ಮುಂಬೈ: ಚೆನ್ನೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಸಿಬ್ಬಂದಿ ಶುಕ್ರವಾರ ಬೆಳಗ್ಗೆ ವಿಮಾನ ಗಗನಕ್ಕೆ ಏರಿದ ಬಳಿಕ ಮುಂಬೈ ನಗರದ ಸಮೀಪ ಆಕಾಶದಲ್ಲಿ ನಾಲ್ಕು ಬಣ್ಣ ಬಣ್ಣದ ನಿಗೂಢ ಪ್ಯಾರಾಚ್ಯೂಟ್ಗಳನ್ನು ಪತ್ತೆ ಹಚ್ಚಿದ್ದಾರೆ. ಹದಿನೈದು ದಿನಗಳ ಅವಧಿಯಲ್ಲಿ ಇಂತಹ ದೃಶ್ಯ ಕಂಡು ಬಂದದ್ದು ಇದು ಮೂರನೇ ಬಾರಿ ಎಂದು ವರದಿಗಳು ಹೇಳಿವೆ.
ಮುಂಬೈ ವಿಮಾನ ಸಂಚಾರ ನಿಯಂತ್ರಣ ಕಚೇರಿಗೆ (ಎಟಿಸಿ) ಬಂದ ಸಂದೇಶದ ಪ್ರಕಾರ ಕಾಕ್ಪಿಟ್ ಸಿಬ್ಬಂದಿ ಪ್ಯಾರಾಚ್ಯೂಟ್ಗಳನ್ನು ಪತ್ತೆ ಹಚ್ಚಿದಾಗ ವಾಸೈಯಿಂದ 5 ನಾಟಿಕಲ್ ಮೈಲು ದೂರದಲ್ಲಿ 6000 ಅಡಿ ಎತ್ತರದಲ್ಲಿ ಏರ್ಬಸ್ 319 ಹಾರಾಟ ನಡೆಸುತ್ತಿತ್ತು. ‘ಪ್ಯಾರಾಚ್ಯೂಟ್ಗಳು ಹಳದಿ, ಕೆಂಪು, ಹಸಿರು ಮತ್ತು ನೀಲಿ ಬಣ್ಣದಲ್ಲಿದ್ದವು’ ಎಂದು ಪರಿಚಯ ಹೇಳಲು ನಿರಾಕರಿಸಿದ ಹಿರಿಯ ಎಟಿಸಿ ಅಧಿಕಾರಿ ತಿಳಿಸಿದರು.
ಎರಡು ವಾರಗಳ ಹಿಂದೆ ಜುಹು ವಿಮಾನ ನಿಲ್ದಾಣದ ಸಮೀಪ ಪ್ಯಾರಾಗ್ಲೈಡರ್ಗಳನ್ನು ಪವನ್ಹ್ಯಾನ್ಸ್ ಪೈಲಟ್ ಪತ್ತೆ ಹಚ್ಚಿದಾಗ ಮುಂಬೈ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಕೆಲದಿನಗಳ ಬಳಿಕ ಮುಂಬೈಯ ಏಐ ಹಾರಾಟಗಾರರೊಬ್ಬರು ಇಂತಹುದೇ ದೃಶ್ಯ ಕಂಡ ಬಗ್ಗೆ ವರದಿ ಮಾಡಿದ್ದರು. ವಿಷಯದ ಬಗ್ಗೆ ತನಿಖೆ ನಡೆಸುವಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು ಆಜ್ಞಾಪಿಸಿದ್ದರು.