ್ದು ಮಾಡುತ್ತಿದೆ. ಪೋಕ್‌ಮನ್ ಜ್ವರ ಯಾವ ರೀತಿ ಹಬ್ಬಿದೆ ಎಂದರೆ ದಿನವೊಂದಕ್ಕೆ 10 ಲಕ್ಷಕ್ಕೂ ಹೆಚ್ಚು ಮಂದಿ ಈ ಗೇಮ್ ಡೌನ್ ಲೋಡ್ ಮಾಡುತ್ತಿದ್ದಾರೆ. ಜಗತ್ತಿನೆಲ್ಲಡೆ 7.5 ಕೋಟಿ ಜನ ಈ ಗೇಮ್ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಏನಿದು ಆಟ, ಪ್ರಾಣ ಕಳೆದುಕೊಳ್ಳುವಂಥಾದ್ದು ಏನಿದೆ? ಎಂಬ ಕುರಿತ ವಿವರಗಳು ಇಲ್ಲಿವೆ.
ಏನಿದು ಪೋಕ್‌ಮನ್ ಗೋ?
ಪೋಕ್‌ಮನ್ ಗೋ ಇತರ ಮೊಬೈಲ್ ಆಟಗಳಂತೆಯೇ ಒಂದು ಮೊಬೈಲ್ ಆಟ. ಇಂಟರ್ನೆಟ್, ಕ್ಯಾಮರಾ, ಜಿಪಿಎಸ್ ಸಂಪರ್ಕ ಇರುವ ಮೊಬೈಲ್‌ಗಳಲ್ಲಿ ಇದನ್ನು ಆಡಬಹುದು. ಮೊಬೈಲ್ ಗಳಲ್ಲಿ ಆಟ ಆನ್ ಮಾಡಿ ಹೊರಗಡೆ ಸಂಚರಿಸಬೇಕಾಗುತ್ತದೆ. ಇಂದೊಂದು ಸ್ಥಳ ಆಧರಿತ ಜನಪ್ರಿಯ ರಿಯಾಲಿಟಿ ಗೇಮ್. “ಹೀಗೆ ಹೋಗುತ್ತಿದ್ದಂತೆ ಪೋಕ್‌ಮನ್ ಹೆಸರಿನ ಗೊಂಬೆ ಮಾದರಿ ಆಕೃತಿ ಮೊಬೈಲ್ ಸ್ಕ್ರೀನ್‌ನಲ್ಲಿ ಕಾಣಿಸುತ್ತದೆ. ಸ್ಕ್ರೀನ್‌ನಲ್ಲಿ ಕಾಣಿಸುವ ಬಾಲನ್ನು ಎಸೆದು ಇದನ್ನು ಹಿಡಿಯಬೇಕು. ಹೀಗೆ ಆಟ ಆಡಿದಷ್ಟೂ ಹೆಚ್ಚೆಚ್ಚು ಪಾಯಿಂಟ್ಸ್‌ಗಳು ಲಭ್ಯವಾಗುತ್ತದೆ.
ಜಪಾನ್ ಕಂಪನಿ ಆವಿಷ್ಕರಿಸಿದ ಗೇಮ್
ವೈರಲ್ ಆಗಿರುವ ಈ ಪೋಕ್‌ಮನ್ ಗೋ ಆಟ ಜಪಾನೀಯರ ತಯಾರಿಕೆ. 1990ಕ್ಕೂ ಮೊದಲೇ ಈ ಆಟ ಬಂದಿತ್ತು. ಆಗ ಅಷ್ಟು ಪ್ರಸಿದ್ಧಿಯಾಗಿರಲಿಲ್ಲ. ಈಗ ಸುಧಾರಿತ ಆವೃತ್ತಿ ಬಿಡುಗಡೆಯಾಗಿದ್ದು ವಿಶ್ವದೆಲ್ಲೆಡೆ ಭರ್ಜರಿ ಪ್ರಸಿದ್ಧಿಯಾಗಿದೆ. ಅಮೆರಿಕದಲ್ಲಿ ಮೊದಲು ಬಿಡುಗಡೆಯಾದ ಈ ಗೇಮ್ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿದಂತೆ 37 ದೇಶಗಳಲ್ಲಿ ಯುವಕರ ಮನಗೆದ್ದಿದೆ. ಭಾರತದಲ್ಲಿ ಬಿಡುಗಡೆಯಾಗದಿದ್ದರೂವಿಪಿಎನ್(ವರ್ಚುವಲ್ ಪ್ರೈವೇಟ್ ನೆಟ್ ವರ್ಕ್) ಮಾದರಿಯಲ್ಲಿ ಆಟ ಆಡುತ್ತಿದ್ದಾರೆ. “ಎಪಿಕೆ’ ಫೈಲ್‌ಗಳನ್ನು ಬಳಸಿ ಈ ಗೇಮ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದಾರೆ.
ಆಡುವುದು ಹೇಗೆ?
ಈ ಆಟವನ್ನು ಆಡಲು ಪೋಕ್‌ಮನ್ ಗೋ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಸೈನ್ ಇನ್ ಆದ ಬಳಿಕ ಪೋಕ್‌ಮನ್ ಹೆಸರಿನ ಗೊಂಬೆ ಮಾದರಿ ರಚಿಸಿಕೊಳ್ಳಬೇಕು. ಬಳಿಕ ಆಟ ಆರಂಭ. ಬಲಾºಸುರ್, ಚಾರ್ಮಂಡರ್, ಸ್ವಿರ್ಟೆಲ್ ಎಂಬ ಮೂರು ಪೋಕ್‌ಮನ್‌ಗಳು ನಿಮ್ಮ ಮೊಬೈಲ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಒಂದು ಹಿಡಿದ ಬಳಿಕ ಇನ್ನೊಂದು ಪೋಕ್‌ಮನ್ ನಾಪತ್ತೆಯಾಗುತ್ತದೆ. ನೀವು ಮೊದಲ ಮೂರು ಪೋಕ್‌ಮನ್‌ನಿಂದ ದಾಟಿ ಮುಂದೆ ಹೋದರೆ ಪಿಕಾಚು ಎಂಬ ನಾಲ್ಕನೇ ಪೋಕ್ ಮನ್ ಆಯ್ಕೆ ಲಭ್ಯವಾಗುತ್ತದೆ. ಆಗ ಪೋಕ್ ಮನ್ ಗೋ ಮ್ಯಾಪ್‌ಗೆ ಪ್ರವೇಶಿಸುತ್ತೀರಿ. ಅದರಲ್ಲಿ ರಸ್ತೆ, ಸ್ಥಳಗಳನ್ನು ಕಾಣಬಹುದು. ನೀವು ಚಲಿಸುತ್ತಿದ್ದಂತೆ ಪೋಕ್‌ಮನ್ ಗೊಂಬೆ ಕೂಡ ದೂರ ಸರಿಯುತ್ತಾ ಹೋಗುತ್ತದೆ.
ಪೋಕ್‌ಮನ್ ಅನ್ನು ಹಿಡಿಯುವುದು ಹೇಗೆ?
ಸಾಮಾನ್ಯವಾಗಿ ಸ್ಥಳೀಯ ಪ್ರಸಿದ್ಧ ಸ್ಥಳಗಳಲ್ಲಿಯೇ ಪೋಕ್‌ಮನ್ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ ಪ್ರವಾಸಿ ತಾಣ, ಜನನಿಬಿಡ ಸ್ಥಳ, ಇತ್ಯಾದಿ. ನೀವು ಅಲ್ಲಿಗೆ ಹೋಗುತ್ತಿದ್ದಂತೆ ಗೊಂಬೆ ಜಿಪಿಎಸ್ ಮ್ಯಾಪ್ ಬಳಸಿ ಬೇರೆ ಕಡೆ ಚಲಿಸಲು ಆರಂಭಿಸುತ್ತದೆ. ನೀವು ಅದಕ್ಕೆ ತೀರಾ ಸಮೀಪ ಆದಾಗ ಅದು ನಿಮ್ಮ ಮೊಬೈಲ್‌ನಲ್ಲಿ ಕಾಣಿಸಿಕೊಂಡು ಮೊಬೈಲ್ ವೈಬ್ರೇಟ್ ಆಗುತ್ತದೆ. ಬಳಿಕ ಸ್ಕ್ರೀನ್‌ನಲ್ಲಿ ಕಾಣಿಸುವ ಬಾಲನ್ನು ಎಸೆದು ಇದನ್ನು ಹಿಡಿಯಬೇಕು. ಪೋಕ್ ಮನ್ ನಿಮ್ಮನ್ನು ಸೂಪರ್ ಮಾರ್ಕೆಟ್, ಮೈದಾನಗಳು, ಪೊಲೀಸ್ ಸ್ಟೇಷನ್ ಗಳಿಗೂ ಕರೆದೊಯ್ಯಬಹದು.
ಅಪಾಯಕಾರಿ ಆಟ ಏಕೆ?
ಪೋಕ್‌ಮನ್‌ಅನ್ನು ಹುಡುಕಿ ಹೊರಟ ವೇಳೆ ಜನರ ಗಮನ ಮೊಬೈಲ್ ಮೇಲೆಯೇ ಇರುತ್ತದೆ. ಜನರು ರಸ್ತೆಯಲ್ಲಿ ಟ್ರಾμಕ್ ಗಮನಿಸದೇ ಮೊಬೈಲ್ ನೋಡುತ್ತಾ ರಸ್ತೆಯನ್ನು ದಾಟುತ್ತಾರೆ. ಇದರಿಂದ ಅಪಘಾತದಿಂದ ಜನರು ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಈಗಾಗಲೇ ಇಂಥ ಹಲವಾರು ಪ್ರಕರಣಗಳು ದಾಖಲಾಗಿವೆ. ಜನರು ಕಾರು, ಬೈಕುಗಳನ್ನು ಹತ್ತಿ ಪೋಕ್‌ಮನ್‌ಅನ್ನು ಹುಡುಕಲು ಹೋಗುತ್ತಿದ್ದಾರೆ. ಅಮೆರಿಕದಲ್ಲಿ ಪೋಕ್‌ಮನ್ ಅನ್ನು ಹುಡುಕುತ್ತಾ ಹೋದ ವ್ಯಕ್ತಿಯೊಬ್ಬನ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ ಪ್ರಕರಣವೂ ನಡೆದಿದೆ. ಹೀಗೆ ನಾನಾ ರೀತಿಯಲ್ಲಿ ಜನರು ಅಪಾಯಕ್ಕೆ ಸಿಲುಕುತ್ತಿದ್ದಾರೆ.
ವಿಶ್ವದೆಲ್ಲೆಡೆ ಫೇಮಸ್
ಪೋಕಮನ್ ಗೋ ಆಟ ವಿಶ್ವದೆಲ್ಲೆಡೆ ಪ್ರಸಿದ್ಧವಾಗಿದೆ. ಅಮೆರಿಕ, ಜಪಾನ್, ಇಂಗ್ಲೆಂಡ್, ಆಸ್ಟ್ರೇಲಿಯಾ, ಕೆನಡಾ, ಇಟಲಿ ಸೇರಿ 37 ದೇಶಗಳಲ್ಲಿ ಈ ಆಟವನ್ನು ಆಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಭಾರತ, ಚೀನಾ, ಬ್ರೆಜಿಲ್ ಸೇರಿಂದಂತೆ ವಿವಿಧ ದೇಶಗಳಿಗೆ ಈ ಆಟ ಇನ್ನೂ ಕಾಲಿಟ್ಟಿಲ್ಲ. ಆ್ಯಂಗ್ರಿ ಬರ್ಡ್, ಕ್ಯಾಂಡಿ ಕ್ರಷ್ ಬಿಡುಗಡೆಯಾದ ವೇಳೆ ಮೊದಲ ವಾರ ಕ್ರಮವಾಗಿ 22 ಲಕ್ಷ ಮತ್ತು 18 ಲಕ್ಷ ಡೌನ್ ಲೋಡ್ ಆಗಿತ್ತು.ಆದರೆ, ಪೋಕ್‌ಮನ್ ಗೋ ಬಿಡುಗಡೆಯಾದ ಒಂದೇ ವಾರದಲ್ಲಿ 72 ಲಕ್ಷ ಡೌನ್‌ಲೋಡ್ ಆಗುವ ಮೂಲಕ ಆ್ಯಪಲ್ ಆ್ಯಪ್ ಸ್ಟೋರ್ ದಾಖಲೆಯನ್ನು ಮುರಿದಿದೆ. ಇದುವೆರೆಗೆ ಜಗತ್ತಿನೆಲ್ಲೆಡೆ 7.5 ಕೋಟಿ ಮಂದಿ ಆಟವನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಮುಂಬೈ ರಸ್ತೆಗಳಲ್ಲಿ “ಪೋಕ್‌ಮನ್’ಆಡಬೇಡಿ: ಪೊಲೀಸರ ಎಚ್ಚರಿಕೆ
ಜಗತ್ತಿನ ಹಲವು ದೇಶಗಳಲ್ಲಿ ಮಕ್ಕಳು ಹಾಗೂ ಯುವಕರ ಹುಚ್ಚೆಬ್ಬಿಸಿರುವ, ಅಪಘಾತಕ್ಕೂ ಕಾರಣವಾಗುತ್ತಿರುವ “ಪೋಕ್‌ಮನ್ ಗೋ’ ಅನ್ನು ಮುಂಬೈ ರಸ್ತೆಗಳಲ್ಲಿ ಆಡದಂತೆ ಮುಂಬೈ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ನಗರದ ರಸ್ತೆಗಳಲ್ಲಿ ಪೋಕ್‌ಮನ್ ಆಟವಾಡುತ್ತಾ ಅಪಘಾತಗಳಿಗೆ ಕಾರಣವಾಗಬೇಡಿ. ಜೀವನ ಎಂಬುದು ಆಟವಲ್ಲ. ರಸ್ತೆಗಳು ಆಟವಾಡಲು ಉತ್ತಮ ಸ್ಥಳವಲ್ಲ ಎಚ್ಚರಿಸಿದ್ದಾರೆ. ಈ ಆಟ ಭಾರತಕ್ಕೆ ಇನ್ನೂ ಅಧಿಕೃತವಾಗಿ ಪ್ರವೇಶಿಸಿಲ್ಲ.
-ಉದಯವಾಣಿ
Comments are closed.