ಮುಂಬೈ

ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣ; ಮೂರು ವರ್ಷದ ಬಳಿಕ ಮೊದಲ ಆರೋಪಿ ಬಂಧನ

Pinterest LinkedIn Tumblr

dc-Cover-jjfnt7k4qm2hci9nph87gibi45-20160611155956.Medi

ಮುಂಬೈ: ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆಯಾಗಿ ಮೂರು ವರ್ಷ ಕಳೆದ ಬಳಿಕ ಇದೀಗ ಮೊದಲ ಆರೋಪಿಯೊಬ್ಬನನ್ನು ಸಿಬಿಐ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆ.

ಸಿಬಿಐ ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಜನ ಜಾಗೃತಿ ಸಮಿತಿ ಸದಸ್ಯ ವಿರೇಂದ್ರ ಸಿಂಗ್ ತಾವಡೆ‌ ಎಂಬಾತನನ್ನು ನಿನ್ನೆ ರಾತ್ರಿ ಇಲ್ಲಿಗೆ ಸಮೀಪದ ಪನ್ವೇಲ್‌ನಲ್ಲಿ ಬಂಧಿಸಿದೆ.

ಕಳೆದ 2014ರ ಮೇ ತಿಂಗಳಲ್ಲಿ ದಾಭೋಲ್ಕರ್ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಮುಂಬೈ ಹೈಕೋರ್ಟ್ ಈ ಸಂಬಂಧ ಆದೇಶ ಹೊರಡಿಸಿದ ನಂತರ ಇದು ಮೊದಲನೇ ಬಂಧನದ ಕ್ರಮ. ಬಂಧಿತನನ್ನು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಪುಣೆಯ ನಿಯೋಜಿತ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು.

2015ರ ಫೆಬ್ರವರಿಯಲ್ಲಿ ಇನ್ನೊಬ್ಬ ವಿಚಾರವಾದಿ ಗೋವಿಂದ ಪನ್ಸಾರೆ ಹಾಗೂ ತದನಂತರ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಗೋವಾ ನೆಲೆಯ ಹಿಂದೂ ಜನಜಾಗೃತಿ ಸಮಿತಿ ಸಂಘಟನೆ ಮೇಲೆ ಸಂಶಯದ ಕರಿ ನೆರಳು ಕವಿದಿದ್ದನ್ನು ಇಲ್ಲಿ ಸ್ಮರಿಸಬಹುದು.
2013ರ ಆಗಸ್ಟ್ 20ರಂದು ಹಾಡಹಗಲೇ ದಾಭೋಲ್ಕರ್ ಅವರನ್ನು ಗುಂಡಿಕ್ಕಿ ಸಾಯಿಸಲಾಗಿತ್ತು.

ದೇಶಾದ್ಯಂತ ಪ್ರತಿಭಟನೆ
ಈ ಮೂವರು ಲೇಖಕರು, ವಿಚಾರವಾದಿಗಳ ಹತ್ಯೆ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಲೇಖಕರು, ಕಲಾವಿದರ ವಲಯದಲ್ಲಿ ವ್ಯಾಪಕ ರೀತಿಯಲ್ಲಿ ಪ್ರತಿಭಟನೆ ವ್ಯಕ್ತವಾಗಿತ್ತು. ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ಖಂಡಿಸಿ ನೂರಾರು ಜನ ತಮಗೆ ಸಂದ ಪ್ರಶಸ್ತಿ ಪುರಸ್ಕಾರಗಳನ್ನು ರಾಜ್ಯ-ಕೇಂದ್ರ ಸರ್ಕಾರಗಳಿಗೆ ಸಂಬಂಧಿಸಿದ ಸಂಸ್ಥೆಗಳಿಗೆ ಹಿಂತಿರುಗಿಸಿದ್ದರು.

ಇ.ಎನ್.ಟಿ. ವೈದ್ಯ
ಈ ಹಿಂದೆ ಸಿಬಿಐ ನಡೆಸಿದ್ದ ತನಿಖೆಯ ಕಾಲಕ್ಕೆ ಸಂಶಯದ ತೂಗುಗತ್ತಿ, ಹಿಂದೂ ಸನಾತನ ಸಂಸ್ಥಾ ಸಂಘಟನೆ ಅನುಯಾಯಿ ಹಾಗೂ ಇಎನ್‌ಟಿ ವೈದ್ಯ ಎಂದು ಹೇಳಲಾದ ತಾವಡೆ ಮೇಲೆ ತೂಗುತ್ತಿತ್ತು.

ಸಂಸ್ಥಾನದ ಇನ್ನೊಬ್ಬ ಸಕ್ರಿಯ ಕಾರ್ಯಕರ್ತ ಎಂದು ಬಣ್ಣಿಸಲಾಗಿರುವ ಸಾರಂಗ್ ಅಕೋಲ್ಕರ್ ಎಂಬಾತನ ವಿರುದ್ಧ 2012ರ ಜುಲೈನಲ್ಲಿ ಇಂಟರ್‌ಪೋಲ್ ರೆಡ್ ಅಲರ್ಟ್ ಕಟ್ಟೆಚ್ಚರಕ್ಕೆ ಸೂಚನೆ ಹೊರಡಿಸಿದ್ದರೂ ಕೂಡ ಆತ ಇನ್ನೂ ನಿಗೂಢ ರೀತಿಯಲ್ಲಿ ನಾಪತ್ತೆ ಆಗಿದ್ದಾನೆ.

ಸಿಮ್‌ಕಾರ್ಡ್, ಸೆಲ್ ಮಾಹಿತಿ
ಕಳೆದ ಎರಡರಂದು ತಾವಡೆ ಹಾಗೂ ಅಕೋಲ್ಕರ್ ಮನೆಗಳ ಮೇಲೆ ಸಿಬಿಐ ದಾಳಿ ನಡೆಸಿದ್ದಾಗ, ಅನೇಕ ಸಿಮ್‌ಕಾರ್ಡ್, ಸೆಲ್‌ಫೋನ್ ಹಾಗೂ ಕಂಪ್ಯೂಟರ್‌ನಿಂದ ಸಾಕಷ್ಟು ಮಾಹಿತಿಯನ್ನು ವಶಪಡಿಸಿಕೊಳ್ಳಲಾಗಿತ್ತು.

ದಾಭೋಲ್ಕರ್ ಅವರ ಹತ್ಯೆಗೆ ಸಂಬಂಧಿಸಿದ ಪಿತೂರಿಯಲ್ಲಿ ಇವರಿಬ್ಬರ ವಿರುದ್ಧ ಸಾಕ್ಷ್ಯಾಧಾರಗಳು ಲಭಿಸಿದ್ದರಿಂದ ಅವರ ತನಿಖೆ ನ‌ಡೆದಿತ್ತು ಎಂದು ಸಿಬಿಐ ಮೂಲಗಳು ತಿಳಿಸಿವೆ. 34 ವರ್ಷ ವಯಸ್ಸಿನ ಅಕೋಲ್ಕರ್, ದಾಭೋಲ್ಕರ್ ಹತ್ಯೆ ಪ್ರಕರಣದ ಮುಖ್ಯ ಆರೋಪಿ ಎಂದೂ ಹೇಳಲಾಗಿದೆ.

ಹತ್ಯೆ ತಡೆಯಬಹುದಾಗಿತ್ತು!
ತಡವಾಗಿಯಾದರೂ ಕ್ರಮ ಜರುಗಿಸಲಾಗಿದೆ. ದಾಭೋಲ್ಕರ್ ಹತ್ಯೆಯಾದ ಕೂಡಲೇ ಈ ಕ್ರಮ ಜರುಗಿದ್ದರೆ, ಗೋವಿಂದ ಪನ್ಸಾರೆ ಹಾಗೂ ಎಂ.ಎಂ. ಕಲಬುರ್ಗಿ ಅವರ ಕೊಲೆಗಳನ್ನು ತಪ್ಪಿಸಬಹುದಾಗಿತ್ತು ಎಂದು ದಾಭೋಲ್ಕರ್ ಪುತ್ರ ಹಮೀದ್ ಪ್ರತಿಕ್ರಿಯಿಸಿದ್ದಾರೆ.

Comments are closed.