ಮನೋರಂಜನೆ

ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಪ್ರತ್ಯೂಷ ಪೋಷಕರ ವಿರುದ್ಧ ಪ್ರಕರಣ ದಾಖಲಿಸಲು ತೀರ್ಮಾನಿಸಿದ್ದಳು ! ಈ ಬಗ್ಗೆ ರಾಹುಲ್ ತಂದೆ ಹೇಳಿದ್ದೇನು…?

Pinterest LinkedIn Tumblr

pratyusha-banerjee-

ಮುಂಬೈ: ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿರುವ ಜನಪ್ರಿಯ ನಟಿ ಪ್ರತ್ಯೂಷ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪ್ರತ್ಯೂಷ ತನ್ನ ಪೋಷಕರ ವಿರುದ್ಧ ಪ್ರಕರಣ ದಾಖಲಿಸಲು ತೀರ್ಮಾನಿಸಿದ್ದಳು ಎಂದು ನಟ ರಾಹುಲ್ ತಂದೆ ಹೇಳಿಕೊಂಡಿದ್ದಾರೆ.

ಏಪ್ರಿಲ್ 1 ರಂದು ನಟಿ ಪ್ರತ್ಯೂಷ ಅವರ ಮೃತದೇಹ ಅವರ ಕೊಠಡಿಯಲ್ಲಿರುವ ಸೀಲಿಂಗ್ ಫ್ಯಾನ್ ನಲ್ಲಿ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಇದೀಗ ಹಲವು ಅನುಮಾನಗಳು ಮೂಡತೊಡಗಿದ್ದು, ಆತ್ಮಹತ್ಯೆಯೋ, ಕೊಲೆಯೋ ಎಂಬುದರ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನು ಪ್ರತ್ಯೂಷ ಸಾವಿನ ಹಿಂದ ರಾಹುಲ್ ಕೈವಾಡವಿರುವುದಾಗಿ ಹಲವರು ಅನುಮಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ರಾಹುಲ್ ನನ್ನು ಬಂಧನಕ್ಕೊಳಪಡಿಸಿದ್ದರು. ಆದರೆ, ತನಿಖೆ ನಡೆಸುತ್ತಿದ್ದ ವೇಳೆ ರಾಹುಲ್ ಎದೆ ನೋವು ಎಂದು ಹೇಳಿದ್ದಾನೆ. ಅಲ್ಲದೆ, ಉಸಿರಾಟ ಸಮಸ್ಯೆಯುಂಟಾಗುತ್ತಿದೆ ಎಂದು ಹೇಳಿಕೊಂಡಿದ್ದಾನೆ.

ಹೀಗಾಗಿ ರಾಹುಲ್ ನನ್ನು ನಿನ್ನೆ ಮಧ್ಯಾಹ್ನ ಕಂದಿವಾಲಿಯಲ್ಲಿರುವ ಶ್ರೀ ಸಾಯಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಹುಲ್ ಪರಿಸ್ಥಿತಿ ಬಗ್ಗೆ ಮಾತನಾಡಿದ್ದ ರಾಹುಲ್ ಪರ ವಕೀಲ ನೀರಜ್ ಗುಪ್ತಾ ಅವರು, ರಾಹುಲ್ ನನ್ನು ಐಸಿಯುನಲ್ಲಿರಿಸಲಾಗಿದೆ. ಆತನ ಸ್ಥಿತಿ ಗಂಭೀರವಾಗಿದೆ. ಪ್ರತ್ಯೂಷ ಸಾವನ್ನಪ್ಪಿದ ದುಃಖದಲ್ಲಿದ್ದ ರಾಹುಲ್ ಖಿನ್ನತೆಗೊಳಗಾಗಿ ಈವರೆಗೂ ಏನನ್ನೂ ತಿಂದಿಲ್ಲ. ರಾಹುಲ್ ಇದೇ ರೀತಿಯಾಗಿ ಮುಂದುವರೆದರೆ ಆತನ ಮಿದುಳಿನಲ್ಲಿ ರಕ್ತಸ್ರಾವವಾಗುವ ಸಾಧ್ಯತೆಗಳಿವೆ ಎಂದು ವೈದ್ಯರು ಹೇಳಿದ್ದಾರೆಂದು ಹೇಳಿಕೊಂಡಿದ್ದಾರೆ.

ಇನ್ನು ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ರಾಹುಲ್ ತಂದೆ ಹರ್ಷವರ್ಧನ್ ಅವರು, ಪ್ರತ್ಯೂಷ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಳು, ಸುಮಾರು ರು. 50 ಲಕ್ಷಕ್ಕೂ ಹೆಚ್ಚು ಹಣವನ್ನು ಆಕೆ ಪೋಷಕರಿಗಾಗಿ ಸಾಲ ಪಡೆದುಕೊಂಡಿದ್ದರು. ರಾಂಚಿಗೆ ಬಂದಾಗ ಪ್ರತ್ಯೂಷ ನನಗೆ ಈ ಸಂಗತಿಯನ್ನು ಹೇಳಿದ್ದಳು.

ಅಲ್ಲದೆ, ರಾಹುಲ್ ನನ್ನು ಮದುವೆಯಾಗುವ ವಿಚಾರವನ್ನು ಹೇಳಿಕೊಂಡಿದ್ದರು. ಆಕೆಗೆ ತನ್ನ ಸ್ವಂತದ್ದು ಎಂಬ ಯಾವುದೇ ಬ್ಯಾಂಕ್ ಖಾತೆಯಿರಲಿಲ್ಲ. ಜಂಟಿ ಖಾತೆಯನ್ನು ಹೊಂದಿದ್ದಳು. ಹಣದ ವ್ಯವಹಾರವನ್ನು ಆಕೆಯ ಪೋಷಕರೇ ನಿಭಾಯಿಸುತ್ತಿದ್ದರು. ಖಾತೆಗೆ ಬರುತ್ತಿದ್ದ ಹಣವನ್ನೆಲ್ಲಾ ಆಕೆಯ ಪೋಷಕರು ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ಪೋಷಕರ ವಿರುದ್ಧ ಪ್ರಕರಣ ದಾಖಲಿಸಲು ತೀರ್ಮಾನಿಸಿದ್ದಳು.

ತೀವ್ರ ಸಂಕಷ್ಟ ಬಂದಾಗ ನನಗೆ ಕರೆ ಮಾಡುತ್ತಿದ್ದರು. ಪ್ರತ್ಯೂಷಗೆ ನಾನು ಹಣವನ್ನು ಕಳುಹಿಸಿಕೊಡುತ್ತಿದ್ದೆ. ಆಕೆಗೆ ನಟನೆಯಿಂದ ಉತ್ತಮ ರೀತಿಯಲ್ಲಿ ಹಣ ಬರುತ್ತಿದ್ದರೆ ಆಕೆ ಯಾವ ಕಾರಣಕ್ಕೆ ಸಾಲ ಮಾಡುತ್ತಿದ್ದಳು. ಈ ಎಲ್ಲಾ ಕಾರಣಗಳಿಂದ ಪ್ರತ್ಯೂಷ ಒತ್ತಡದಲ್ಲಿದ್ದಳು ಎಂದು ಹೇಳಿದ್ದಾರೆ.

ಇನ್ನು ಪ್ರಕರಣ ಸಂಬಂಧ ಕೆಲವು ಊಹಾಪೋಹಗಳು ಕೇಳಿಬಂದಿದ್ದು, ಪ್ರತ್ಯೂಷ ಸಾವನ್ನಪ್ಪಿದ್ದಾಗ 2 ತಿಂಗಳ ಗರ್ಭಿಣಿಯಾಗಿದ್ದಳು ಎಂದು ಹೇಳಲಾಗುತ್ತಿದೆ. ಈ ಊಹಾಪೋಹಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ತನಿಖಾಧಿಕಾರಿಗಳು, ಪ್ರತ್ಯೂಷ ಸಾವನ್ನಪ್ಪಿದ್ದಾಗ ಗರ್ಭಿಣಿಯಾಗಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿಲ್ಲ. ಪ್ರತ್ಯೂಷ ಒಳಾಂಗಗಳ ವರದಿಗಳು ಬರಲು ಇನ್ನು 1 ತಿಂಗಳು ಬೇಕಿದ್ದು, ವರದಿ ಬಂದ ನಂತರವಷ್ಟೇ ಸ್ಪಷ್ಟ ಮಾಹಿತಿ ದೊರೆಯಲಿದೆ. ಒಂದು ವರದಿಯಲ್ಲಿ ಈ ರೀತಿಯಾಗಿ ತಿಳಿದುಬಂದಿದ್ದೇ ಆದರೆ, ಈ ಬಗ್ಗೆ ತನಿಖೆ ನಡೆಸುತ್ತೇವೆಂದು ಹೇಳಿದ್ದಾರೆ.

Write A Comment