ಮುಂಬೈ: ಬಾಲಿವುಡ್ ನಲ್ಲಿ ಹೊಸ ಭಾಷ್ಯ ಬರೆದ ಶೋಲೆ ಸಿನಿಮಾದಲ್ಲಿ ನಟ ಧರ್ಮೇಂದ್ರ ಕೈಯಲ್ಲಿ ಶರಾಬು ಬಾಟಲಿ ಹಿಡಿದು ನೀರಿನ ಟ್ಯಾಂಕ್ ನ ತುತ್ತತುದಿಗೆ ಏರಿ ರಂಪಾಟ ನಡೆಸುವ ದೃಶ್ಯದ ಬಗ್ಗೆ ಎಲ್ಲರಿಗೂ ಗೊತ್ತು.
ಆದರೆ ಇದೀಗ ಕುಡಿಯುವ ನೀರಿಗಾಗಿ ಆಗ್ರಹಿಸಿ ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆಯ ಮರಾಠವಾಡದ ಕೆಲವು ಗ್ರಾಮಸ್ಥರು ಶೋಲೆ ಸಿನಿಮಾದಲ್ಲಿ ಧರ್ಮೇಂದ್ರ ಮಾಡಿದಂತೆಯೇ ತಾವೂ ಕೂಡಾ ನೀರಿನ ಟ್ಯಾಂಕ್ ಏರಿ ವಿನೂತನವಾಗಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಜಾಯ್ಕ್ ವಾಡಿ ಡ್ಯಾಂನಿಂದ ನೀರು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಕೆಲವು ಗ್ರಾಮಸ್ಥರು ನೀರಿನ ಟ್ಯಾಂಕ್ ತುತ್ತತುದಿಗೆ ಏರಿ ನೀರು ಸರಬರಾಜು ಮಾಡಬೇಕೆಂದು ಒತ್ತಾಯಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಕೆಲವು ವರ್ಷಗಳಿಂದ ಮರಾಠವಾಡದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಆದರೆ ನೀರಿನ ಕೊರತೆಯಿಂದಾಗಿ ಜಾಯ್ಕ್ ವಾಡಿ ಡ್ಯಾಂನಲ್ಲಿ ನೀರಿನ ಸಂಗ್ರಹ ಇಲ್ಲದೆ ಬಂದ್ ಮಾಡಲಾಗಿದೆ. ಹಾಗಾಗಿ ಡ್ಯಾಂನಲ್ಲಿ ಮತ್ತೆ ನೀರನ್ನು ಸಂಗ್ರಹಿಸಿ ಗ್ರಾಮಗಳಿಗೆ ನೀರು ಸರಬರಾಜು ಮಾಡಬೇಕೆಂದು ಆಗ್ರಹಿಸಿದ್ದಾರೆ.
ಮಹಾರಾಷ್ಟ್ರದ ಉತ್ತರ ಭಾಗ, ಅಮರಾವತಿ ಮತ್ತು ನಾಗಪುರ್ ದಲ್ಲಿ ನೀರಿನ ಅಭಾವ ತೀವ್ರವಾಗಿದೆ ಎಂದು ವರದಿ ವಿವರಿಸಿದೆ.
-ಉದಯವಾಣಿ