
ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮನೆಯ ಮುಂದೆ ಅನಿಶ್ಚಿತಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತೇನೆಂದು ಪುಣೆಯ ಯುವಕನೊಬ್ಬ ಬೆದರಿಕೆಯೊಡ್ಡಿದ್ದಾನೆ.
ಲ್ಯಾಬ್ ಟೆಕ್ನಿಷನ್ ಆಗಿರುವ ಸಂದೀಪ್ ಖುರಾಡೆ ಎಂಬಾತ ಮೇ 18ರಂದು ಸಚಿನ್ ನಿವಾಸದ ಮುಂದೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಣೆ ಮಾಡಿದ್ದಾನೆ.
ಸಚಿನ್ ತೆಂಡೂಲ್ಕರ್ ಬ್ರಾಂಡ್ ಅಂಬಾಸಿಡರ್ ಆಗಿದ್ದ ಅಮಿತ್ಎಂಟರ್ಪ್ರೈಸ್ ತನಗೆ ಮೋಸ ಮಾಡಿದೆ ಎಂದು ಆರೋಪಿಸಿ ಸಂದೀಪ್ ಈ ನಡೆಗೆ ಮುಂದಾಗಿದ್ದಾರೆ.
ಸಂದೀಪ್ ಖುರಾಡೆಯ ಮಾವ ಶಿವರಾಜ್ ಪಿಂಜಾನ್ ಎಂಬವರು ಸಂದೀಪ್ ಅವರ ಪಿತ್ರಾರ್ಜಿತ ಆಸ್ತಿಯನ್ನು ಕಬಳಿಸಿ ಅಮಿತ್ ಎಂಟರ್ಪ್ರೈಸಸ್ಗೆ ಮಾರಿದ್ದಾರೆ ಎಂಬುದು ಸಂದೀಪ್ ಅವರ ಆರೋಪ.
ರು. 2 ಕೋಟಿ ಮೌಲ್ಯದ ಆಸ್ತಿಯನ್ನು ರು. 1 ಕೋಟಿ ಬೆಲೆಗೆ ನಾಲ್ಕು ವರ್ಷಗಳ ಹಿಂದೆ ಶಿವರಾಜ್ ಪಿಂಜಾನ್ ಅಮಿತ್ ಎಂಟರ್ಪ್ರೈಸಸ್ಗೆ ಮಾರಿದ್ದರು. ಇದರಲ್ಲಿ ಸಂದೀಪ್ಗೆ ನೀಡಿದ್ದು ಕೇವಲ ರು. 20 ಲಕ್ಷ ಮಾತ್ರ. ಈ ಬಗ್ಗೆ ಬಾಂದ್ರಾ ಪೊಲೀಸರಿಗೆ ಪತ್ರ ಬರೆದಿರುವ ಸಂದೀಪ್, ಈ ಪತ್ರದಲ್ಲಿ ತಮ್ಮ ಸತ್ಯಾಗ್ರಹದ ಬಗ್ಗೆ ಉಲ್ಲೇಖಿಸಿದ್ದಾರೆ.
ತನ್ನ ಉಪವಾಸ ಸತ್ಯಾಗ್ರಹದ ಬಗ್ಗೆ ಗಮನ ಸೆಳೆಯಲು ಮತ್ತು ಪರಿಹಾರ ಕಂಡುಕೊಳ್ಳುವುದಕ್ಕಾಗಿ ತಾನು ಸಚಿನ್ ಮನೆಯನ್ನೇ ಆಯ್ಕೆ ಮಾಡಿದ್ದೇನೆ. ವಿಲ್ಲಾಗಳನ್ನು ನಿರ್ಮಿಸುವುದಕ್ಕಾಗಿಯೇ ಅಮಿತ್ ಎಂಟರ್ ಪ್ರೈಸಸ್ ಆಸ್ತಿ ಖರೀದಿ ಮಾಡಿತ್ತು, ಆದರೆ ತನಗೆ ನ್ಯಾಯ ಸಿಗಬೇಕು ಎಂದು ಸಂದೀಪ್ ಹೇಳಿದ್ದಾರೆ.
ಏತನ್ಮಧ್ಯೆ, ಈ ಆರೋಪಗಳೆಲ್ಲವೂ ನಿರಾಧಾರ. ನಾವು ಖರೀದಿಸಿದ ಆಸ್ತಿಯ ಎಲ್ಲ ಹಕ್ಕುಗಳನ್ನು ಸಂದೀಪ್ ಖುರಾಡೆ ಅವರ ಅಮ್ಮ ರಂಜನ, ಶಿವರಾಜ್ ಪಿಂಜಾನ್ ಅವರಿಗೆ ಹಸ್ತಾಂತರಿಸಿದ್ದರು ಎಂದು ಅಮಿತ್ ಎಂಟರ್ಪ್ರೈಸೆಸ್ ಹೇಳಿದೆ.