ಕರ್ನಾಟಕ

ಪ್ರೇಯಸಿಯ ಕತ್ತು ಕತ್ತರಿಸಿ ಕೊಂದ ಕಿರಾತಕ

Pinterest LinkedIn Tumblr

arrest

ಯಾದಗಿರಿ: ಸಾಯೋತನಕ ನಿನ್ನ ಪ್ರೀತಿಸ್ತೇನೆ, ನಿನ್ನನ್ನೇ ಮದುವೆಯಾಗ್ತೇನೆ ಎಂದು ನಂಬಿಸಿ, ಯುವತಿಯೊಬ್ಬಳನ್ನ ಪ್ರೇಮಿಸೋ ನಾಟಕವಾಡಿದ ವ್ಯಕ್ತಿಯೊಬ್ಬ, ಮದುವೆಯಾಗಲು ಮನೆಗೆ ಬಂದಿದ್ದ ಯುವತಿಯ ಕತ್ತನ್ನೇ ಕತ್ತರಿಸಿ, ರುಂಡಮುಂಡ ಬೇರ್ಪಡಿಸಿ, ಅತ್ಯಾಚಾರಗೈದು ಬರ್ಬರವಾಗಿ ಹತ್ಯೆ ಮಾಡಿ ಬಿಸಾಡಿದ ಘಟನೆ ನಡೆದಿದೆ.

ಘಟನೆ ಏನು..?
ರುಂಡಮುಂಡ ಬೇರ್ಪಟ್ಟು ಬರ್ಬರವಾಗಿ ಕೊಲೆಯಾದ 21 ವರ್ಷದ ಈ ಯುವತಿಯ ಹೆಸರು ರೀನಾ ರಾಠೋಡ. ಕಲಬುರಗಿ ಜಿಲ್ಲೆ ಚಿತ್ತಾಪೂರ ತಾಲೂಕಿನ ವಾಡಿ ಸಮೀಪದ ಬಸವನ ಖನಿ ತಾಂಡಾದ ರೀನಾ, ತಂದೆ ತಾಯಿ ಇಲ್ಲದ ಅನಾಥೆ. ಕಲ್ಲು ಕ್ವಾರಿಯೊಳಗೆ ಕೆಲಸ ಮಾಡ್ತಿದ್ದ ಈಕೆಯನ್ನ ಅಲ್ಲಿನ ತಾಂಡಾದ ಕೃಷ್ಣ ಎಂಬಾತ ಪ್ರೇಮಿಸಿ, ಮದುವೆಯಾಗೋ ನಾಟಕವಾಡಿದ್ದಾನೆ. ಆದರೆ ಕೃಷ್ಣ ಮೊದಲೇ ಬೇರೊಬ್ಬಳನ್ನ ಮದುವೆಯಾಗಿದ್ದ. ಇದು ಗೊತ್ತಿರದ ರೀನಾ ಕೆಲದಿನಗಳ ನಂತರ ಮದುವೆಯಾಗೋಣವೆಂದು ದುಂಬಾಲು ಬಿದ್ದಾಗ, ಸ್ನೇಹಿತರ ಜೊತೆ ಸೇರಿ ಆಕೆಯನ್ನ ಮುಗಿಸಿಬಿಡಲು ಸ್ಕೆಚ್ ಹಾಕಿದ.

ಅಕ್ಟೋಬರ್ 3ಕ್ಕೆ ನಾಪತ್ತೆಗಿದ್ಳು!
ಮೊನ್ನೆ ಅಕ್ಟೋಬರ್ 3 ರಂದು ರೀನಾ ನಾಪತ್ತೆಯಾದಾಗ, ಆಕೆಯ ಸಂಬಂಧಿಕರು ಹುಡುಕಾಡಿದರೂ ಪತ್ತೆಯಾಗಲಿಲ್ಲ. ಗಾಬರಿಗೊಂಡ ಅವರು ಪೊಲೀಸರ ಬಳಿ ಬಂದು ದೂರು ನೀಡಿದರು. ಕೃಷ್ಣನನ್ನು ಆಕೆ ಪ್ರೀತಿಸುತ್ತಿದ್ದ ಬಗ್ಗೆ ಮಾಹಿತಿ ನೀಡಿದರು. ಆದರೆ, ಇದ್ಯಾವುದೂ ತನಗೆ ಗೊತ್ತಿಲ್ಲ ಎಂದು ನಾಟಕವಾಡಿದ ಕೃಷ್ಣ, ಕೊನೆಗೆ ಪೊಲೀಸರ ಟ್ರೀಟ್ಮೆಂಟ್‍ಗೆ ಬಾಯ್ಬಿಟ್ಟಿದ್ದಾನೆ. ಸ್ನೇಹಿತರ ಜೊತೆಗೂಡಿ ಯಾದಗಿರಿ ಹೊರವಲಯದಲ್ಲಿರೋ ಭೀಮಾ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ಆಕೆಯನ್ನ ಕತ್ತರಿಸಿ, ಬಿಸಾಕಿದ ಬಗ್ಗೆ ಆಘಾತಕಾರಿ ಮಾಹಿತಿ ಬಾಯ್ಬಿಟಿದ್ದಾನೆ. ವಾಡಿ ಇನ್ಸಪೆಕ್ಟರ್ ನಟರಾಜ್ ಮತ್ತವರ ತಂಡ ಆರೋಪಿಗಳನ್ನ ಕರೆದುಕೊಂಡು, ಸ್ಥಳ ಪರಿಶೀಲನೆ ನಡೆಸಿದಾಗ, ರುಂಡಮುಂಡ ಬೇರ್ಪಟ್ಟ, ಕೊಳೆತು ಹೋದ ರೀನಾಳ ಶವ ಪತ್ತೆಯಾಗಿದೆ.

ಪ್ರಕರಣದ ತನಿಖೆ ನಡೆಸಿರುವ ಚಿತ್ತಾಪೂರ-ವಾಡಿ ಪೊಲೀಸರು, ಪ್ರೀತಿಸಿ ಮದುವೆಯಾಗೋದಾಗಿ ನಂಬಿಸಿ, ಕೊಲೆ ಮಾಡಿದ ಆರೋಪಿ ಕೃಷ್ಣ ಸೇರಿದಂತೆ ನಾಲ್ವರನ್ನ ತಮ್ಮ ವಶಕ್ಕೆ ಪಡೆದಿದ್ದಾರೆ. ಪ್ರೇಮಜಾಲದಲ್ಲಿ ಸಿಕ್ಕು ಕೊನೆಗೆ ಬರ್ಬರವಾಗಿ ಹತ್ಯೆಯಾದ ಅನಾಥ ಯುವತಿಯೊಬ್ಬಳ ಬದುಕು ಕಲ್ಲುಮುಳ್ಳುಗಳ ನಡುವೆ ಕೊಳೆತು ಶವವಾಗಿದ್ದು ಮಾತ್ರ.

Write A Comment