ಕೊಚ್ಚಿ: ಕೇರಳ ಮುಖ್ಯಮಂತ್ರಿ ಉಮನ್ ಚಾಂಡಿ ವಿರುದ್ಧದ ಆರೋಪಗಳನ್ನು ಮುಂದುವರೆಸಿರುವ ಸೋಲಾರ ಹಗರಣದ ಪ್ರಮುಖ ಆರೋಪಿ ಹಾಗೂ ಸೌರ ಕಂಪನಿಯೊಂದರ ಮುಖ್ಯಸ್ಥೆ ಸರಿತಾ ಎಸ್. ನಾಯರ್ ಅವರು, ಚಾಂಡಿ ಅವರೇ ತಮ್ಮ ಕುಟುಂಬ ಒಳಗೊಂಡ ಕಂಪನಿ ಸ್ಥಾಪಿಸುವಂತೆ ಒತ್ತಡ ಹೇರಿದ್ದರು ಎಂದು ಶುಕ್ರವಾರ ಗಂಭೀರ ಆರೋಪ ಮಾಡಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಶಿವರಾಜನ್ ಆಯೋಗದ ಮುಂದೆ ಇಂದು ವಿಚಾರಣೆ ಹಾಜರಾದ ಸರಿತಾ, ನವೀಕರಿಸಬಹುದಾದ ಇಂಧನ ವ್ಯವಹಾರ ನಡೆಸಲು ಸಿಎಂ ಕಂಪನಿ ಸ್ಥಾಪಿಸುವ ಬಗ್ಗೆ ಸಿಎಂ ಚಾಂಡಿಯೊಂದಿಗೆ ಚರ್ಚಿಸಿರುವುದಾಗಿ ಹೇಳಿದ್ದಾರೆ.
ಚಾಂಡಿ ಉಮನ್ ಮತ್ತು ಅವರ ಕುಟುಂಬ ಇತರೆ ಸದಸ್ಯರನ್ನೊಳಗೊಂಡ ಕೇರಳ ನವೀಕರಿಸಬಹುದಾದ ಇಂಧನ ಸಹಕಾರ ಸಂಸ್ಥೆ ನಿಗಮ ಸ್ಥಾಪಿಸುವಂತೆ ನನಗೆ ಸೂಚಿಸಿದ್ದರು ಎಂದು ಸರಿತಾ ವಿಚಾರಣಾ ಆಯೋಗಕ್ಕೆ ತಿಳಿಸಿದ್ದಾರೆ.
ಉಮನ್ ಚಾಂಡಿ ಹಾಗೂ ಅವರ ಆಪ್ತರ ವಿರುದ್ಧ ಸತತವಾಗಿ ಕೋಟ್ಯಾಂತರ ರುಪಾಯಿ ಲಂಚಾರೋಪ ಮಾಡುತ್ತಾ ಬಂದಿದ್ದ ಸರಿತಾ, ನಿನ್ನೆ ಇದೀಗ ಹೊಸ ಆರೋಪ ಮಾಡಿದ್ದಾರೆ.
‘ನನಗೆ ಸರಿತಾಳ ಪರಿಚಯವೇ ಇಲ್ಲ, ಮುಖ್ಯಮಂತ್ರಿಯಾಗಿ ಯಾವುದಾದರೂ ಕಾರ್ಯಕ್ರಮದಲ್ಲಿ ಅವಳನ್ನು ಭೇಟಿಯಾಗಿರುವ ಸಾಧ್ಯತೆಯಿದೆ’ ಎಂದಿರುವ ಚಾಂಡಿ ಅವರ ಹೇಳಿಕೆಗೆ ಸರಿತಾ, ಆಯೋಗದ ಎದುರು ನೀಡಿದ ಹೇಳಿಕೆ ವ್ಯತಿರಿಕ್ತವಾಗಿದೆ.