ಸಮಾಜದ ಪ್ರತಿಯೊಬ್ಬ ಮಗುವೂ ವಿದ್ಯೆಯಿಂದ ವಂಚಿತನಾಗದಂತೆ ನೋಡಿಕೊಳ್ಳುವುದು ಸಂಘದ ಉದ್ದೇಶ – ಕರ್ನಿರೆ ವಿಶ್ವನಾಥ ಶೆಟ್ಟಿ
ಮುಂಬಯಿ: ಬಂಟರ ಸಂಘ ಮುಂಬಯಿ ವತಿಯಿಂದ ವಿದ್ಯಾರ್ಥಿವೇತನ ಹಾಗೂ ಸಹಾಯಧನ ವಿತರಣೆ ಕಾರ್ಯಕ್ರಮವು ಪ್ರಾರಂಭದಂದಿನಿಂದ ಇಂದಿನವರೆಗೂ ನಿರಂತರ ನಡೆಯುತ್ತಾ ಬಂದಿದೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಬಂಟ ಸಮಾಜದ ಪ್ರತಿಯೊಬ್ಬ ಮಗುವೂ ವಿದ್ಯೆಯಿಂದ ವಂಚಿತನಾಗದಂತೆ ನೋಡಿಕೊಳ್ಳುವುದು ಇಂದಿನ ಆರ್ಥಿಕ ಸಹಾಯ ವಿತರಣೆಯ ಉದ್ದೇಶವಾಗಿದೆ ಎಂದು ಮುಂಬಯಿ ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ನುಡಿದರು.
ಜೂ. 10ರಂದು ನಾಲಸೋಪರ (ಪ.) ಗ್ಯಾಲಕ್ಸಿ ಹೊಟೇಲ್ ಸಭಾಂಗಣದಲ್ಲಿ ಬಂಟರ ಸಂಘ ದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ವಯಿಂದ ವಸಾಯಿ – ಡಹಾಣು ಪ್ರಾದೇ ಶಿಕ ಸಮಿತಿ ಆಯೋಜಿಸಲಾದ ವಿದ್ಯಾರ್ಥಿವೇತನ ಹಾಗೂ ಸಹಾಯಧನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸಂಘದ ಮೂಲಕ ಧನ ಸಹಾಯ ಪಡೆದುಕೊಂಡ ವಿದ್ಯಾರ್ಥಿಗಳು ಈಗ ಉತ್ತಮ ಕೆಲಸದಲ್ಲಿದ್ದಾರೆ. ವಿದ್ಯಾರ್ಥಿಗಳು ವಿದ್ಯೆಯ ಕಡೆಗೆ ಗಮನಹರಿಸಬೇಕು. ಉತ್ತಮ ವಿದ್ಯೆಯನ್ನು ಪಡೆದರೆ ನಿಮ್ಮ ಜೀವನ ಶೈಲಿಯೇ ಬದಲಾಗುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಯವರು ಮಾತನಾಡಿ, ಇಂದಿನ ಕಾರ್ಯಕ್ರಮ ಬಂಟರ ಸಂಘದ ಬೃಹತ್ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ನಮ್ಮ ಸಮಾಜದ ಮಕ್ಕಳು ಒಳ್ಳೆಯ ವಿದ್ಯೆಯನ್ನು ಪಡೆದು ಉತ್ತಮ ವ್ಯಕ್ತಿಯಾಗಿ ಬೆಳೆದು, ಬಂಟ ಸಮಾಜದ ಕೀರ್ತಿಗೆ ಪಾತ್ರರಾಗಬೇಕು. ಬಂಟರ ಸಂಘವು ವಿಶ್ವಮಟ್ಟದಲ್ಲಿ ಹೆಗ್ಗಳಿಕೆಯನ್ನು ಪಡೆದುಕೊಳ್ಳಬೇಕು ಎಂದರು.
ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಮಾತನಾಡಿ, ಈ ಕಾರ್ಯಕ್ರಮ ಸಂಘದ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಇದಲ್ಲದೆ, 100 ವಿದ್ಯಾರ್ಥಿಗಳಿಗೆ ಸಂಪೂರ್ಣ ಶಿಕ್ಷಣವನ್ನು ಕೊಡುವ ಯೋಜನೆಯನ್ನೂ ನಾವು ಮುಂದಿನ ದಿನದಲ್ಲಿ ಹಮ್ಮಿಕೊಂಡಿದ್ದೇವೆ ಎಂದರು.
ಶಶಿಧರ್ ಶೆಟ್ಟಿ ಕಾರ್ಯಾಧ್ಯಕ್ಷ, ವಸಾಯಿ-ಡಹಾಣು ಪ್ರಾದೇಶಿಕ ಸಮಿತಿ ಮಾತನಾಡಿ ಬಂಟರ ಸಂಘವು ಪ್ರತಿ ವರ್ಷ ಇಂಥ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಹಲವಾರು ವಿದ್ಯಾರ್ಥಿಗಳು ಇದರ ಲಾಭ ಪಡೆದಿದ್ದಾರೆ. ಬೃಹತ್ ಮೊತ್ತದಲ್ಲಿ ವಿದ್ಯಾರ್ಥಿವೇತನವನ್ನು ನೀಡುತ್ತಿರುವ ಜಾತೀಯ ಸಂಸ್ಥೆಗಳಲ್ಲಿ ಬಹುಶಃ ಬಂಟರ ಸಂಘವೇ ಪ್ರಥಮ. ಇದರ ಪ್ರಯೋಜವನ್ನು ಸ್ಥಳೀಯ ಸಮಾಜದ ವಿದ್ಯಾರ್ಥಿಗಳು ಪಡೆಯಬೇಕೆಂದರು.
ವೇದಿಕೆಯಲ್ಲಿ ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಉಳ್ತೂರು ಮೋಹನ್‌ದಾಸ್ ಶೆಟ್ಟಿ, ಸಮನ್ವಯ ಸಮಿತಿ ಕಾರ್ಯಾಧ್ಯಕ್ಷ ಮುಂಡಪ್ಪ ಪಯ್ಯಡೆ, ಸಂಘದ ಜೊತೆ ಕಾರ್ಯದರ್ಶಿ ಕಿಶೋರ್ ಶೆಟ್ಟಿ ಕುತ್ಯಾರ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ ಕಾರ್ನಾಡ್, ಕೋಶಾಧಿಕಾರಿ ಸಿಎ ರಮೇಶ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶರ್ಮಿಳಾ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ಅರುಣ್ ಶೆಟ್ಟಿ, ಕೋಶಾಧಿಕಾರಿ ವಿಜಯ್ ಶೆಟ್ಟಿ, ಸಮಾಜ ಕಲ್ಯಾಣ ಸಮಿತಿಯ ರವೀಂದ್ರ ಶೆಟ್ಟಿ, ಉಪಕಾರ್ಯಾಧ್ಯಕ್ಷ ಮೋಹನ್ ವಿ. ಶೆಟ್ಟಿ, ಇನ್ನಿತರರು ಉಪಸ್ಥಿತರಿದ್ದರು.
ಶ್ರೀಮಾ ಆಳ್ವ ಪ್ರಾರ್ಥಿಸಿದರು. ಸಮನ್ವಯ ಸಮಿತಿ ಸಂಚಾಲಕ ಹಾಗೂ ವಸಾಯಿ ಕರ್ನಾಟಕ ಸಂಘದ ಅಧ್ಯಕ್ಷ ಕರ್ನಿರೆ ಶ್ರೀಧರ ಶೆಟ್ಟಿ ಸ್ವಾಗತಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರಿಗೆ ಶಾಲು ಹೊದೆಸಿ, ಪುಷ್ಪಗುಚ್ಚ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಪುಷ್ಪ ಗುಚ್ಚ ನೀಡಿ ಗೌರವಿಸಲಾಯಿತು. ಕಾರ್ಯದರ್ಶಿ ಪ್ರವೀಣ್ ಕಣಂಜಾರು ಕಾರ್ಯಕ್ರಮ ನಿರೂಪಿಸಿದರು. ಸಲಹಾ ಸಮಿತಿಯ ಕರ್ಯಾಧ್ಯಕ್ಷ ವಿಶ್ವನಾಥ್ ಪಿ. ಶೆಟ್ಟಿ ವಂದಿಸಿದರು.


