
ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕ್ ನಿಂದ ಅತೀ ಹೆಚ್ಚು ಬಾರಿ ಕರೆ ಮಾಡಿದ್ದು ಮಹಾರಾಷ್ಟ್ರದ ಬಿಜೆಪಿ ಮುಖಂಡ, ಕಂದಾಯ ಸಚಿವ ಏಕನಾಥ್ ಖಾಡ್ಸೆ ಅವರಿಗೆ ಎಂದು ಮಾಧ್ಯಮದ ವರದಿ ತಿಳಿಸಿದ್ದು, ಈ ಕುರಿತು ಮಹಾರಾಷ್ಟ್ರ ಸರ್ಕಾರ ಶನಿವಾರ ತನಿಖೆಗೆ ಆದೇಶ ನೀಡಿದೆ.
ವಡೋದರಾ ಮೂಲದ ಹ್ಯಾಕರ್ ಮನೀಶ್ ಭಾಂಗಾಲೆ ಸಂಗ್ರಹಿಸಿದ್ದ ಮಾಹಿತಿಯನ್ನು ಇಂಡಿಯಾ ಟುಡೇ ಪ್ರಸಾರ ಮಾಡಿತ್ತು. ಭೂಗತ ಪಾತಕಿ ಯಾವೆಲ್ಲ ಮೊಬೈಲ್ ನಂಬರ್ ಗಳಿಂದ ಭಾರತಕ್ಕೆ ಕರೆ ಮಾಡಿದ್ದ ಎಂಬುದರ ವರದಿ ಪ್ರಸಾರವಾಗಿತ್ತು. ಆದರೆ ಯಾರ ಹೆಸರು ಬಹಿರಂಗವಾಗಿರಲಿಲ್ಲವಾಗಿತ್ತು.
ಭಾಂಗಾಲೆ ದಾವೂದ್ ಪತ್ನಿ ಮೆಹಜಬೀನ್ ಶೇಕ್ ಹೆಸರಿನಲ್ಲಿ ರಿಜಿಸ್ಟರ್ಡ್ ಆಗಿದ್ದ 4 ಫೋನ್ ಗಳ ವಿವರಗಳನ್ನು ಹ್ಯಾಕ್ ಮಾಡಿ ಸಂಗ್ರಹಿಸಿದ್ದರು. ಇದರಲ್ಲಿ ಅತೀ ಹೆಚ್ಚು ಬಾರಿ ಬಿಜೆಪಿ ಮುಖಂಡ ಖಾಡ್ಸೆಗೆ ಕರೆ ಮಾಡಿರುವುದಾಗಿ ವರದಿ ವಿವರಿಸಿದೆ.
ಆದರೆ ಬಿಜೆಪಿ ಮುಖಂಡ ಖಾಡ್ಸೆ ಅವರು ಈ ಆರೋಪವನ್ನು ತಳ್ಳಿಹಾಕಿದ್ದಾರೆ. ನಾನಾಗಲಿ, ನನ್ನ ಕುಟುಂಬದ ಸದಸ್ಯರು ಈವರೆಗೂ ದಾವೂದ್ ಇಬ್ರಾಹಿಂ ಜೊತೆ ಮಾತನಾಡಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದೇ ವೇಳೆ, ಏಕನಾಥ್ ಖಡ್ಸೆಯವರು ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಆಗ್ರಹಿಸಿವೆ. ಆದರೆ, ಮಹಾರಾಷ್ಟ್ರ ಸರಕಾರದಲ್ಲಿ ಸಚಿವರಾಗಿರುವ ಏಕನಾಥ್ ಖಡ್ಸೆ ತನಗೂ ದಾವೂದ್ ಇಬ್ರಾಹಿಂಗೂ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ದಾವೂದ್ ಕರೆ ಮಾಡಿರುವ ನಂಬರ್ ತನಗೆ ಸೇರಿದ್ದೆಂದು ಒಪ್ಪಿಕೊಂಡಿರುವ ಏಕನಾಥ್, ತಾನಾಗಲೀ ತನ್ನ ಕುಟುಂಬ ಸದಸ್ಯರಾಗಲೀ ದಾವೂದ್ ಜೊತೆ ಯಾವತ್ತೂ ಮಾತನಾಡಿದ್ದಿಲ್ಲ ಎಂದು ಪ್ರಮಾಣಿಸಿದ್ದಾರೆ.
Comments are closed.