ಅಂತರಾಷ್ಟ್ರೀಯ

ಭಯೋತ್ಪಾದನೆ ಜೊತೆ ಧರ್ಮವನ್ನು ತಳಕು ಹಾಕಬೇಡಿ: ಸುಷ್ಮಾ ಸ್ವರಾಜ್

Pinterest LinkedIn Tumblr

manama-sushma-swarajಮನಾಮಾ: ಭಯೋತ್ಪಾದನೆ ಜೊತೆ ಧರ್ಮವನ್ನು ಎಂದಿಗೂ ತಳಕುಹಾಕಬೇಡಿ ಎಂದು ಹೇಳಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಭಯೋತ್ಪಾದನೆಯೆಂಬ ಪಿಡುಗನ್ನು ತಳ ಮಟ್ಟದಿಂದ ಕಿತ್ತುಹಾಕಲು ಭಾರತ ಮತ್ತು ಅರಬ್ ರಾಷ್ಟ್ರಗಳು ಕೈ ಜೋಡಿಸಬೇಕು. ಯಾರಾದರೂ ಉಗ್ರಗಾಮಿಗಳಿಗೆ ಮೌನವಾಗಿ ಪ್ರೋತ್ಸಾಹ ನೀಡುತ್ತಿದ್ದರೆ ಅಂತವರು ಅವರ ಅಂತ್ಯವನ್ನು ಕಾಣಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಹ್ರೈನ್ ರಾಜಧಾನಿ ಮನಾಮಾದಲ್ಲಿ ಮೊದಲ ಭಾರತ-ಅರಬ್ ಸಹಕಾರ ವೇದಿಕೆಯ ಮೊದಲ ಸಚಿವರ ಸಭೆಯಲ್ಲಿ ಮಾತನಾಡಿದ ಅವರು, ಅರಬ್ ರಾಷ್ಟ್ರಗಳೊಂದಿಗೆ ಭಾರತ ಸ್ನೇಹ ಬೆಳೆಸುತ್ತಿರುವುದು ಒಂದು ಮಹತ್ವದ ತಿರುವು. ಭಯೋತ್ಪಾದನೆ ಮತ್ತು ಧರ್ಮಕ್ಕೆ ಎಂದಿಗೂ ಸಂಬಂಧ ಕಲ್ಪಿಸಬೇಡಿ. ಧರ್ಮ ಮತ್ತು ಭಯೋತ್ಪಾದನೆಗೆ ಇರುವ ವ್ಯತ್ಯಾಸವೆಂದರೆ ಮಾನವೀಯತೆ ಮತ್ತು ಕ್ರೂ ರತ್ವಕ್ಕೆ ಇರುವ ವ್ಯತ್ಯಾಸವಷ್ಟೆ. ಭಯೋತ್ಪಾದಕರು ಕೂಡ ಧರ್ಮವನ್ನು ನಂಬುತ್ತಾರೆ. ಆದರೆ ಅವರು ಜನರಿಗೆ ತೊಂದರೆ ಕೊಡುತ್ತಾರೆ ಎಂದು ಹೇಳಿದರು.
ಭಾರತ ದೇಶ ವಿವಿಧತೆಯಲ್ಲಿ ಏಕತೆಗೆ ಮಾದರಿ. ಈ ದೇಶದ ಸಂವಿಧಾನದಲ್ಲಿ ಜನರ ಮೂಲ ನಂಬಿಕೆ, ತತ್ವಗಳಿಗೆ ಬೇಧ ಮಾಡುವುದಿಲ್ಲ. ಇದು ಕೇವಲ ಕಾನೂನಿನಲ್ಲಿ ಮಾತ್ರವಲ್ಲ; ಜನರ ದಿನನಿತ್ಯದ ವರ್ತನೆಗಳಲ್ಲಿ ಕಂಡುಬರುತ್ತದೆ. ನಮ್ಮ ದೇಶದ ಪ್ರತಿ ಮೂಲೆ ಮೂಲೆಯಲ್ಲಿಯೂ ಬೆಳಗಿನ ಹೊತ್ತು ಆಜಾನ್ ನ ಸಂಗೀತ ಜನರನ್ನು ನಿದ್ದೆಯಿಂದ ಬೆಳಗಿನ ಹೊತ್ತು ಎಬ್ಬಿಸಿದರೆ, ಹನುಮಂತನ ದೇವಾಲಯದಿಂದ ಘಂಟೆಯ ನಾದ ಕೇಳಿಬರುತ್ತದೆ. ಗುರುದ್ವಾರದಲ್ಲಿ ಗುರು ಗ್ರಂಥ ಸಾಹಿಬ್ ರ ಕುರಿತ ಭಜನೆ ಕೇಳಿಬಂದರೆ , ಪ್ರತಿ ಭಾನುವಾರ ಚರ್ಚ್ ನಿಂದ ಘಂಟೆ ಶಬ್ದ ಕೇಳುತ್ತದೆ. ಅಂದರೆ ಎಲ್ಲ ಜಾತಿ, ಧರ್ಮದ ಜನರನ್ನು ಭಾರತ ದೇಶ ಒಳಗೊಂಡಿದೆ ಎಂದು ಹೇಳಿದರು. ಮುಸಲ್ಮಾನರ ಧಾರ್ಮಿಕ ಗ್ರಂಥ ಕುರಾನ್ ನಲ್ಲಿನ ಉಲ್ಲೇಖವನ್ನು ಪ್ರಸ್ತಾಪಿಸಿದ ಸುಷ್ಮಾ, ಸಾಮರಸ್ಯದ ಮೇಲೆ ನಂಬಿಕೆ ಕುರಾನ್ ಗ್ರಂಥದ ಮೂಲ ಧ್ಯೇಯ. ಧರ್ಮ, ನಂಬಿಕೆಯ ಆಚರಣೆ ಕಡ್ಡಾಯವಲ್ಲ, ನಿನ್ನ ನಂಬಿಕೆ ನಿನಗೆ, ನನ್ನ ನಂಬಿಕೆ ನನಗೆ ಎಂಬುದು ಕುರಾನ್ ನ ಮೂಲಮಂತ್ರ ಎಂದು ಪ್ರಮುಖ ಅರಬ್ ರಾಷ್ಟ್ರಗಳ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ಪ್ರಸ್ತಾಪಿಸಿದರು.
ಭಯೋತ್ಪಾದನೆ, ಅಹಿಂಸೆಯನ್ನು ಹೊಡೆದೋಡಿಸಲು ಭಾರತದಲ್ಲಿ ಬುದ್ದ, ಮಹಾವೀರ, ಮಹಾತ್ಮಾ ಗಾಂಧೀಜಿ ತೋರಿಸಿಕೊಟ್ಟ ಮಾರ್ಗದಲ್ಲಿ ನಡೆಯೋಣ ಎಂಬ ಅಂಶವನ್ನು ಸಚಿವೆ ತಮ್ಮ ಮಾತಿನಲ್ಲಿ ಪ್ರಸ್ತಾಪಿಸಿದರು.
ಇತ್ತೀಚೆಗೆ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ವ್ಯಾಪಕ ಚರ್ಚೆಯಾಗಿ ಅನೇಕ ಮಂದಿ ಸಾಹಿತಿಗಳು, ಕಲಾವಿದರು ತಮ್ಮ ಪ್ರಶಸ್ತಿಗಳನ್ನು ವಾಪಸ್ಸು ಮಾಡಿದ್ದಕ್ಕೆ ಸುಷ್ಮಾ ಸ್ವರಾಜ್ ಅವರ ಈ ಮಾತುಗಳು ಬಹಳ ಅರ್ಥ ಕೊಡುತ್ತವೆ.

Write A Comment