
ಮುಂಬೈ: ಅಂಧೇರಿ ಮೂಲದ ಯುವತಿಯೊಬ್ಬಳು ಟ್ಯುಟೋರಿಯಲ್ಸ್ ವಿರುದ್ಧ ಕೋರ್ಟ್ ಮೆಟ್ಟಿಲೇರಿ 3.65 ಲಕ್ಷ ರೂ ಪರಿಹಾರ ಪಡೆದಿದ್ದಾಳೆ.
2013ರಲ್ಲಿ 12ನೇ ತರಗತಿಯ ಸೈನ್ಸ್ ವಿದ್ಯಾರ್ಥಿನಿ ಅಭಿವ್ಯಕ್ತಿ ವರ್ಮಾ ಗಣಿತ ಹಾಗು ಕೆಮಿಸ್ಟ್ರಿ ಕೋಚಿಂಗ್‍ಗಾಗಿ ಇಲ್ಲಿನ ಆಕ್ಸ್‍ಫರ್ಡ್ ಟ್ಯೂಟರ್ ಅಕಾಡೆಮಿಗೆ ಸೇರಿಕೊಂಡಿದ್ದಳು. ಒಳ್ಳೆಯ ಬೋಧಕವರ್ಗ ಇದೆ ಎಂದು ಹೇಳಿಕೊಂಡಿದ್ದ ಈ ಅಕಾಡೆಮಿ ವಿದ್ಯಾರ್ಥಿನಿಯ ಮನೆಗೆ ಶಿಕ್ಷಕರನ್ನು ಕಳಿಸಬೇಕಿತ್ತು. ಆದರೆ ಒಂದು ತಿಂಗಳ ನಂತರ ಕೆಮಿಸ್ಟ್ರಿ ಬೋಧಕರನ್ನು ಕಳಿಸಲು ವಿಫಲವಾಗಿತ್ತು. ಅಲ್ಲದೆ ಗಣಿತ ಪ್ರಾಧ್ಯಾಪಕರು ಹಿಂದಿ ಭಾಷಿಕರಾಗಿದ್ದು ಅಭಿವ್ಯಕ್ತಿಗೆ ಇಂಗ್ಲಿಷ್‍ನಲ್ಲಿ ಪಾಠ ಹೇಳಿಕೊಡಲು ಆಗಿರಲಿಲ್ಲ.
ವಕೀಲರಾದ ವಿದ್ಯಾರ್ಥಿನಿಯ ತಾಯಿ ನೀನಾ, ಕೆಮಿಸ್ಟ್ರಿ ಬೋಧಕರನ್ನು ಕಳಿಸುವಂತೆ ಹಲವು ಬಾರಿ ಟ್ಯುಟೋರಿಯಲ್ಸ್‍ನವರಿಗೆ ಒತ್ತಾಯಿಸಿದ ನಂತರ ಸಿಬಿಎಸ್‍ಸಿ ಬೋರ್ಡ್‍ನ 7ನೇ ತರಗತಿಯ ಕೆಮಿಸ್ಟ್ರಿ ಶಿಕ್ಷಕರನ್ನು ಕಳಿಸಿದ್ರು. ತನ್ನ ಮಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾದೀತು ಎಂದು ಹೆದರಿದ ತಾಯಿ ನೀನಾ ಮತ್ತೊಮ್ಮೆ ಟ್ಯುಟೋರಿಯಲ್ಸ್‍ನವರನ್ನು ಸಂಪರ್ಕಿಸಿದಾಗ ಐಐಟಿ ವಿದ್ಯಾರ್ಥಿಯೊಬ್ಬನನ್ನು ಕಳಿಸಿದ್ರು. ಆದರೆ ಆತ ಕೂಡ ವಿದ್ಯಾರ್ಥಿನಿ ಅಭಿವ್ಯಕ್ತಿಗೆ ಸಹಾಯ ಮಾಡಲು ಸಾಧ್ಯವಾಗಿರಲಿಲ್ಲ.
ಈ ಎಲ್ಲಾ ಗೊಂದಲಗಳಿಂದಾಗಿ ಅಭಿವ್ಯಕ್ತಿ 12ನೇ ತರಗತಿಯಲ್ಲಿ ಫಿಸಿಕ್ಸ್, ಕೆಮಿಸ್ಟ್ರಿ ಮತ್ತ ಗಣಿತ ಒಟ್ಟುಗೂಡಿ ಶೇ. 60 ರಷ್ಟು ಅಂಕ ಕೂಡ ಪಡೆಯಲು ವಿಫಲಳಾಗಿದ್ದಳು. ಟ್ಯುಟೋರಿಯಲ್ಸ್‍ನವರು ನೀಡಿದ್ದ ಭರವಸೆಗಳನ್ನು ಪೂರೈಸಲು ವಿಫಲರಾದ ಕಾರಣ ಅವರ ವಿರುದ್ಧ 2015ರಲ್ಲಿ ತಾಯಿ ನೀನಾ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಸರಿಯಾದ ಬೋಧಕರನ್ನು ಒದಗಿಸಲು ವಿಫಲವಾದ ಟ್ಯುಟೋರಿಯಲ್ಸ್‍ನವರು ವಿದ್ಯಾರ್ಥಿನಿ ಕಟ್ಟಿದ್ದ 54 ಸಾವಿರ ರೂ ಶುಲ್ಕ, ಆಕೆ ಪಟ್ಟ ಮಾನಿಸಿಕ ಹಿಂಸೆಗಾಗಿ 3 ಲಕ್ಷ ರೂ ಪರಿಹಾರ ಮತ್ತು 10 ಸಾವಿರ ರೂ ಕೋರ್ಟ್ ವೆಚ್ಛವನ್ನು ಭರಿಸಬೇಕು ಎಂದು ಹೇಳಿ ಇದೇ ತಿಂಗಳು ತೀರ್ಪು ಪ್ರಕಟಿಸಿದೆ.
Comments are closed.