ಮುಂಬೈ: ಆತ್ಮಹತ್ಯೆ ಮಾಡಿಕೊಳ್ಳುವುದು ರೈತರಿಗೆ ಫ್ಯಾಷನ್‌ನಂತೆ ಆಗಿ ಬಿಟ್ಟಿದೆ ಮತ್ತು ಜೀವ ಕಳೆದುಕೊಳ್ಳುವುದು ಟ್ರೆಂಡ್ ಆಗಿದೆ ಎಂದು ಹೇಳುವ ಮೂಲಕ ಮಹಾರಾಷ್ಟ್ರದ ಬಿಜೆಪಿ ಸಂಸದ ಗೋಪಾಲ್ ಶೆಟ್ಟಿ ವಿವಾದ ಸೃಷ್ಟಿಸಿದ್ದಾರೆ.
ಬುಧವಾರ ಬೋರಿವಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಶೆಟ್ಟಿ, ನಿರುದ್ಯೋಗ ಮತ್ತು ಹಸಿವಿನಿಂದಲೇ ಎಲ್ಲ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಆತ್ಮಹತ್ಯೆ ಎಂಬುದು ಫ್ಯಾಷನ್ ಆಗಿ ಬಿಟ್ಟಿದೆ, ಅದೇ ಟ್ರೆಂಡ್ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಮಹಾರಾಷ್ಟ್ರ ಸರ್ಕಾರ ರು. 5 ಲಕ್ಷ ಪರಿಹಾರ ಧನ ನೀಡಿದರೆ, ಪಕ್ಕದ ರಾಜ್ಯಗಳಲ್ಲಿ ರು. 7 ಲಕ್ಷ ನೀಡಲಾಗುತ್ತಿದೆ. ಈ ರೈತರಿಗೆ ಪರಿಹಾರಧನ ನೀಡುವುದರಲ್ಲಿಯೂ ಸರ್ಕಾರಗಳು ಪೈಪೋಟಿ ನಡೆಸುತ್ತಿವೆ ಎಂದು ಶೆಟ್ಟಿ ಹೇಳಿದ್ದಾರೆ.
ಶೆಟ್ಟಿಯವರ ಹೇಳಿಕೆಯನ್ನು ಖಂಡಿಸಿದ ಕಾಂಗ್ರೆಸ್, ಇದು ಬಿಜೆಪಿಗೆ ರೈತರತ್ತ ಇರುವ ನಿಲುವನ್ನು ತೋರಿಸುತ್ತದೆ ಎಂದಿದೆ.
ಬೆಳೆ ನಾಶ, ಸಾಲದಿಂದ ಕಂಗೆಟ್ಟ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿ ಮಹಾರಾಷ್ಟ್ರದಲ್ಲಿ ರೈತರು ಬೆಳೆ ನಾಶದಿಂದ ಕಂಗೆಟ್ಟಿದ್ದಾರೆ. ಹೀಗಿರುವಾಗ ಶೆಟ್ಟಿ ಸಂವೇದನೆಯಿಲ್ಲದ ಹೇಳಿಕೆಯನ್ನು ನೀಡಿದ್ದಾರೆ. ಇದು ಬಿಜೆಪಿ ರೈತರ ಬಗ್ಗೆ ಯಾವ ನಿಲುವು ತೋರಿದೆ ಎಂಬುದಕ್ಕೆ ಹಿಡಿದ ಕನ್ನಡಿ ಎಂದು ಎಂಆರ್‌ಸಿಸಿ ಅಧ್ಯಕ್ಷ ಸಂಜಯ್ ನಿರುಪಮ್ ಹೇಳಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ ಸುಮಾರು 124 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಹಾ ಸರ್ಕಾರ ಬಾಂಬೆ ಹೈಕೋರ್ಟ್‌ಗೆ ಹೇಳಿತ್ತು