ಮುಂಬೈ

ಲೆಫ್ಟಿನೆಂಟ್‌ ಕರ್ನಲ್‌ ಪುರೋಹಿತ್‌ ಸಿಕ್ಕಿಸಲು ಎಟಿಎಸ್‌ ತಂತ್ರ: ಎನ್‌ಐಎ

Pinterest LinkedIn Tumblr

purohitಮುಂಬಯಿ: ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದ್ದ 2008ರ ಮಾಲೇಗಾಂವ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಉಗ್ರ ನಿಗ್ರಹ ದಳದ ವಿರುದ್ಧ ರಾಷ್ಟ್ರೀಯ ತನಿಖಾ ದಳ ನೀಡಿರುವ ಮತ್ತೊಂದು ಹೇಳಿಕೆ ಭಾರಿ ಸಂಚಲನ ಮೂಡಿಸಿದೆ.

ಸ್ಫೋಟದ ಪ್ರಮುಖ ಆರೋಪಿ ಲೆಫ್ಟಿನೆಂಟ್‌ ಕರ್ನಲ್‌ ಪ್ರಸಾದ್‌ ಶ್ರೀಕಾಂತ್‌ ಪುರೋಹಿತ್‌ ಅವರನ್ನು ಸಿಕ್ಕಿಸುವ ಉದ್ದೇಶದಿಂದ ಮಹಾರಾಷ್ಟ್ರದ ಉಗ್ರ ನಿಗ್ರಹ ದಳ, ಆರ್‌ಡಿಎಕ್ಸ್ ಸ್ಫೋಟಕದ ಕುರುಹುಗಳನ್ನು ಹುಟ್ಟುಹಾಕಿತ್ತು ಎಂದು ಎನ್‌ಐಎ ದೂರಿದೆ.

ಮಾಲೇಗಾಂವ್‌ ಸ್ಫೋಟ ಪ್ರಕರಣ ಸಂಬಂಧ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ಪರಿಷ್ಕೃತ ದೋಷಾರೋಪ ಪಟ್ಟಿ ಸಲ್ಲಿಸಿದ್ದ ಎನ್‌ಐಎ, ಪುರಾವೆಗಳ ಕೊರತೆಯ ಕಾರಣ ನೀಡಿ ಹೊಸ ಜಾರ್ಜ್‌ಶೀಟ್‌ನಿಂದ ಪ್ರಮುಖ ಆರೋಪಿ ಸಾಧ್ವಿ ಪ್ರಾಗ್ಯಾ ಸಿಂಗ್‌ ಠಾಕೂರ್‌ ಮತ್ತು ಇತರ ನಾಲ್ವರ ಹೆಸರುಗಳನ್ನು ಕೈಬಿಟ್ಟಿದೆ.

ಲೆಫ್ಟಿನೆಂಟ್‌ ಕರ್ನಲ್‌ ಪ್ರಸಾದ್‌ ಶ್ರೀಕಾಂತ್‌ ಪುರೋಹಿತ್‌ ಸೇರಿದಂತೆ ಉಳಿದ 9 ಆರೋಪಿಗಳ ವಿರುದ್ಧ ಕಠಿಣ ಮೋಕಾ(ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆ) ಬದಲು ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯಡಿ ಅಡಿ ಆರೋಪಪಟ್ಟಿ ದಾಖಲಿಸಬೇಕು ಎಂದು ಪೂರಕ ದೋಷಾರೋಪ ಪಟ್ಟಿಯಲ್ಲಿ ಎನ್ಐಎ ಶಿಫಾರಸು ಮಾಡಿದೆ.

ಕಾಯಿದೆ ಬದಲಿಸುವುದರಿಂದ ಪೊಲೀಸ್‌ ಅಧಿಕಾರಿಗಳ ಎದುರು ಆರೋಪಿಗಳ ತಪ್ಪೊಪ್ಪಿಗೆ ಹೇಳಿಕೆಗಳು ಹಾಗೂ ಸಾಕ್ಷಿಗಳ ಹೇಳಿಕೆಗಳನ್ನು ಪ್ರಕರಣದ ಸಾಕ್ಷ್ಯಗಳೆಂದು ಪರಿಗಣಿಸಲಾಗದು.

ಎನ್‌ಎಐ ಈ ಪ್ರಕರಣವನ್ನು 2011ರಲ್ಲಿ ತನಿಖೆಗೆ ಕೈಗೆತ್ತಿಕೊಳ್ಳುವ ಮೊದಲು ಮುಂಬಯಿ ಎಟಿಎಸ್‌ ತನಿಖೆ ನಡೆಸಿತ್ತು. 2008ರ ಮುಂಬಯಿ ದಾಳಿಯಲ್ಲಿ ಮೃತಪಟ್ಟ ಎಟಿಎಸ್‌ ಜಂಟಿ ಆಯುಕ್ತ ಹೇಮಂತ್‌ ಕರ್ಕರೆ ನೇತೃತ್ವದಲ್ಲಿ ತನಿಖೆ ನಡೆದಿತ್ತು. ಆಗ ಎಟಿಎಸ್‌ 16 ಜನರ ವಿರುದ್ಧ ಎರಡು ಕಂತುಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ಸೇನಾ ಗುಪ್ತಚರ ಅಧಿಕಾರಿಯಾಗಿದ್ದ ಪುರೋಹಿತ್‌ ಅವರನ್ನು ಸಿಕ್ಕಿಸಲು ಹೇಮಂತ್‌ ಕರ್ಕರೆ ಸಾಕ್ಷ್ಯಗಳನ್ನು ಹುಟ್ಟುಹಾಕಿದ್ದರು. ಉಗ್ರರ ಸುಳಿವು ಪತ್ತೆ ಮಾಡಬೇಕಿದ್ದ ಪುರೋಹಿತ್‌ ಹಿಂದುತ್ವ ಸಂಘಟನೆಗಳ ಜತೆ ಸೇರಿ ಜಿಹಾದಿ ಉಗ್ರರ ವಿರುದ್ಧ ಸೇಡಿಗೆ ಮುಂದಾಗಿದ್ದರು ಎಂದು ಆರೋಪಿಸಲಾಗಿತ್ತು. ಎಟಿಎಸ್‌ ಅಧಿಕಾರಿ ಶೇಖರ್‌ ಬಾಗ್ಡೆ, ಪ್ರಕರಣದ ಮತ್ತೊಬ್ಬ ಆರೋಪಿ ನಿವೃತ್ತಿ ಸೇನಾ ಸಿಬ್ಬಂದಿ ಸುಧಾಕರ್‌ ಚತುರ್ವೇದಿ ಅವರ ಮನೆಯಲ್ಲಿ ಆರ್‌ಡಿಎಕ್ಸ್‌ ಕುರುಹಗಳನ್ನು ಬಿಟ್ಟಿದ್ದರು ಎಂದು ಎನ್‌ಐಎ ಆರೋಪಿಸಿದೆ.

Write A Comment