ಮನೋರಂಜನೆ

ಮಾಡೆಲ್, ನಟಿ ಮಂದನಾಗೆ ಮಾಧುರಿ ದೀಕ್ಷಿತ್ ಐಡಲ್…

Pinterest LinkedIn Tumblr

Mandana-Karimi-Webಮುಂಬೈ: ನಟಿ ಮಾಧುರಿ ದೀಕ್ಷಿತ್ ಎಂದಾಕ್ಷಣ, ಎಂಥವರನ್ನೂ ಆಕರ್ಷಿಸುವ ಅವರಲ್ಲಿರುವ ದೈವದತ್ತವಾದ ಕಲೆ ನಮ್ಮ ಕಣ್ಮುಂದೆ ನಿಲ್ಲುತ್ತದೆ. ಅಂಥ ಮಾಧುರಿಯ ನೃತ್ಯ, ನಟನೆಯಿಂದ ಸ್ಪೂರ್ತಿ ಪಡೆದುಕೊಂಡವರು, ಅಭಿಮಾನಿಯಾದವರು ಒಬ್ಬಿಬ್ಬರಲ್ಲ ಸಾವಿರಾರು ಮಂದಿ. ಈ ಸಾಲಿಗೆ ಬಾಲಿವುಡ್ ನಟಿ, ಮಾಡೆಲ್ ಮಂದನಾ ಕರಿಮಿ ಕೂಡ ಸೇರಿದ್ದಾರೆ.

ಮುಂಬೈನಲ್ಲಿ ನಡೆಯುತ್ತಿರುವ ‘ಬಿ ಪಾಸಿಟೀವ್’ ಚಿತ್ರದ ಐಟಮ್ ಹಾಡೊಂದರ ಶೂಟಿಂಗ್ನಲ್ಲಿ ಪಾಲ್ಗೊಂಡ ಇರಾನ್ ಮೂಲದ ನಟಿ ಮಂದನಾ ಕರಿಮಿ, ಬಿಡುವಿನ ವೇಳೆಯಲ್ಲಿ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ‘ಮಾಧುರಿ ದೀಕ್ಷಿತ್ ನನ್ನ ಪಾಲಿನ ಐಡಲ್. ಎಲ್ಲರೂ ಇಷ್ಟ ಪಡುವ ಸಾರ್ವಕಾಲಿಕ ನಟಿ. ಅವರ ನೃತ್ಯ, ನಟನೆ ಹಾಗೂ ಅವರಲ್ಲಿನ ಪ್ರತಿಭೆಗೆ ಮನಸೋತಿದ್ದೇನೆ. ನಾನು ಅವರನ್ನು ತುಂಬಾ ಇಷ್ಟಪಡುತ್ತೇನೆ’ ಎಂದಿದ್ದಾರೆ.

ಐಟಮ್ ಹಾಡುಗಳಿಗೆ ಹೆಜ್ಜೆ ಹಾಕಿ, ಜನಪ್ರಿಯತೆ ಗಿಟ್ಟಿಸಿಕೊಳ್ಳುತ್ತಿರುವ ಮಂದನಾ ಕರಿಮಿ, ಬಿಗ್ಬಾಸ್ 9ನೇ ಆವೃತ್ತಿಯಲ್ಲಿ ವಿವಾದಾತ್ಮಕ ಸ್ಪರ್ಧಿಯಾಗಿ ಭಾರಿ ಪ್ರಚಾರ ಪಡೆದುಕೊಂಡಿದ್ದಾರೆ.

ಈಗಾಗಲೇ ನಾಲ್ಕಾರು ಸಿನಿಮಾಗಳಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿರುವ ಮಂದನಾ ‘ಬಿ ಪಾಸಿಟೀವ್’ ಚಿತ್ರದಲ್ಲಿ ಕೇವಲ ಹಾಡೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಹಾಡು ಸಾಕಷ್ಟು ಹಾಸ್ಯ ಭರಿತವಾಗಿದ್ದು, ಕ್ಯಾಮರಾದಲ್ಲಿ ನಾನೇ ಅಚ್ಚರಿ ಪಡುವ ರೀತಿಯಲ್ಲಿ ನನ್ನನ್ನು ತೋರಿಸಲಾಗಿದೆ. ನಾನು ಉತ್ತಮ ಡ್ಯಾನ್ಸರ್ ಅಲ್ಲದೇ ಇದ್ದರೂ, ಮೇಕಿಂಗ್ ಅತ್ಯುತ್ತಮ ವಾಗಿದೆ. ವಿಭಿನ್ನವಾಗಿ ನನ್ನನ್ನು ತೋರಿಸುವ ಪ್ರಯತ್ನ ನಡೆದಿದೆ ಎಂದು ಹೇಳಿಕೊಂಡಿದ್ದಾರೆ.

ಮಂದನಾ ಇದಕ್ಕೂ ಮೊದಲ ರಾಯ್, ಭಾಗ್ ಜಾನಿ, ಕ್ಯಾ ಕೂಲ್ ಹೈನ್ ಹಮ್ 3 ಚಿತ್ರಗಳಲ್ಲಿ ನಟಿಸಿದ್ದಾರೆ.

Write A Comment