ಅಂತರಾಷ್ಟ್ರೀಯ

ಭೂತಾನ್‌ಗೆ ನವ ರಾಜ ಕುವರ; ದೊರೆ ದಂಪತಿಗೆ ಗಂಡು ಮಗು ಜನನ

Pinterest LinkedIn Tumblr

Bhutan-King-Queen-600ಥಿಂಪು : ಭೂತಾನ್‌ ದೊರೆ ದಂಪತಿಗೆ ಚೊಚ್ಚಲ ಗಂಡು ಮಗು ಹುಟ್ಟಿದ್ದು, ಈ ನವಜಾತ ರಾಜ ಕುವರನು ದೇಶದ ಸ್ವರ್ಣ ಸಿಂಹಾಸನದ ಉತ್ತರಾಧಿಕಾರಿಯಾಗಿದ್ದಾನೆ; ಹಾಗಾಗಿ ದೇಶದಲ್ಲೀಗ ಸಂಭ್ರಮಾಚರಣೆಯ ವಾತಾವರಣ ಸೃಷ್ಟಿಯಾಗಿದೆ.

ಭೂತಾನ್‌ ರಾಜಧಾನಿಯಲ್ಲಿರುವ ಲಿಂಕಾನಾ ಅರಮನೆಯಲ್ಲಿ ದೊರೆ ಜಿಗ್‌ಮೇ ಖೇಸರ್‌ ನ್ಯಾಮ್‌ಗೆಲ್‌ ವಾಂಗ್‌ಚುಕ್‌ ಮತ್ತು ರಾಣಿ ಜೆತ್ಸುನ್‌ ಪೆಮಾ ದಂಪತಿಗೆ ಶುಕ್ರವಾರ ಗಂಡು ಮಗುವಿನ ಜನನವಾಯಿತು. ಇಡಿಯ ರಾಜ ಕುಟುಂಬಕ್ಕೆ, ಬಂಧುಗಳಿಗೆ, ಹಿತೈಷಿಗಳಿಗೆ ಮುಂತಾಗಿ ಎಲ್ಲರಿಗೂ ಸಂತಸ, ಸಂಭ್ರಮ ಉಂಟಾಯಿತು ಎಂದು ದೊರೆಯ ಮಾಧ್ಯಮ ಕಾರ್ಯಾಲಯ ಪ್ರಕಟಿಸಿದೆ.

ಗಂಡು ಮಗುವಿನ ಜನನವಾದೊಡನೆಯೇ ಭೂತಾನೀ ಸಂಪ್ರದಾಯದ ಪ್ರಕಾರ ಎಲ್ಲ ಪವಿತ್ರ ವಿಧ್ಯುಕ್ತ ಪ್ರಕ್ರಿಯೆಗಳನ್ನು ನೆರವೇರಿಸಲಾಯಿತು. ದೇಶದ ಬಹುಸಂಖ್ಯಾಕ ಬೌದ್ಧ ಸಮುದಾಯದವರ ಆಧ್ಯಾತ್ಮಿಕ ನಾಯಕ ಮತ್ತು ಮುಖ್ಯ ಪುರೋಹಿತ ಜೇ ಖೇನ್‌ಪೋ ಅವರ ಮುಂದಾಳುತ್ವದಲ್ಲಿ ಈ ಧಾರ್ಮಿಕ ವಿಧ್ಯುಕ್ತ ಪ್ರಕ್ರಿಯೆಗಳು ಸಾಂಗವಾಗಿ ನೆರವೇರಿದವು.

ದೊರೆ ದಂಪತಿಗೆ ಗಂಡು ಮಗು ಹುಟ್ಟುವ ಮೂಲಕ ಅರಸು ಮನೆತನದ ಸ್ವರ್ಣ ಸಿಂಹಾಸನಕ್ಕೆ ಉತ್ತರಾಧಿಕಾರಿ ಪ್ರಾಪ್ತವಾದುದಕ್ಕೆ ದೇಶದ ಪ್ರಧಾನಿ ಲಿಯೋನ್‌ಶೋಯೆನ್‌ ಶೆರಿಂಗ್‌ ತೋಬ್‌ಗà ಅವರು ಸಂತಸ ವ್ಯಕ್ತಪಡಿಸಿ ನವಜಾತ ಶಿಶುವಿನ ಆಗಮನವನ್ನು ಸ್ವಾಗತಿಸಿದ್ದಾರೆ.

ದೊರೆ ದಂಪತಿಗೆ ಗಂಡು ಮಗು ಜನಿಸಿರುವ ಪ್ರಯುಕ್ತದ ಸಂಭ್ರಮಾಚರಣೆಗಾಗಿ ಸೋಮವಾರ (ಫೆ.8) ರಾಷ್ಟ್ರೀಯ ರಜಾ ದಿನ ಘೋಷಿಸಲು ಭೂತಾನ್‌ ಸರಕಾರ ನಿರ್ಧರಿಸಿದೆ.

35ರ ಹರೆಯದ ಈಗಿನ ದೊರೆ ನ್ಯಾಮ್‌ಗೆಲ್‌ ಅವರನ್ನು 2008ರಲ್ಲಿ ದೇಶದ ಐದನೇ ದೊರೆಯಾಗಿ ಪಟ್ಟಾಭಿಷೇಕ ಮಾಡಲಾಗಿತ್ತು. 25ರ ಹರೆಯದ ರಾಣಿ ಪೆಮಾ ಅವರನ್ನು ದೊರೆ ನ್ಯಾಮ್‌ಗೆಲ್‌ ಅವರು 2011ರಲ್ಲಿ ವಿವಾಹವಾಗಿದ್ದರು.
-ಉದಯವಾಣಿ

Write A Comment