ಬೆಂಗಳೂರು, ಜೂ.24: ಅಕ್ರಮ ಲಾಟರಿ ಪ್ರಕರಣದ ರೂವಾರಿ ಪಾರಿರಾಜನ್ ಜತೆ ಸಂಬಂಧ ಹೊಂದಿದ ಆರೋಪದ ಮೇಲೆ ಸೇವೆಯಿಂದ ಅಮಾನತುಗೊಂಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್‌ಗೆ ಮತ್ತೊಂದು ಕಾನೂನಿನ ಸಂಕಷ್ಟ ಎದುರಾಗಿದೆ.
ರೌಡಿಗಳು, ಸಮಾಜಘಾತುಕ ಶಕ್ತಿಗಳಿಗೆ ಒಂದು ಹಂತದಲ್ಲಿ ಸಿಂಹಸ್ವಪ್ನವಾಗಿ ಡೇರ್ ಡೆವಿಲ್ ಎಂದೇ ಪೊಲೀಸ್ ಇಲಾಖೆಯಲ್ಲಿ ಕರೆಯುತ್ತಿದ್ದ ಅಲೋಕ್‌ಕುಮಾರ್‌ಗೆ ನಕಲಿ ಎನ್‌ಕೌಂಟರ್ (ಫೇಕ್ ಎನ್‌ಕೌಂಟರ್) ಹೆಗಲಿಗೇರಿದೆ. ಅಲೋಕ್‌ಕುಮಾರ್ ಜತೆಗೆ ಇನ್ಸ್‌ಪೆಕ್ಟರ್ ಎಂ.ಕೆ.ಗಣಪತಿ, ಸಬ್‌ಇನ್ಸ್‌ಪೆಕ್ಟರ್ ಬಿ.ಎನ್.ಲೋಹಿತ್, ಪೊಲೀಸ್ ಪೇದೆಗಳಾದ ರಂಗಸ್ವಾಮಿ ಮತ್ತು ಎಸ್.ಬಿ.ಕೆಂಪರಾಜು ಕೂಡ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ತಮ್ಮ ಮಗನಾದ ಪ್ರಶಾಂತ್‌ನನ್ನು ಅಂದಿನ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್, ಯಶವಂತಪುರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಂ.ಕೆ.ಗಣಪತಿ, ಸಬ್‌ಇನ್ಸ್‌ಪೆಕ್ಟರ್ ಬಿ.ಎನ್.ಲೋಹಿತ್, ಪೇದೆಗಳಾದ ರಂಗಸ್ವಾಮಿ, ಕೆಂಪರಾಜು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದ್ದಾರೆ ಎಂದು ಸಹೋದರ ಲಕ್ಷ್ಮಿಕಾಂತ್ ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ಇದೀಗ ದೂರು ದಾಖಲಿಸಿಕೊಂಡಿರುವ ಲೋಕಾಯುಕ್ತ ನ್ಯಾಯಾಲಯ ಕೆಳಹಂತದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ ನೀಡಿ ವರದಿ ನೀಡುವಂತೆ ಸೂಚಿಸಿದೆ. ಪ್ರಕರಣದ ಹಿನ್ನೆಲೆ: ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಕ್ಷ್ಮಿಕಾಂತ್ ಆರ್.ಎಂಬಾತ ಕಳ್ಳತನ ಸೇರಿದಂತೆ ಸಮಾಜಘಾತುಕ ಶಕ್ತಿಗಳಲ್ಲಿ ತೊಡಗಿಕೊಂಡಿದ್ದರಿಂದ ಈತನನ್ನು ರೌಡಿಶೀಟರ್‌ಗೆ ಸೇರ್ಪಡೆ ಮಾಡಲಾಗಿತ್ತು.
2010 ಫೆಬ್ರವರಿ 25ರಂದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬಳು ಪ್ರಶಾಂತ್ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಭಾಗದಲ್ಲಿ ಈತನ ಉಪಟಳ ಹೆಚ್ಚಾದಾಗ ಶರಣಾಗುವಂತೆ ಪೊಲೀಸರು ಸೂಚನೆ ಕೊಟ್ಟಿದ್ದರು. ಆದರೆ, ಪ್ರಶಾಂತ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಸೆ.17ರಂದು ಅಲೋಕ್‌ಕುಮಾರ್ ಸೂಚನೆಯಂತೆ ಯಶವಂತಪುರ ಇನ್ಸ್‌ಪೆಕ್ಟರ್ ಎಂ.ಕೆ.ಗಣಪತಿ ನೇತೃತ್ವದ ತಂಡ ಈತನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿತ್ತು. ಶರಣಾಗುವಂತೆ ಆತನಿಗೆ ಸೂಚನೆ ನೀಡಿದೆವು. ಆದರೆ, ಪೊಲೀಸರ ಮೇಲೆ ಪ್ರತಿದಾಳಿ ನಡೆಸಲು ಪ್ರಶಾಂತ್ ಮುಂದಾದ. ಇದರಿಂದ ಪ್ರಾಣ ರಕ್ಷಣೆಗಾಗಿ ನಾವು ಗುಂಡು ಹಾರಿಸಿದೆವು ಎಂದು ಪೊಲೀಸರು ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟಿದ್ದರು. ಆದರೆ, ಪ್ರಶಾಂತ್ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ಆತನ ಕುಟುಂಬದವರು ಇದೊಂದು ನಕಲಿ ಎನ್‌ಕೌಂಟರ್ ಎಂದು ಆರೋಪಿಸಿದ್ದರು. ಯಶವಂತಪುರ ಪೊಲೀಸರು ಪದೇ ಪದೇ ಹಣ ನೀಡುವಂತೆ ನನ್ನ ಸಹೋದರನಿಗೆ ಕಿರುಕುಳ ನೀಡುತ್ತಿದ್ದರು. ಹಣ ನೀಡಲು ಒಪ್ಪದಿದ್ದಾಗ ಆತನನ್ನು ರೌಡಿಶೀಟರ್‌ಗೆ ಸೇರ್ಪಡೆ ಮಾಡಲಾಗಿದೆ ಎಂದು ಆಪಾದಿಸಿದ್ದರು.
ಯಾವಾಗ ಎನ್‌ಕೌಂಟರ್ ನಡೆಯಿತೋ, ಪ್ರಶಾಂತ್ ಕುಟುಂಬದವರು ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಗೃಹ ಸಚಿವ ಆರ್.ಅಶೋಕ್, ಪೊಲೀಸ್ ಮಹಾನಿರ್ದೇಶಕರು, ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತನಿಖೆ ನಡೆಸುವಂತೆ ದೂರು ನೀಡಿದ್ದರು. ಇದೀಗ ಅಲೋಕ್‌ಕುಮಾರ್ ಅಕ್ರಮ ಒಂದಂಕಿ ಲಾಟರಿ ಪ್ರಕರಣದಲ್ಲಿ ಭಾಗಿಯಾಗಿ ಸೇವೆಯಿಂದ ಅಮಾನತುಗೊಂಡಿದ್ದಾರೆ. ತಮ್ಮ ಸಹೋದರನನ್ನು ಎನ್‌ಕೌಂಟರ್‌ನಲ್ಲಿ ದುರುದ್ದೇಶಪೂರ್ವಕವಾಗಿಯೇ ಹತ್ಯೆ ಮಾಡಲಾಗಿದೆ ಎಂದು ಆಪಾದಿಸಿದ್ದರು.
