ಮನೋರಂಜನೆ

ಕೊನೆಯ ಪಂದ್ಯದ ಕೊನೆಯ ಓವರ್ ನಲ್ಲಿ ಧೋನಿಯ ಅದ್ಭುತ ಪ್ರದರ್ಶನ ! ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಸೋಲಿಸಿದ ರೈಸಿಂಗ್ ಪುಣೆ

Pinterest LinkedIn Tumblr

dhoni

ಕೊನೆಯ ಓವರ್‌ನಲ್ಲಿ ಗೆಲವಿಗೆ 23 ರನ್ ಬೇಕಿತ್ತು. ಕ್ರೀಸ್‌ನಲ್ಲಿದ್ದಿದ್ದು ಧೋನಿ. ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಎಸೆದ ಮೊದಲ ಬಾಲ್‌ನಲ್ಲಿ ಧೋನಿ ಯಾವುದೇ ರನ್ ಗಳಿಸಲಿಲ್ಲ. ಎರಡನೇ ಎಸೆತ ವೈಡ್. ಐದು ಎಸೆತಕ್ಕೆ 22 ರನ್ ಬೇಕು. ಎರಡನೇ ಎಸೆತ ಸಿಕ್ಸರ್. ಮೂರನೇ ಎಸೆತದಲ್ಲಿ ಎರಡು ರನ್. ನಾಲ್ಕನೇ ಎಸೆತ ಬೌಂಡರಿ. ಈ ವೇಳೆ ಗೆಲವಿಗೆ ಎರಡು ಬಾಲ್‌ಗೆ 11 ರನ್ ಬೇಕಿತ್ತು. ಚೇಸಿಂಗ್ ಹಾಗೂ ಕೊನೆಯ ಓವರ್ ಬ್ಯಾಟಿಂಗ್‌ನಲ್ಲಿ ಖ್ಯಾತಿ ಗಳಿಸಿರುವ ಧೋನಿ ಐದು ಹಾಗೂ ಆರನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಪುಣೆಗೆ ನಾಲ್ಕು ವಿಕೆಟ್‌ಗಳ ಜಯ ತಂದಿಟ್ಟರು.

ಐಪಿಎಲ್‌ನ ಕ್ವಾಲಿಫೈಯರ್ ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳಲು ವಿಫಲವಾಗಿರುವ ರೈಸಿಂಗ್ ಪುಣೆ ಕೊನೆಯ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ನಾಲ್ಕು ವಿಕೆಟ್‌ಗಳ ಜಯ ದಾಖಲಿಸಿದೆ. ಕೊನೆಯ ಎಸೆತದವರೆಗೂ ಕೂತೂಹಲ ಮೂಡಿಸಿದ್ದ ಪಂದ್ಯದಲ್ಲಿ ಕೂಲ್ ಕ್ಯಾಪ್ಟನ್ ಧೋನಿ ಒಂದು ಬೌಂಡರಿ ಹಾಗೂ ಮೂರು ಸಿಕ್ಸರ್ ಬಾರಿಸುವ ಮೂಲಕ ಪುಣೆಗೆ ಗೆಲವು ತಂದಿಟ್ಟರು.

ಪಂಜಾಬ್ ನೀಡಿದ 173 ರನ್‌ಗಳ ಗುರಿ ಬೆನ್ನಟ್ಟಿದ ಪುಣೆಗೆ ಉತ್ತಮ ಆರಂಭ ದೊರಕಿತು. ರಹಾನೆ ಹಾಗೂ ಖವಾಜಾ ಮೊದಲ ವಿಕೆಟ್‌ಗೆ 35 ರನ್‌ಗಳ ಜತೆಯಾಟ ನೀಡಿದರು. ಇವರು ಔಟ್ ಆದ ಬಳಿಕ ಕ್ರೀಸ್‌ಗೆ ಇಳಿದ ಬೈಲಿ ಹಾಗೂ ತಿವಾರಿ ಮಧ್ಯಮ ಕ್ರಮಾಂಕದಲ್ಲಿ ಕೊಂಚ ಎಡವಿದರು ಹಾಗೂ ಇವರ ವಿಕೆಟ್ ಅನ್ನು ತಂಡ ಬೇಗನೇ ಕಳೆದುಕೊಂಡಿತು. ನಂತರ ಕ್ರೀಸ್‌ಗೆ ಇಳಿದ ಧೋನಿ ಪಂಜಾಬ್ ಬೌಲರ್‌ಗಳ ಚಳಿ ಬಿಡಿಸಿದರು 32 ಎಸೆತಗಳನ್ನು ಎದುರಿಸಿದ ಅವರು ಐದು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳ ನೆರವಿನಿಂದ 64 ರನ್ ಚಚ್ಚಿದರು. ಇವರಿಗೆ ಪೆರೇರಾ ಉತ್ತಮ ಸಾಥ್ ನೀಡಿದರು.

ಪಂಜಾಬ್ ಉತ್ತಮ ಆರಂಭ:
ಇದಕ್ಕೂ ಮೊದಲು ಟಾಸ್ ಗೆದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರಾಗಿ ಕಣಕ್ಕೆ ಇಳಿದ ಹಾಶಿಮ್ ಆಮ್ಲ ಹಾಗೂ ಮುರಳಿ ವಿಜಯ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಹಿಂದಿನ ಪಂದ್ಯಗಳಲ್ಲಿ ಪ್ಲಾಪ್ ಶೋ ನೀಡಿದ ಆಮ್ಲ ಈ ಪಂದ್ಯದಲ್ಲಿ ಭರ್ಜರಿ ಆಟ ಪ್ರದರ್ಶಿಸಿದರು. 27 ಎಸೆತಗಳಲ್ಲಿ 30 ರನ್ ಗಳಿಸಿದ ಅವರು ಪುಣೆಯ ಬೌಲರ್‌ಗಳನ್ನು ಕಾಡಿದರು. ಎಂಟನೇ ಓವರ್ ತನಕ ಕಾಡಿದ ಈ ಜೋಡಿಗೆ ಆರ್.ಅಶ್ವಿನ್ ಮೊದಲ ಶಾಕ್ ನೀಡಿದರು.

ಆದರೆ ಕ್ರೀಸ್‌ನ ಮತ್ತೊಂದು ತುದಿಯಲ್ಲಿ ಮುರಳಿ ವಿಜಯ್ ಅಬ್ಬರದ ಆಟವನ್ನು ಪ್ರದರ್ಶಿಸಿ ಪಂಜಾಬ್ ರನ್ ಗತಿಯನ್ನು ಹೆಚ್ಚಿಸುತ್ತಿದ್ದರು. ಆಮ್ಲ ಔಟ್ ಆದ ಬಳಿಕ ಕ್ರೀಸ್‌ಗೆ ಇಳಿದ ವೃದ್ಧಿಮಾನ್ ಸಾಹಾ ಕೇವಲ ಮೂರು ರನ್‌ಗೆ ಔಟ್ ಆಗಿ ಪೆವಿಲಿಯನ್ ಸೇರಿದರು. ಬಳಿಕ ಬ್ಯಾಟ್ ಹಿಡಿದ ಗುರುಕೀರತ್ ಸಿಂಗ್ ಉತ್ತಮ ಆಟ ಪ್ರದರ್ಶಿಸಿದರು. ಇಡೀ ಟೂರ್ನಿಯಲ್ಲೇ ಭರ್ಜರಿ ಪ್ರದರ್ಶನ ನೀಡಿದ ಅವರು ಅರ್ಧಶತಕ ದಾಖಲಿಸಿ ಮುರಳಿ ವಿಜಯ್‌ಗೆ ಉತ್ತಮ ಸಾಥ್ ನೀಡಿದರು. ಮತ್ತೊಂದು ತುದಿಯಲ್ಲಿ ಅಬ್ಬರ ಬ್ಯಾಟಿಂಗ್ ನಡೆಸುತ್ತಿದ್ದ ಮುರಳಿ ವಿಜಯ್ ದೊಡ್ಡ ಹೊಡೆತಕ್ಕೆ ಮುಂದಾಗಿ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. 41 ಎಸೆತಗಳ ಅವರ ಇನ್ನಿಂಗ್ಸ್ ನಲ್ಲಿ ಮೂರು ಸಿಕ್ಸರ್ ಸೇರಿದಂತೆ ನಾಲ್ಕು ಬೌಂಡರಿಗಳ ನೆರವಿನಿಂದ 59 ರನ್ ಸಿಡಿಸಿದರು.

ಔಪಚಾರಿಕ ಪಂದ್ಯದಲ್ಲಿ ಸೂಪರ್ ಆಟ ಪ್ರದರ್ಶಿಸಿದ ಮುರಳಿ ವಿಜಯ್ ಹಾಗೂ ಗುರುಕೀರತ್ ಸಿಂಗ್ 58 ರನ್‌ಗಳ ಜತೆಯಾಟ ನೀಡಿದರು. ಇವರ ವಿಕೆಟ್ ಕಳೆದು ಕೊಂಡ ಬಳಿಕ ಪಂಜಾಬ್ ಮತ್ತೆ ಮಧ್ಯಮ ಕ್ರಮಾಂಕದ ವೈಫಲ್ಯ ಕಂಡಿತು. ರಿಷಿ ಧವನ್ ಬಿಟ್ಟರೇ ಬೇರೆ ಯಾವೊಬ್ಬ ಆಟಗಾರ ಕೂಡ ಎರಡಂಕಿ ಮೊತ್ತ ದಾಟಲಿಲ್ಲ. ಬೇಗನೆ ವಿಕೆಟ್ ಕಳೆದು ಕೊಂಡ ಪಂಜಾಬ್, ಪುಣೆಗೆ 173 ರನ್‌ಗಳ ಗುರಿ ನೀಡಿತು.

ಪಂಜಾಬ್‌ನ ಇಬ್ಬರು ಬ್ಯಾಟ್ಸ್ ಮನ್‌ಗಳ ಅಬ್ಬರದ ಬ್ಯಾಾಟಿಂಗ್ ನಡುವೆಯೂ ಪುಣೆ ಬೌಲರ್‌ಗಳು ಸಂಘಟಿತ ಪ್ರದರ್ಶನ ನೀಡಿದರು. ಪುಣೆಯ ಆರಂಭಿಕ ಆಟಗಾರರಿಗೆ ಪೆವಿಲಿಯನ್ ಹಾದಿ ತೋರಿಸಿದ ಆರ್.ಅಶ್ವಿನ್ ಈ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಿತ್ತು ಎಲ್ಲರ ಗಮನ ಸೆಳೆದರು. ಉಳಿದಂತೆ ಅಶೋಕ್ ದಿಂಡಾ, ಪೆರೇರಾ ಹಾಗೂ ಜಂಪಾ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

Comments are closed.