

ಡಾ| ಡಿ. ವೀರೇಂದ್ರ ಹೆಗ್ಡೆಯವರಿಂದ ರಾಷ್ಟ್ರೀಯ ಬಂಟ ಮಹಾ ಸಮ್ಮೇಳನ – 2016 ಕ್ಕೆ ಅದ್ಧೂರಿ ಚಾಲನೆ
__ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್.
ಮಂಗಳೂರು : ಶಿಕ್ಷಣ ಕ್ಷೇತ್ರ ಸೇರಿದಂತೆ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ,ರಾಜಕೀಯ, ಅರ್ಥಿಕ, ಸಾಹಿತ್ಯ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಬಂಟ ಸಮುದಾಯದ ಕೊಡುಗೆ ಅಪಾರ. ಪ್ರತಿಯೊಂದು ಕ್ಷೇತ್ರದಲ್ಲೂ ಅನನ್ಯ ಸಾಧನೆ ದಾಖಲಿಸುತ್ತಾ ಮುಂಚೂಣಿಯಲ್ಲಿರುವ ಬಂಟ ಸಮಾಜದಲ್ಲಿ ಅಪರಿಮಿತ ಉತ್ಸಾಹ, ಸಾಹಸ ಪ್ರಜ್ಞೆ, ಧೈರ್ಯ, ಬುದ್ಧಿಶಕ್ತಿ, ಪರಾಕ್ರಮದೊಂದಿಗೆ ನಾಯಕತ್ವ ಗುಣ ಕೂಡ ರಕ್ತಗತವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಡೆಯವರು ಹೇಳಿದರು.
ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.) ಇದರ ಅಶ್ರಯದಲ್ಲಿ ಮಂಗಳೂರು ಪುರಭವನ ಆವರಣದಲ್ಲಿ ನಿರ್ಮಿಸಲಾದ ಮುಲ್ಕಿ ಸುಂದರ ರಾಮ ಶೆಟ್ಟಿ ನಗರದ, ಜಸ್ಟಿಸ್ ಕೆ. ಎಸ್. ಹೆಗ್ಡೆ ಸಭಾಂಗಣದಲ್ಲಿ ನಾಡೋಜ ಕೈಯಾರ ಕಿಂಜ್ಞಣ್ಣ ರೈ ವೆದಿಕೆಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾದ ತುಳು ಕನ್ನಡ ಹಿರಿಯ ಸಾಹಿತಿ ಡಾ| ಡಿ. ಕೆ. ಚೌಟ ಇವರ ಅಧ್ಯಕ್ಷತೆಯಲ್ಲಿ ನಡೆದ “ರಾಷ್ಟ್ರೀಯ ಬಂಟ ಮಹಾಸಮ್ಮೇಳನ – 2016” ನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಧಿಸುವ ಚಲವಿದ್ದರೆ ಯಾವೂದೇ ಸಾಧನೆಯನ್ನು ಮಾಡಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ಬಂಟ ಸಮಾಜ. ಪ್ರತಿಯೊಂದು ಕ್ಷೇತ್ರಗಳ ಸಾಧನೆಯೊಂದಿಗೆ ಶಿಕ್ಷಣ ಕ್ಷೇತ್ರಕ್ಕೆ ಬಂಟ ಸಮಾಜ ನೀಡಿದ ಮಹತ್ವದ ಕೊಡುಗೆಗೆ ಬಂಟ ಸಮಾಜದ ಮಹನೀಯರನ್ನು ಅಭಿನಂಧಿಸುವುದಾಗಿ ಹೆಗ್ಡೆಯವರು ಹೇಳಿದರು.

ದೈವ ಚಿತನಂ :
ಭವಂತನ ಮೇಲೆ ಅಪಾರವಾದ ನಂಬಿಕೆ ಇದ್ದಾಗ ನಮ್ಮ ಕೆಲಸ ಕಾರ್ಯ ಈಡೇರುತ್ತದೆ. ಇದಕ್ಕೆ ದೈವನುಗ್ರಹ ಕೂಡ ಬೇಕು. ಇಲ್ಲಿ ಕೃಷಿ ಮತ್ತು ಭೂತರಾಧನೆಗೆ ಬಹಳ ಮಹತ್ವ ಇದೆ. ಅದನ್ನು ಉಳಿಸಿ ಬೆಳೆಸಿಕೊಳ್ಳುವ ಕೆಲಸವಾಗಬೇಕಿದೆ ಎಂದು ಹೆಗ್ಡೆಯವರು ಹೇಳಿದರು. ಇಂದಿನ ದಿನಗಳಲ್ಲಿ ಅಳಿಯಕಟ್ಟಿನಿಂದ ಅನೇಕ ಬದಲಾವಣೆಗಳಾಗಿದ್ದು, ಇದೀಗ ವರದಕ್ಷಿಣೆ ಪದ್ಧತಿ ಬಹಳಷ್ಟು ಕಡಿಮೆಯಾಗಿದೆ. ಉತ್ತಮ ಶಿಕ್ಷಣದಿಂದ ಸಾಮಾಜಿಕ ಪರಿವರ್ತನೆ ಸಾಧ್ಯ ಎಂದ ಅವರು, ಮಹಿಳೆಗೆ ನೀಡುವ ಉತ್ತಮ ಶಿಕ್ಷಣವೇ ವರದಕ್ಷಿಣೆ ( ವಧು ದಕ್ಷಿಣೆ) ಎಂದು ಅಭಿಪ್ರಾಯ ಪಟ್ಟರು.
ಪಾಶ್ಚಾತ್ಯ ಸಂಸ್ಕೃತಿಯೊಂದಿಗೆ ನಮ್ಮ ಸಂಸ್ಕೃತಿಯನ್ನು ಕೂಡ ಉಳಿಸಿ,ಬೆಳೆಸಿ :
ನಮ್ಮವರು ಜೀವನದಲ್ಲಿ ಪಾಶ್ಚಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದು ತಪ್ಪಲ್ಲ. ಹಾಡು, ನೃತ್ಯ,ಕಲೆ ಮುಂತಾದ ಯವೂದೇ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲ್ಲಿ. ಆದರೆ ಪ್ರತಿಯೊಬ್ಬರು ಪಾಶ್ಚಾತ್ಯ ಸಂಸ್ಕೃತಿಯನ್ನು ಹೊರಗಿನಿಂದ ಅಳವಡಿಸಿಕೊಳ್ಳಿ. ಒಳಗಿನಿಂದ ಮಾತ್ರ ನಮ್ಮ ಭಾರತೀಯ ಅಪ್ಪಟ್ಟ ಸಂಸ್ಕೃತಿಯನ್ನೇ ಅಳವಡಿಸಿಕೊಳ್ಳುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕು ಎಂದು ಹೆಗ್ಡೆಯವರು ಕರೆ ನೀಡಿದರು.ನಾವು ತುಳುವರು ಯಾವೂದೇ ದೇಶದ ಸಂಸ್ಕೃತಿಯೊಂದಿಗೆ ಬೆರೆತರೂ ನಮ್ಮ ಮೂಲ ಸ್ವಭಾವ, ಮೂಲ ವಿಚಾರ, ಮೂಲ ಸಂಸ್ಕೃತಿಯನ್ನು ಮರೆಯ ಬಾರದು. ಅದನ್ನು ಉಳಿಸಿ, ಬೆಳೆಸುವ ಮೂಲಕ ತುಳುವರಾಗಿಯೇ ಇರೊಣ ಎಂದು ಅವರು ಹೇಳಿದರು.


ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ನ ಚೇರ್ಮನ್ ಶ್ರೀ ಎ. ಸದಾನಂದ ಶೆಟ್ಟಿ ಪ್ರಸ್ತಾವನೆಗೈದರು. ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಬಂಟ ಸಮುದಾಯದ ಬಂಧು-ಭಾಂದವರನ್ನು ಒಂದೇ ಚಪ್ಪರದಡಿ ತಂದು ವಿಚಾರವಿನಿಮಯ ಮಾಡಿ, ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಊಟೋಪಚಾರದ ಅತಿಥ್ಯ ನೀಡಿ, ಸ್ನೇಹ ಸೌಹಾರ್ಧತೆಯ ಬೆಸುಗೆಯನ್ನು ಬಲಪಡಿಸುತ್ತಾ, ಬಂಟ ಸಮಾಜದ ಶ್ರೀಮಂತ ಸಂಸ್ಕ್ರತಿಯ ಹಿರಿಮೆಯನ್ನು ಜಗದಗಲ ಪಸರಿಸುವ ಸಲುವಾಗಿ ಏರ್ಪಡಿಸಿರುವ ಸಮಾಜ ಸಾಮರಸ್ಯ ಮತ್ತು ಜನ ಜಾಗೃತಿಯ ವಿಶಿಷ್ಟ ಕಾರ್ಯಕ್ರಮವೇ ಈ ರಾಷ್ಟ್ರೀಯ ಬಂಟ ಮಹಾಸಮ್ಮೇಳನ ಎಂದು ಸದಾನಂದ ಶೆಟ್ಟಿಯವರು ಹೇಳಿದರು.
2015 ಫೆಬ್ರವರಿ 7ರಂದು ಬಂಟಸಿರಿ ಕಲಾವೈಭವದೊಂದಿಗೆ ಅದ್ಧೂರಿಯಾಗಿ ಆರಂಭಗೊಂಡ ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.) ಬಂಟ ಹಾಗೂ ಇತರ ಸಮಾಜದ ಉನ್ನತೀಕರಣಕ್ಕಾಗಿ ನಿರಂತರ ಅರ್ಪಣಾ ಮನೋಭಾವದಿಂದ ಸೇವಾ ನಿರತವಾಗಿದೆ. ಉನ್ನತ, ಶಿಕ್ಷಣ, ವೈದ್ಯಕೀಯ ಸೇವೆ, ಕಲೆ, ಸಾಹಿತ್ಯ, ಕ್ರೀಡೆ ಮಾತ್ರವಲ್ಲದೆ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ ಒತ್ತು ನೀಡಿದೆ. ಯುವಜನಾಂಗದ ಪ್ರತಿಭೆ, ಕ್ರೀಡಾಸಾಮರ್ಥ್ಯ ಮತ್ತು ನಾಯಕತ್ವ ಗುಣಗಳ ಪ್ರದರ್ಶನಕ್ಕೆ ವಿಪುಲ ಅವಕಾಶವನ್ನು ಕಲ್ಪಿಸಿ ತನ್ನ ಧ್ಯೇಯೋದ್ಧೇಶಗಳ ಪಥದಲ್ಲಿ ಸದೃಢ ಹೆಜ್ಜೆಗಳನನಿಟ್ಟು ಸಾಗುತ್ತಿದೆ.
ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.) ಸ್ಥಾಪನೆಗೊಂಡನಿಂದ ಸಾಮಾಜಿಕ ಸ್ಪಂದನಾ ಕಾರ್ಯಕ್ರಮಗಳಾದ ಶೈಕ್ಷಣಿಕ ತರಬೇತಿ, ಪರೀಕ್ಷಾಪೂರ್ವ ಕಾರ್ಯಾಗಾರ, ಪ್ರೊಕಬ್ಬಡಿ, ಸಾಧಕರ ಸನ್ಮಾನ, ನೂರಕ್ಕೂ ಮಿಕ್ಕಿ ಬಂಟ ಹಾಗೂ ಇತರ ಸಮಾಜದ ಸಂತ್ರಸ್ತ ಫಲಾನುಭವಿಗಳಿಗೆ ಧನ ಸಹಾಯ ವಿತರಣೆ ಇತ್ಯಾದಿ ಕಲ್ಯಾಣ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ಈ ಸೇವಾ ಕೈಂಕರ್ಯದಲ್ಲಿ ದೇಶ-ವಿದೇಶದ ಎಲ್ಲಾ ಸಹೃದಯ ಸಾಧಕರನ್ನು ಸಂಪೂರ್ಣವಾಗಿ ಒಳಗೊಳ್ಳಬೇಕೆಂಬುವುದು ನಮ್ಮ ಸದಾಶಯವಾಗಿದೆ ಎಂದು ಸದಾನಂದ ಶೆಟ್ಟಿ ಹೇಳಿದರು.
ಶ್ರೀ ಗುರುದೇವದತ್ತ ಸಂಸ್ಥಾನಂನ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ವಜ್ರದೇಹಿ ಮಠ ಗುರುಪುರದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಶ್ರೀ ಬಾರ್ಕೂರು ಬಂಟ ಮಹಾಸಂಸ್ಥಾನ ಶ್ರೀ ಶ್ರೀ ಶ್ರೀ ವಿದ್ಯಾವಾಚಸ್ಪತಿ ಡಾ| ವಿಶ್ವ ಸಂತೋಷ ಭಾರತಿ ಶ್ರೀ ಪಾದಂಗಳು ಸ್ವಾಮೀಜಿ ಮೊದಲಾದವರು ಸಮ್ಮೇಳದಲ್ಲಿ ಭಾಗವಹಿಸಿ ಸಂತ ಸಂದೇಶ ನೀಡಿದರು.
ಪುರಭವನದ ಎರಡೂ ಬದಿಯಲ್ಲಿ ಅತಿಥಿಗಳನ್ನು ಹಾಗೂ ಪ್ರತಿನಿಧಿಗಳನ್ನು ಸ್ವಾಗತಿಸಲು ಕೆ. ಬಿ. ಜಯಪಾಲ ಶೆಟ್ಟಿ ಮತ್ತು ಕಲ್ಲಾಡಿ ವಿಠಲ ಶೆಟ್ಟಿ ಹೆಸರಿನ ಮಹಾದ್ವಾರವನ್ನು ನಿರ್ಮಿಸಲಾಗಿತ್ತು.

ಡಾ| ಎನ್. ವಿನಯ ಹೆಗ್ಡೆಯವರಿಂದ ಸದಾಶಯ – ಮುಖವಾಣಿ ಬಿಡುಗಡೆ :
ಇಂದಿನ ಬಹುಮಾಧ್ಯಮ ಯುಗದಲ್ಲಿ ಪ್ರಚಾರದೃಷ್ಟಿಯಿಂದಲ್ಲವಾದರೂ ಟ್ರಸ್ಟ್ ನಡೆಸುತ್ತಿರುವ ಜನಯೋಪಯೋಗಿ ಕಾರ್ಯಕ್ರಮಗಳು ಬೇರೆ ಬೇರೆ ಸ್ತರಗಳಲ್ಲಿ ಜನಮಾನಸಕ್ಕೆ ತಲುಪಬೇಕೆಂಬ ಉದ್ದೇಶದಿಂದ ಅಲ್ಲದೆ ಶಿಕ್ಷಣ, ಉದ್ಯೋಗ ಹಾಗೂ ವ್ಯವಹಾರಿಕವಾಗಿ ಹೊರನಾಡು ಹಾಗೂ ಸಾಗರದಾಚೆ ನೆಲೆಸಿದವರ ಮತ್ತು ತಾಯ್ನಾಡಿಗರಾದ ನಮ್ಮ ಸಂಬಂಧ ಪರಿಚಯಗಳನ್ನು ಗಟ್ಟಿಗೊಳಿಸುವ ಆಶಯದಿಂದ ದಿಟ್ಟ ಹೆಜ್ಜೆಯನ್ನಿರಿಸಿ ಭಾಸ್ಕರ್ ರೈ ಕುಕ್ಕುವಳ್ಳಿಯವರ ಸಂಪಾದಕತ್ವದೊಂದಿಗೆ ಸದಾಶಯ ಎಂಬ ತ್ರೈಮಾಸಿಕ ಪತ್ರಿಕೆಯನ್ನು ಟ್ರಸ್ಟ್ ಹೊರತಂದಿದ್ದು, ಅದರ ಚೊಚ್ಚಲ ಸಂಚಿಕೆಯನ್ನು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ| ಎನ್. ವಿನಯ ಹೆಗ್ಡೆಯವರು ಸಮಾರಂಭದಲ್ಲಿ ಬಿಡುಗಡೆಗೊಳಿಸಿದರು.
ಸಮ್ಮೇಳನದ ಕಾರ್ಯಾಧ್ಯಕ್ಷರು ಹಾಗೂ ಮಾಜಿ ಸಚಿವರು ಆದ ಶ್ರೀ ಕೆ. ಅಮರನಾಥ ಶೆಟ್ಟಿ, ಟ್ರಸ್ಟ್ನ ಸಲಹೆಗಾರ ಸಂಸದ ನಳಿನ್ ಕುಮಾರ್ ಕಟಿಲ್, ನಗರದ ಖ್ಯಾತ ಉದ್ಯಮಿ ಶ್ರೀ ಎ. ಜೆ. ಶೆಟ್ಟಿ ಎ.ಜೆ. ಸಮೂಹ ಸಂಸ್ಥೆ ಮಂಗಳೂರು, ಶ್ರೀ ಪ್ರಕಾಶ್ ಶೆಟ್ಟಿ ಎಂ.ಆರ್.ಜಿ. ಗ್ರೂಪ್ ಬೆಂಗಳೂರು, ಶ್ರೀ ಸುಧೀರ್ ವಿ. ಶೆಟ್ಟಿ ಚೆರಿಷ್ಮಾ ಬಿಲ್ಡರ್ಸ್ ಮುಂಬೈ, ಶ್ರೀ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಹಿರಿಯ ಸಾಹಿತಿ, ಶ್ರೀ ಸರ್ವೋತ್ತಮ ಶೆಟ್ಟಿ ಯು.ಎ.ಇ., ಖ್ಯಾತ ಚಲನಚಿತ್ರ ನಟ ಶ್ರೀ ಪ್ರಕಾಶ್ ರೈ, ಶ್ರೀ ಸುಂದರ್ ಶೆಟ್ಟಿ ಯು.ಎಸ್.ಎ, ಸುಧಾರಾಮ್ ರೈ ವಾಷಿಂಗ್ಟನ್, ಪಾದೆ ಅಜಿತ್ ರೈ ಮುಂಬಾಯಿ, ರೋಹಿತ್ ಹೆಗ್ಡೆ ಮುಂಬಾಯಿ, ಡಾ.ಭಾಸ್ಕರ್ ಶೆಟ್ಟಿ, ಹೈದಾರ್ಬಾದ್ ಘಟಕದ ಅಧ್ಯಕ್ಷ ರತ್ನಾಕರ್ ರೈ, ಪುಣೆ ಘಟಕದ ಅಧ್ಯಕ್ಷ ಸಂತೋಷ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಪುಣೆ, ಬೆಂಗಳೂರು ಘಟಕದ ಅಧ್ಯಕ್ಷ ಸದಾನಂದ ಶೆಟ್ಟಿ ಸಿ.ಎ. ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಟ್ರಸ್ಟ್ನ ಸಂಚಾಲಕ ರಾಜ್ಗೋಪಾಲ್ ರೈ, ಶ್ರೀ ದೇವಿ ಎಜುಕೇಶನ್ ಟ್ರಸ್ಟ್ನ ಕಾರ್ಯದರ್ಶಿ ಮೈನಾ ಶೆಟ್ಟಿ, ವಿಜಯಲಕ್ಷ್ಮೀ ಬಿ.ಶೆಟ್ಟಿ, ಸುರೇಶ್ಚಂದ್ರ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ರೋಹಿತ್ ಹೆಗ್ಡೆ, ಪ್ರದೀಪ್ ಆಳ್ವ, ಟ್ರಸ್ಟ್ನ ಯುವ ವಿಭಾಗದ ಅಧ್ಯಕ್ಷ ದೇವಿಚರಣ್ ಶೆಟ್ಟಿ ಹಾಗೂ ಟ್ರಸ್ಟ್ನ ವಿವಿಧ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ವಸಂತ್ ಕುಮಾರ್ ಶೆಟ್ಟಿಯವರು ಸ್ವಾಗತಿಸಿ, ಟ್ರಸ್ಟ್ನ ಕಾರ್ಯಾಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಭಾಸ್ಕರ್ ರೈ ಕುಕ್ಕುವಳ್ಳಿಯವರು ಸದಾಶಯ ತ್ರೈಮಾಸಿಕ ಪತ್ರಿಕೆಯ ಬಗ್ಗೆ ಮಾಹಿತಿ ನೀಡಿದರು.ಕದ್ರಿ ನವನೀತ ಶೆಟ್ಟಿ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು.ಪುರುಷೋತ್ತಮ ಭಂಡಾರಿ ಅಡ್ಯಾರು ಹಾಗೂ ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಭಾಕಾರ್ಯಕ್ರಮದ ಬಳಿಕ ನಾಡಿನ ವಿವಿಧ ಬಂಟ ಕಲಾ ತಂಡಗಳಿಂದ ತುಳುನಾಡ ವೈಭವವನ್ನು ಪ್ರತಿಬಿಂಬಿಸಬಲ್ಲ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ಕಟೀಲು ಮೇಳದ ಆಯ್ದ ಕಲಾವಿದರಿಂದ ಬಂಟ ಸಮಾಜದ ವಿರಾಟ್ ಸ್ವರೂಪವನ್ನು ಸಾಕ್ಷಾತ್ಕರಿಸುವ ಭವ್ಯ ಕಾರ್ಯಕ್ರಮ ಮಹಿಷಾಸುರ ಮರ್ದಿನಿ ಯಕ್ಷಗಾನ ಬಯಲಾಟ ಜರುಗಿತು.
ನಾಳೆ ಮಹಿಳಾ ಸಮಾವೇಶ :
ಫೆಬ್ರವರಿ 7ರಂದು ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಅವರ ನೇತ್ರತ್ವದಲ್ಲಿ ಮಹಿಳಾ ಸಮಾವೇಶ ಜರುಗಲಿದೆ. ಕಾರ್ಯಕ್ರಮದಲ್ಲಿ ಭಕ್ತಿಗೀತೆ, ಭಾವಗೀತೆ ಕಾರ್ಯಕ್ರಮ ಜರುಗಲಿದೆ. ಪೂರ್ವಾಹ್ನ 09.30ರಿಂದ ರಾಜ್ಯದಾದ್ಯಂತದಿಂದ ವಿವಿಧ ಬಂಟ ಸಂಘಗಳ ಮಹಿಳಾ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಡಾ| ಕೃಪಾ ಅಮರ್ ಆಳ್ವ ಅಧ್ಯಕ್ಷರು, ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ ಇವರು ಮಹಿಳಾ ಸಮಾವೇಶವನ್ನು ಉದ್ಘಾಟಿಸಲಿದ್ದು, ಡಾ| ಧರಣಿ ದೇವಿ ಮಾಲಗತ್ತಿ ಪೊಲೀಸ್ ಉಪ ಅಧೀಕ್ಷಕರು, ಮೈಸೂರು ಇವರು ಅಧ್ಯಕ್ಷತೆ ವಹಿಸಲಿದ್ದಾರೆ.
ನಾಳೆ ಸಂಜೆ ಸಮಾರೋಪ ಸಮಾರಂಭ : ಫೆ.7ರಂದು ಸಂಜೆ 05.00ಘಂಟೆಗೆ ರಾಷ್ಟ್ರೀಯ ಬಂಟ ಮಹಾ ಸಮ್ಮೇಳನ – 2016ರ ಸಮಾರೋಪ ಸಮಾರಂಭ ಜರುಗಲಿದೆ. ಫ್ರೊ. ಡಾ| ಬಿ. ಎಂ. ಹೆಗ್ಡೆ ವಿಶ್ರಾಂತ ಕುಲಪತಿಗಳು, ಮಾಹೆ ವಿಶ್ವವಿದ್ಯಾನಿಲಯ ಇವರು ಸಮಾರೋಪ ಭಾಷಣ ಮಾಡಲಿದ್ದಾರೆ. ಶ್ರೀ ಎ. ಸದಾನಂದ ಶೆಟ್ಟಿ ಅಧ್ಯಕ್ಷರು, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.) ಅಧ್ಯಕ್ಷತೆ ವಹಿಸಲಿದ್ದಾರೆ.
ಟ್ರ್ರಸ್ಟಿನ ಗೌರವ ಅಧ್ಯಕ್ಷರಾದ ಶ್ರೀ ಬಿ. ರಮಾನಾಥ ರೈ ಹಾಗೂ ಗೌರವ ಸಲಹೆಗಾರರಾದ ಶ್ರೀ ನಳಿನ್ ಕುಮಾರ್ ಕಟೀಲ್ ಈ ಸಂದರ್ಭದಲ್ಲಿ ಸಂದೇಶ ನೀಡಲಿದ್ದಾರೆ. ಶ್ರೀ ಕೆ. ಅಮರನಾಥ ಶೆಟ್ಟಿ ಮಾಜಿ ಸಚಿವರು, ನಿಕಟಪೂರ್ವ ಅಧ್ಯಕ್ಷರು, ಬಂಟರ ಯಾನೆ ನಾಡವರ ಮಾತೃ ಸಂಘ ಇವರು ನಿರ್ಣಯಗಳನ್ನು ಮಂಡಿಸಲಿದ್ದಾರೆ
ಕರ್ನಾಟಕ ರಾಜ್ಯ ಸರಕಾರದ ಆರೋಗ್ಯ ಸಚಿವರಾದ ಶ್ರೀ ಯು. ಟಿ. ಖಾದರ್, ಕ್ರೀಡಾ ಸಚಿವರಾದ ಶ್ರೀ ಅಭಯಚಂದ್ರ ಜೈನ್, ಶಾಸಕರಾದ ಶ್ರೀ ಜೆ. ಆರ್. ಲೋಬೊ, ಶ್ರೀಮತಿ ಶಕುಂತಲಾ ಶೆಟ್ಟಿ, ಶ್ರೀ ಐವನ್ ಡಿ’ಸೋಜ, ಶ್ರೀ ಬಿ. ಎ. ಮೊದಿನ್ ಬಾವ, ಕ್ಯಾ| ಗಣೇಶ್ ಕಾರ್ಣಿಕ್, ಮೂಡ ಅಧ್ಯಕ್ಷರಾದ ಇಬ್ರಾಹಿಂ ಕೋಡಿಚಾಲ್ ಮಂಗಳೂರು, ಮಹಾಪೌರರಾದ ಶ್ರೀಮತಿ ಜೆಸಿಂತ ವಿಜಯ ಅಲ್ಫ್ರೆಡ್, ಕಾರ್ಪೊರೇಟರ್ಗಳಾದ ಶ್ರೀ ಶಶಿಧರ ಹೆಗ್ಡೆ, ಶ್ರೀ ಮಹಾಬಲ ಮಾರ್ಲ, ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಗುರುಕಿರಣ್ ಸಂಗೀತ ರಸಸಂಜೆ : ವಿಶೇಷ ಆಕರ್ಷಣೆ
ನಾಳೆ ಸಂಜೆ ಘಂಟೆ 06.30ರಿಂದ 08.30ರವರೆಗೆ ಯಂಗ್ ಬಂಟ್ಸ್ ಕಪಲ್ – 2016 ಯುವ ಬಂಟ ಜೋಡಿ ಕಾರ್ಯಕ್ರಮ ಜರುಗಲಿದ್ದು, ಆ ಬಳಿಕ ರಾತ್ರಿ ಘಂಟೆ 08.30 ಕ್ಕೆ ಖ್ಯಾತ ಸಂಗೀತ ನಿರ್ದೇಶಕ ಶ್ರೀ ಗುರುಕಿರಣ್ ಇವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ಜರುಗಲಿದೆ.