ಮುಂಬೈ: ಶೀನಾ ಬೋರಾ ಹತ್ಯೆ ಕುರಿತು ನಿರ್ಮಾಣವಾಗುತ್ತಿರುವ ‘ಡಾರ್ಕ್ ಚಾಕೊಲೇಟ್’ ಚಿತ್ರದ ಟ್ರೈಲರ್ ಹೊರತಾಗಿ ಚಿತ್ರಕ್ಕೆ ಸಂಬಂಧಿಸಿದ ಬೇರೆ ಯಾವುದೇ ವಸ್ತುವನ್ನು ಬಿಡುಗಡೆ ಮಾಡದಂತೆ ಬುಧಾವರ ಬಾಂಬೆ ಹೈಕೋರ್ಟ್ ಚಿತ್ರದ ನಿರ್ಮಾಪಕರಿಗೆ ಮತ್ತು ನಿರ್ದೇಶಕರಿಗೆ ಸೂಚಿಸಿದೆ.
ಬೆಂಗಾಲಿ ಚಿತ್ರ ಡಾರ್ಕ್ ಚಾಕೊಲೇಟ್ ಚಿತ್ರದ ಬಿಡುಗಡೆಗೆ ತಡೆ ಕೋರಿ ಶೀನಾ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪೀಟರ್ ಮುಖರ್ಜಿ ಅವರ ಸಹೋದರಿ ಶಂಗೋಮ್ ದಾಸ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಪ್ರಕರಣದ ವಿಚಾರಣೆ ಬಾಕಿ ಇರುವ ಹಿನ್ನೆಲೆಯಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಟ್ರೈಲರ್ ಹೊರತಾಗಿ ಬೇರೆ ಏನನ್ನು ಬಿಡುಗಡೆ ಮಾಡದಂತೆ ಆದೇಶಿಸಿದೆ.
ವಿಚಾರಣೆ ವೇಳೆ ಹಾಜರಿದ್ದ ಕೋಲ್ಕತಾ ಮೂಲದ ನಿರ್ದೇಶಕ ಅಗ್ನಿದೇವ್ ಚಟರ್ಜಿ ಅವರು, ಚಿತ್ರದ ಚಿತ್ರೀಕರಣ ಮುಗಿದಿದ್ದು, ಡಬ್ಬಿಂಗ್ ಕಾರ್ಯ ನಡೆಯುತ್ತಿದೆ. ಮುಂದಿನ 20 ದಿನಗಳಲ್ಲಿ ಚಿತ್ರ ಸಿದ್ಧವಾಗಲಿದ್ದು, ಬಳಿಕ ಅದನ್ನು ಸೆನ್ಸಾರ್ ಮಂಡಳಿಗೆ ಕಳಿಸಲಾಗುವುದು ಎಂದು ಕೋರ್ಟ್ ಗೆ ತಿಳಿಸಿದರು.
ಚಿತ್ರದ ಪ್ರಚಾರಾರ್ಥವಾಗಿ ಈಗಾಗಲೇ ಟ್ರೈಲರ್ ಅನ್ನು ಇಂಟರ್ ನೆಟ್ ನಲ್ಲಿ ಬಿಡುಗಡೆ ಮಾಡಿದ್ದೇವೆ ಎಂದು ನಿರ್ದೇಶಕರು ಕೋರ್ಟ್ ಗೆ ತಿಳಿಸಿದರು. ಆದರೆ ಇನ್ನು ಮುಂದೆ, ಚಿತ್ರಕ್ಕೆ ಸಂಬಂಧಿಸಿದ ವಿಡಿಯೋ, ಪೋಸ್ಟರ್ ಅಥವಾ ಇತರೆ ವಸ್ತುಗಳನ್ನು ಇಂಟರ್ ನೆಟ್ ಬಿಡುಗಡೆ ಮಾಡದಂತೆ ಕೋರ್ಟ್ ಚಿತ್ರತಂಡಕ್ಕೆ ಸೂಚಿಸಿದೆ.