ಮುಂಬೈ: ವಿಶ್ವಕ್ಕೆ ಬೆದರಿಕೆ ಒಡ್ಡಿರುವ ಭಯೋತ್ಪಾದಕ ಸಂಘಟನೆ ಇಸಿಸ್ ಅನ್ನು ಬೆಂಬಲಿಸುತ್ತಿದ್ದ 94 ಅಂತರ್ಜಾಲ ತಾಣಗಳನ್ನು ಮಹಾರಾಷ್ಟ್ರ ಸರ್ಕಾರ ಭಾನುವಾರ ಸ್ಥಗಿತಗೊಳಿಸಿದೆ.
ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಮತ್ತು ಸಿರಿಯಾ ಉಗ್ರಗಾಮಿ ಸಂಘಟನೆಗೆ ಬೆಂಬಲ ನೀಡುತ್ತಿದ್ದ ಆರೋಪದ ಮೇಲೆ ಇಂದು ಕಾರ್ಯಾಚಾರಣೆ ನಡೆಸಿದ ಮಹಾರಾಷ್ಟ್ರದ ಉಗ್ರ ನಿಗ್ರಹ ಪೊಲೀಸರು ಸುಮಾರು 94 ವೆಬ್ ಸೈಟ್ ಗಳನ್ನು ಬ್ಲಾಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಪೊಲೀಸರು ಸ್ಥಗಿತಗೊಳಿಸಿರುವ ವೆಬ್ ಸೈಟ್ ಗಳು ಇಸಿಸ್ ಕುರಿತ ಲೇಖನಗಳನ್ನು ಮತ್ತು ಆ ಕುರಿತ ಚರ್ಚೆಗಳಿಗೆ ಅವಕಾಶ ಕಲ್ಪಿಸಿದ್ದವು ಎಂದು ಹೇಳಲಾಗುತ್ತಿದೆ.
ಅಲ್ಲದೆ ಇಸಿಸ್ ಸಂಘಟನೆಯನ್ನು ಸೇರುವಂತೆ ಯುವಕರನ್ನು ಪ್ರೇರೇಪಿಸುತ್ತಿದ್ದವು. ಇದೇ ಕಾರಣಕ್ಕಾಗಿ ಈ ವೆಬ್ ಸೈಟ್ ಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಮುಂಬೈ ಪೊಲೀಸ್ ಮೂಲಗಳು ತಿಳಿಸಿವೆ.