ಮುಂಬೈ

ಮಾರುವೇಷದ ಕಾರ್ಯಾಚರಣೆಯಲ್ಲಿ ಮೋದಿ, ಶಾ ಟೀಕೆ: ಸಂಕಷ್ಟಕ್ಕೆ ಸಿಲುಕಿದ ಬಿಜೆಪಿ ಶಾಸಕ

Pinterest LinkedIn Tumblr

raj purohit

ಮುಂಬಯಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಟೀಕಿಸುತ್ತಿರುವುದನ್ನು ರಹಸ್ಯವಾಗಿ ಚಿತ್ರೀಕರಿಸಿದ ವೀಡಿಯೊ ಇದೀಗ ದೇಶದೆಲ್ಲೆಡೆ ಖ್ಯಾತವಾಗಿದ್ದು, ಟೀಕಿಸಿದ ಶಾಸಕನಿಗೆ ಸಂಕಷ್ಟ ತಂದೊಡ್ಡಿದೆ. ದೇಶದ ಹಲವಾರು ಭಾಷೆಗಳ ಚಾನೆಲ್‌, ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಂಡಿರುವ ಮಹಾರಾಷ್ಟ್ರದ ಕೊಲಾಬಾ ಕ್ಷೇತ್ರದ ಬಿಜೆಪಿ ಶಾಸಕ ರಾಜ್ ಪುರೋಹಿತ್‌ಗೆ ಈ ವಿಡಿಯೋ ಸಂಕಷ್ಟ ತಂದಿದ್ದು, ಪಕ್ಷದಿಂದ ನೋಟಿಸ್‌ ಜಾರಿಯಾಗಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರನ್ನೂ ಕೂಡ ಶಾಸಕ ಟೀಕಿಸಿರುವುದು ವಿಡಿಯೋ ತುಣುಕಿನಲ್ಲಿ ದಾಖಲಾಗಿತ್ತು.

ಅನಾಮಿಕ ಸಂದರ್ಶಕನ ಜತೆ ಮಾತನಾಡಿದ ವಿಡಿಯೋ ತುಣುಕು ಇದಾಗಿದ್ದು, ಅದರಲ್ಲಿ ಬಿಜೆಪಿ ವಿರುದ್ಧ ಶಾಸಕ ರಾಜ್ ಪುರೋಹಿತ್‌ ನಕಾರಾತ್ಮಕವಾಗಿ ಮಾತನಾಡಿದ್ದಾರೆ. ಪಕ್ಷದಲ್ಲಿ ಅಧಿಕಾರ ಮೋದಿ, ಶಾ ಕೈಸೇರಿದೆ ಎಂಬ ಸಂದರ್ಶಕನ ಅಭಿಪ್ರಾಯವನ್ನು ಒಪ್ಪಿರುವ ರಾಜ್‌, ಬಿಜೆಪಿಯಲ್ಲಿ ಪ್ರಜಾಪ್ರಭುತ್ವವಿಲ್ಲ. ಜನ ಸಾಮೂಹಿಕ ನಾಯಕತ್ವದ ಬಗ್ಗೆ ಮಾತನಾಡುತ್ತಾರೆ. ಆದರೆ ಅದು ನಮ್ಮ ಪಕ್ಷದಿಂದ ಕಾಣೆಯಾಗಿದೆ. ಇದು ಪಕ್ಷಕ್ಕೆ ಅಪಾಯಕಾರಿ ಲಕ್ಷಣ ಎಂದು ಹೇಳಿದ್ದಾರೆ.

ಮೇಲಿನಿಂದ ಬರುತ್ತಿರುವ ಒತ್ತಡದಿಂದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅಸಹಾಯಕರಾಗಿದ್ದಾರೆ. ಅಲ್ಲದೆ ಮಲಬಾರ್ ಹಿಲ್ ಶಾಸಕರೂ ಆಗಿರುವ ಬಿಲ್ಡರ್ ಮಂಗಲ್ ಪ್ರಭಾತ್ ಲೋಧಾ ಹಾಗೂ ರಾಜ್‌ ಠಾಕ್ರೆ “ನಕಲಿ” ನಾಯಕರು ಎಂದು ಅಪಹಾಸ್ಯ ಮಾಡಿರುವುದುದು ದಾಖಲಾಗಿದೆ. ಅಲ್ಲದೆ ಪಕ್ಷದಲ್ಲಿ ಏಕನಾಥ್‌ ಖಡ್ಸೆ ನಂತರ ಅತಿ ಹಿರಿಯ ಬಿಜೆಪಿ ನಾಯಕ ಎಂದು ಜಂಭ ಕೊಚ್ಚಿಕೊಂಡಿರುವುದು ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗಗೊಂಡಿದೆ.

ವಿಡಿಯೋ ನಕಲಿ ಎಂದ ಶಾಸಕ:

ಪ್ರಕರಣದ ಬಗ್ಗೆ ವಿಕ ಸೋದರ ಪತ್ರಿಕೆ ಟೈಮ್ಸ್‌ ಆಫ್‌ ಇಂಡಿಯಾ ಜತೆ ಮಾತನಾಡಿದ ಶಾಸಕ ರಾಜ್ ಪುರೋಹಿತ್‌, ವಿಡಿಯೋ ನಕಲಿ. ಅದು ತಮ್ಮ ಧ್ವನಿ ಅಲ್ಲ ಎಂದು ಅಲವತ್ತುಕೊಂಡಿದ್ದಾರೆ. ಅತ್ತ ಮುಖ್ಯಮಂತ್ರಿ ಫಡ್ನವೀಸ್‌ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಪುರೋಹಿತ್‌ರ ರಾಜಕೀಯ ಜೀವನ ಒಂದು ವೈಫಲ್ಯಗಾಥೆ, ಅವರು ಮಾಡಿರುವುದು ಆಧಾರ ರಹಿತ ಗಾಸಿಪ್‌ ಎಂದು ಲೋಧಾ ದೂರಿದ್ಧಾರೆ.

ಈ ನಡುವೆ ವಿಡಿಯೋವನ್ನು ಫಾರೆನ್ಸಿಕ್‌ ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲಿನ ವರದಿ ಬಂದ ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಪಕ್ಷದ ವಕ್ತಾರ ಮಾಧವ ಭಂಡಾರಿ ಹೇಳಿದ್ದಾರೆ. ಅತ್ತ ಎಂಎನ್‌ಎಸ್‌ ಕಾರ್ಯಕರ್ತರು ಶಾಸಕ ಪುರೋಹಿತರ ಕಲಬದೇವಿಯಲ್ಲಿ ಕಚೇರಿ ಮೇಲೆ ಶುಕ್ರವಾರ ದಾಳಿ ನಡೆಸಿದ್ದಾರೆ.

ನೋಟಿಸ್‌ ಜಾರಿ ಮಾಡಿದ  ಬಿಜೆಪಿ 

ಬಿಜೆಪಿಯ ವರಿಷ್ಠರನ್ನು ಟೀಕಿಸಿದಕ್ಕೆ ಮುಂಬೈನ ಬಿಜೆಪಿ ಶಾಸಕ ರಾಜ್‌ ಪುರೋಹಿತ್‌ ಅವರಿಗೆ ಪಕ್ಷ ನೋಟಿಸ್‌ ಜಾರಿ ಮಾಡಿದೆ.

‘ಪಕ್ಷದೊಳಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ  ಅಮಿತ್‌ ಷಾ ಅವರೇ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಪಕ್ಷದಲ್ಲಿ ಸಾಮೂಹಿಕ ನಾಯಕತ್ವ ಸತ್ತು ಹೋಗಿದೆ’ ಎಂದು ಪುರೋಹಿತ್‌ ಹೇಳಿರುವ ಮಾತುಗಳು ವಾಹಿನಿಗಳಲ್ಲಿ ಪ್ರಸಾರವಾಗಿವೆ.

ಪುರೋಹಿತ್‌ ಮಾತನಾಡಿರುವ ದೃಶ್ಯ ಕುಟುಕು ಕಾರ್ಯಾಚರಣೆಯೊಂದರಿಂದ ಬಯಲಾಗಿದೆ. ಸುಷ್ಮಾ ಸ್ವರಾಜ್‌, ಸ್ಮೃತಿ ಇರಾನಿ ಹಾಗೂ ಪಂಕಜಾ ಮುಂಡೆ ಪ್ರಕರಣಗಳಿಂದ ಸಾಕಷ್ಟು ಮುಜುಗರಕ್ಕೆ ಒಳಗಾಗಿರುವ ಬಿಜೆಪಿಗೆ ಈ ಕುಟುಕು ಕಾರ್ಯಾಚರಣೆ ಮತ್ತಷ್ಟು ಮುಜುಗರ ತಂದಿಟ್ಟಿದೆ.

Write A Comment