ಮುಂಬೈ: ಆಮಿರ್ ಜಾಗಕ್ಕೆ ಯಾರು ಬರುತ್ತಾರೆ ಎಂದು ಕೆಲವು ದಿನಗಳಿಂದ ಕಾಡಿದ ಪ್ರಶ್ನೆಗೆ ಗುರುವಾರ ತೆರೆಬಿದ್ದಿದೆ. ಬಾಲಿವುಡ್ನ ಬಿಗ್ಬಿ ಅಮಿತಾಭ್ ಬಚ್ಚನ್ ಮತ್ತು ಪ್ರಿಯಾಂಕಾ ಚೋಪ್ರಾ ಇನ್ಕ್ರೆಡಿಬಲ್ ಇಂಡಿಯಾದ ನೂತನ ರಾಯಭಾರಿಗಳಾಗಿ ಆಯ್ಕೆಯಾಗಿದ್ದಾರೆ.
ಪ್ರತಿಷ್ಠಿತ ಅಂತಾರಾಷ್ಟ್ರೀಯ ಪಿಸಿಎ ಅವಾರ್ಡ್ ಪಡೆದು ಹಾಲಿವುಡ್ನಲ್ಲು ಮಿಂಚುತ್ತಿರುವ ಬಾಲಿವುಡ್ನಟಿ ಪ್ರಿಯಾಂಕ ಚೋಪ್ರಾರನ್ನು ಇನ್ಕ್ರೆಡಿಬಲ್ ಇಂಡಿಯಾದ ಭಾಗವಾದ ‘ಅತಿಥಿ ದೇವೋಭವ’ಕ್ಕೆ ರಾಯಭಾರಿಯನ್ನಾಗಿ ಆರಿಸುವ ಮೂಲಕ, ಮಹಿಳೆಯೊಬ್ಬರನ್ನು ಆರಿಸಬೇಕು ಎಂಬ ಬಹುಜನರ ಅಪೇಕ್ಷೆಯನ್ನು ಈಡೇರಿಸಿದಂತಾಗಿದೆ.
ಆಮಿರ್ ಖಾನ್ ಕಳೆದ ಒಂದು ದಶಕದಿಂದ ಭಾರತ ಪ್ರವಾಸೋದ್ಯಮದ ಬ್ರಾಂಡ್ ಅಂಬಾಸಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಅವಧಿ ಪೂರ್ಣಗೊಳ್ಳುತ್ತಿದ್ದ ಸಮಯದಲ್ಲಿ ರಾಷ್ಟ್ರದಲ್ಲಿ ಅಸಹಿಷ್ಣುತೆಯ ವಿವಾದವನ್ನೆಬ್ಬಿಸಿ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ದೇಶಾದ್ಯಂತ ಹಲವು ಸಂಘಟನೆಗಳು ಆಮಿರ್ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದವು. ಇದರಿಂದಾಗಿ ಆಮಿರ್ ಮತ್ತೊಂದು ಅವಧಿಯ ಇನ್ಕ್ರೆಡಿಬಲ್ ಇಂಡಿಯಾದ ರಾಯಭಾರಿಯಾಗುವ ಅವಕಾಶದಿಂದ ವಂಚಿತರಾದರು.
ಇನ್ಕ್ರೆಡಿಬಲ್ ಇಂಡಿಯಾದ ರಾಯಭಾರತ್ವ ಪಡೆಯಲು ಕ್ರೀಡಾಪಟುಗಳು ಸೇರಿದಂತೆ ಹಲವು ಗಣ್ಯರ ಹೆಸರು ಪ್ರಸ್ತುತ ಸಾಲಿನಲ್ಲಿ ಕೇಳಿಬಂದಿತ್ತು. ಈಗಾಗಲೇ ಗುಜರಾತ್ ಟೂರಿಸಂನ ರಾಯಭಾರಿ ಆಗಿರುವ ಅಮಿತಾಭ್ಗೆ ರಾಷ್ಟ್ರವನ್ನು ಪ್ರತಿನಿಧಿಸುವ ಅವಕಾಶ ಲಭಿಸಿದೆ.