ಮುಂಬೈ,ಅ.14: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ವಿಶೇಷ ಸರಕಾರಿ ಅಭಿಯೋಜಕರಾಗಿದ್ದ ರೋಹಿಣಿ ಸಾಲಿಯಾನ್ ಅವರು ಪ್ರಕರಣದಲ್ಲಿ ‘ಮೃದು ನಿಲುವು’ ತಳೆಯುವಂತೆ ತನಗೆ ಸೂಚಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಯ ಅಧಿಕಾರಿಯನ್ನು ಪ್ರಮಾಣಪತ್ರವೊಂದರಲ್ಲಿ ಹೆಸರಿಸಿದ್ದಾರೆ.
ಸಾಲಿಯಾನ್ ಅವರು 2015,ಜುಲೈ 28ರಂದು ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಈ ಪ್ರಮಾಣ ಪತ್ರವನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಕಳುಹಿಸಲಾಗಿದ್ದು, ಮಾಜಿ ಎನ್ಐಎ ಎಸ್ಪಿ ಸುಹಾಸ್ ವಾರ್ಕೆ ತನ್ನನ್ನು ಭೇಟಿಯಾಗಿ ಪ್ರಕರಣದಲ್ಲಿ ಮೃದು ನಿಲುವು ತಳೆಯುವಂತೆ ಸೂಚಿಸಿದ್ದರು ಎಂದು ಅವರು ಸ್ಪಷ್ಟಪಡಿಸಿದ್ದಾರೆ ಎಂದು ಉಚ್ಚ ನ್ಯಾಯಾಲಯದಲ್ಲಿ ಕ್ರಿಮಿನಲ್ ನ್ಯಾಯಾಂಗ ಉಲ್ಲಂಘನೆ ಪ್ರಕರಣವನ್ನು ದಾಖಲಿಸಿರುವ ಸಂಜಯ ಲಾಖೆ ಪಾಟೀಲ್ ಪರ ವಕೀಲ ಚಿರಾಗ್ ಎಂ.ಶ್ರಾಫ್ ಸುದ್ದಿಗಾರರಿಗೆ ತಿಳಿಸಿದರು.
ಹಿಂದು ಉಗ್ರರನ್ನೊಳಗೊಂಡ ಮಾಲೆಗಾಂವ ಸ್ಫೋಟ ಪ್ರಕರಣದಲ್ಲಿ ಎನ್ಐಎ ಪರ ವಕೀಲರಾಗಿದ್ದ ಸಾಲಿಯಾನ್ ಅವರು, ಕೇಂದ್ರದಲ್ಲಿ ನೂತನ ಸರಕಾರವು ಅಧಿಕಾರಕ್ಕೆ ಬಂದ ನಂತರ ಪ್ರಕರಣದಲ್ಲಿ ಮೃದು ನಿಲುವು ತಳೆಯುವಂತೆ ತನಗೆ ಸೂಚಿಸಲಾಗಿತ್ತು ಎಂಬ ಆಘಾತಕಾರಿ ವಿಷಯವನ್ನು ಕಳೆದ ಜೂನ್ನಲ್ಲಿ ಬಹಿರಂಗಗೊಳಿಸಿದ್ದರು.
ಮಾಲೆಗಾಂವ್ ಸ್ಫೋಟ ಪ್ರಕರಣವು ಲೆಕ ಪ್ರಸಾದ ಶ್ರೀಕಾಂತ ಪುರೋಹಿತ್ ಮತ್ತು ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಸೇರಿದಂತೆ ಹಿಂದು ಉಗ್ರಗಾಮಿಗಳ ವಿರುದ್ಧ ಎನ್ಐಎ 2009ರಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದ ಮೊದಲ ಪ್ರಕರಣವಾಗಿದೆ.
