ಮುಂಬೈ

ಮಹಾರಾಷ್ಟ್ರದ ಮೈತ್ರಿ ಸರ್ಕಾರದಲ್ಲಿ 206 ಕೋಟಿ ರೂಪಾಯಿ ಹಗರಣ ! ಸಚಿವೆ ಪಂಕಜ ಮುಂಡೆ ಮೇಲೆ ತೂಗುಗತ್ತಿ

Pinterest LinkedIn Tumblr

Pankaja-Munde

ಮುಂಬಯಿ: ಮಹಾರಾಷ್ಟ್ರದ ಬಿಜೆಪಿ, ಶಿವಸೇನೆ ಮೈತ್ರಿ ಸರ್ಕಾರದಲ್ಲಿ ಮೊದಲ ಬಾರಿಗೆ ದೊಡ್ಡ ಮೊತ್ತದ ಹಗರಣದ ವಾಸನೆ ಬಡಿಯುತ್ತಿದೆ. 206 ಕೋಟಿ ರೂ. ಮೊತ್ತದ ವ್ಯವಹಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಹಾಗೂ ಕೇಂದ್ರ ಸಚಿವರಾಗಿದ್ದ ದಿವಂಗತ ಗೋಪಿನಾಥ್ ಮುಂಡೆ ಪುತ್ರಿ ಪಂಕಜ ಮುಂಡೆ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ.

ಮಕ್ಕಳ ಸಮಗ್ರಾಭಿವೃದ್ಧಿ ಸೇವೆಯಡಿ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳಿಗೆ ನೀಡಲಾಗುವ ಚಿಕ್ಕಿ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಅಹಾಮದಾನಗರ್ ಜಿಲ್ಲಾ ಪರಿಷತ್ ಅಧ್ಯಕ್ಷೆ ಮಂಜುಶ್ರಿ ಗುಂಡ್ ಪಂಕಜ ಮುಂಡೆ ವಿರುದ್ಧ ದೂರು ದಾಖಲಿಸಿದ್ದಾರೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಬುಡಕಟ್ಟು ಮಕ್ಕಳಿಗೆ ನೀಡುವ ಚಿಕ್ಕಿ ಕಡಿಮೆ ಗುಣಮಟ್ಟದ್ದಾಗಿದ್ದು, ಮಣ್ಣು ಮಿಶ್ರಣವಾಗಿದೆ ಎಂದು ದೂರಿನಲ್ಲಿ ಮಂಜುಶ್ರೀ ಗುಂಡ್ ಆರೋಪಿಸಿದ್ದಾರೆ.

ಫೆಬ್ರವರಿ 13 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಚಿಕ್ಕಿ, ಮ್ಯಾಟ್, ಊಟ ಪುಸ್ತಕ ಸೇರಿದಂತೆ ಹಲವು ವಸ್ತುಗಳನ್ನು ಖರೀದಿಸಲು 206 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲು ಆತುರಾತುರವಾಗಿ ನಿರ್ಣಯ ಕೈಗೊಂಡ ದೇವೇಂದ್ರ ಫಡ್ನವೀಸ್ ಸರ್ಕಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸರ್ಕಾರನ ನಿಯಮದ ಪ್ರಕಾರ 3 ಲಕ್ಷ ರೂಪಾಯಿ ಮೇಲ್ಪಟ್ಟ ವಸ್ತುಗಳನ್ನು ಖರೀದಿಸುವಾಗ ಟೆಂಡರ್ ಕರೆಯಬೇಕೆಂಬ ನಿಯಮವಿದೆ.ಆದರೆ ಈ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಪಂಕಜ ಮುಂಡೆ ಚಿಕ್ಕಿ ಖರೀದಿ ಮಾಡಿದ್ದಾರೆ ಎಂದು ದೂರಲಾಗಿದೆ. ಸೂರ್ಯಕಾಂತ ಸಹಕಾರಿ ಮಹಿಳಾ ಸಂಸ್ಥೆ ಪೂರೈಸುವ ಚಿಕ್ಕಿಯ ಗುಣಮಟ್ಟ ಸರಿಯಿಲ್ಲ ಎಂದು ಕೇಂದ್ರ ಖರೀದಿ ಕಚೇರಿ ಆಯುಕ್ತೆ ರಾಧಿಕಾ ರಸ್ತೋಗಿ, ಚಿಕ್ಕಿ ಪೂರೈಕೆಗೆ ಅನುಮತಿ ನಿರಾಕರಿಸಿದ್ದರು.

ಆದರೆ ಪಂಕಜ ಮುಂಡೆ ಅದೇ ಮಹಿಳಾ ಸಹಕಾರ ಸಂಸ್ಥೆಗೆ 37 ಕೋಟಿ ರೂ. ಮೌಲ್ಯದ ಚಿಕ್ಕಿ ಪೂರೈಸಲು ಟೆಂಡರ್ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಈ ಆರೋಪದ ಬಗ್ಗೆ ಸಚಿವೆ ಪಂಕಜ್ ಮುಂಡೆ ಸೇರಿದಂತೆ ದೇವೇಂದ್ರ ಫಡ್ನವೀಸ್ ಸಂಪುಟದ ಯಾವೊಬ್ಬ ಸಹೋದ್ಯೋಗಿಗಳು ಪ್ರತಿಕ್ರಿಯೆ ನೀಡುತ್ತಿಲ್ಲ.

Write A Comment