ಅಂತರಾಷ್ಟ್ರೀಯ

ಟೂರ್ನಿಯಲ್ಲಿ ಆಡುವುದೇ ಅನುಮಾನ ಎಂಬಂತ್ತಿದ್ದ ತಂಡ ಇದೀಗ ಚಾಂಪಿಯನ್!

Pinterest LinkedIn Tumblr

West Indies winner_Apr 3-2016-028

ನವದೆಹಲಿ: ಟೂರ್ನಿಯಲ್ಲಿ ಪಾಲ್ಗೊಳ್ಳುವುದೇ ಅನುಮಾನ ಎಂಬಂತಿದ್ದ ತಂಡ ಇದೀಗ ವಿಶ್ವ ವಿಜೇತ. ಹಲವು ವಿವಾದಗಳ ನಡುವೆಯೇ ಟೂರ್ನಿಗೆ ಕಾಲಿಟ್ಟಿದ್ದ ವೆಸ್ಟ್ ಇಂಡೀಸ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಇದೀಗ ಟಿ20 ವಿಶ್ವಕಪ್ ಗೆ ಮುತ್ತಿಟ್ಟಿದೆ.

ಕ್ರಿಕೆಟ್ ಸಂಸ್ಥೆಯಲ್ಲಿನ ಒಳ ರಾಜಕೀಯ ಮತ್ತು ವೇತನ ತಾರತಮ್ಯದಿಂದಾಗಿ ಬೇಸತ್ತಿದ್ದ ಆಟಗಾರರು, ಹಲವು ಬಾರಿ ಕ್ರಿಕೆಟ್ ಸಂಸ್ಥೆಗೆ ಚುರುಕು ಮುಟ್ಟಿಸುವ ಪ್ರಯತ್ನ ಮಾಡಿದ್ದರು. ಕ್ರಿಕೆಟ್ ಸಂಸ್ಥೆಯೊಂದಿಗೆ ತಮ್ಮ ಅಸಹಕಾರಾ ಧೋರಣೆಯಿಂದ ಸಂಸ್ಥೆ ಕೆಂಗಣ್ಣಿಗೆ ಗುರಿಯಾಗಿದ್ದರು. ಕ್ರಿಸ್ ಗೇಯ್ಲ್, ಡ್ವೇಯ್ನ್ ಬ್ರಾವೋ, ಸಾಮಿಯಂತಹ ದೈತ್ಯ ಆಟಗಾರರ ಒಂದಷ್ಟು ಗುಂಪು ಸಂಸ್ಥೆ ವಿರುದ್ಧ ಬಂಡಾಯವೆದಿದ್ದರು. ಆಟಗಾರೊಂದಿಗಿನ ಈ ವಿವಾದ ತಾರಕಕ್ಕೇರಿ ವಿಂಡೀಸ್ ಕ್ರಿಕೆಟ್ ಸಂಸ್ಥೆ ಪ್ರಮುಖ ಟೂರ್ನಿಗಳಿಂದ ಈ ಆಟಗಾರರನ್ನು ಕೈಬಿಟ್ಟಿತ್ತು.

ಇದು ವಿವಾದಕ್ಕೆ ತುಪ್ಪ ಸುರಿದಂತಾಗಿತ್ತು. ಇದೇ ಸಂದರ್ಭದಲ್ಲಿ ಐಸಿಸಿ ಟಿ20 ವಿಶ್ವಕಪ್ ವೇಳಾ ಪಟ್ಟಿ ಪ್ರಕಟಗೊಂಡಿತ್ತು. ಅದರಂತೆ ಫೆಬ್ರವರಿಯಲ್ಲಿ ವಿಂಡೀಸ್ ಕ್ರಿಕೆಟ್ ಸಂಸ್ಥೆ ಕಳೆದ ಫೆಬ್ರವರಿಯಲ್ಲಿ ಟಿ20 ವಿಶ್ವಕಪ್ ಗಾಗಿ ತಂಡವನ್ನು ಪ್ರಕಟಿಸಿತ್ತು. ಇದರಿಂದ ರೊಚ್ಚಿಗೆದ್ದಿದ್ದ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳುವುದೇ ಇಲ್ಲ ಎಂದು ಪಟ್ಟು ಹಿಡಿದಿದ್ದರು. ಆಟಗಾರರ ವೇತನ ಬಿಕ್ಕಟ್ಟು ಪರಿಹಾರವಾಗುವ ಮುನ್ನ ತ೦ಡ ಪ್ರಕಟಿಸಿದ್ದಕ್ಕೆ ಆಟಗಾರರು ಕಿಡಿಕಾರಿದ್ದಲ್ಲದೆ, ವಿಶ್ವಕಪ್ ಆಡುವುದಿಲ್ಲ ಎ೦ದು ಪಟ್ಟುಹಿಡಿದಿದ್ದರು.

ಈ ಬಗ್ಗೆ ಬಹಿರಂಗ ಪತ್ರ ಬರೆದ ನಾಯಕ ಸಾಮಿ, ವಿಶ್ವಕಪ್ ಟೂರ್ನಿಯಲ್ಲಿ ದೇಶವನ್ನು ಪ್ರತಿನಿಧಿಸಲು ನಾವು ಉತ್ಸುಕರಾಗಿದ್ದೇವೆ. ಆದರೆ ಮಂಡಳಿಯೊಂದಿಗೆನ ಆರ್ಥಿಕ ವಿವಾದದಿಂದಾಗಿ ನಾವು ಅನಿವಾರ್ಯವಾಗಿ ಕಠಿಣ ನಿಲುವು ತಳೆಯಬೇಕಿದೆ ಎಂದು ಕಿಡಿಕಾರಿದ್ದರು. ಅಲ್ಲದೆ ತಮ್ಮ ಬೇಡಿಕೆಗಳನ್ನು ಸಲ್ಲಿಸಿದ್ದರು. ಈ ವಿಚಾರ ವಿಂಡೀಸ್ ಮಾಧ್ಯಮಗಳಲ್ಲಿ ನಿಜಕ್ಕೂ ಬೆಂಕಿ ಹಚ್ಚಿತ್ತು. ಕ್ರಿಕೆಟ್ ಮಂಡಳಿ ಮತ್ತು ಆಟಗಾರರ ವಿರುದ್ಧ ಪರ-ವಿರೋಧ ಚರ್ಚೆಗಳಾದವು. ವಿಂಡೀಸ್ ಕ್ರಿಕೆಟ್ ಮಂಡಳಿ ಮಾತ್ರ ಸಾಮಿ ಬೇಡಿಕೆಗಳನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು. ಈ ವಿಚಾರ ಟಿ20 ವಿಶ್ವಕಪ್ ನಿಂದ ವೆಸ್ಟ್ ಇಂಡೀಸ್ ತಂಡ ಪಾಲ್ಗೊಳ್ಳುವ ಕುರಿತು ಸಾಕಷ್ಟು ಅನುಮಾನಗಳು ಎದ್ದಿದ್ದವು.

ಇನ್ನೇನು ವಿಶ್ವಕಪ್‍ಗೆ ವಿ೦ಡೀಸ್ ತ೦ಡ ಆಗಮಿಸುವುದಿಲ್ಲ ಎನ್ನುವಾಗಲೇ ಆಟಗಾರರೊಂದಿಗೆ ಸಂಧಾನಕ್ಕಿಳಿದ ವಿಂಡೀಸ್ ಕ್ರಿಕೆಟ್ ಸಂಸ್ಥೆ ಹೊಸ ಒಪ್ಪ೦ದಕ್ಕೆ ಬ೦ದು ತ೦ಡವನ್ನು ಭಾರತಕ್ಕೆ ಕಳುಹಿಸಿಕೊಟ್ಟಿತು. ವೇತನ ಸಮಸ್ಯೆ, ಕ್ರಿಕೆಟ್ ಮ೦ಡಳಿಯ ಆಥಿ೯ಕ ಸ೦ಕಷ್ಟದ ನಡುವೆಯೂ ಒಗಟ್ಟಿನ ಮ೦ತ್ರ ಪಠಿಸಿದ ವಿ೦ಡೀಸ್ ತ೦ಡ ಈಗ ಟಿ20ಯ ವಿಶ್ವ ಚಾ೦ಪಿಯನ್ ಆಗಿ ಹೊರಹೊಮ್ಮಿದೆ.!

Write A Comment