ಮುಂಬಯಿ : ದಿ. ಶ್ರೀಧರ ಚಂದಯ್ಯ ಶೆಟ್ಟಿಯವರ ನೇತೃತ್ವದಲ್ಲಿ ಸ್ಥಾಪನೆಗೊಂಡ ಬೋರಿವಲಿ ಪಸ್ಛಿಮ ಜಯರಾಜ ನಗರ ಶ್ರೀ ಮಹಿಷ ಮರ್ಧಿನಿ ದೇವಸ್ಥಾನದ 25ನೇ ವಾರ್ಷಿಕ ಮಹೋತ್ಸವವು ಮೇ 30ರಂದು ಪ್ರಾರಂಭಗೊಂಡಿದ್ದು ಜೂನ್ 4 ರಂದು ಅದ್ಧೂರಿಯಾಗಿ ಸಂಪನ್ನಗೊಂಡಿತು.
ಐದು ದಿನಗಳ ಕಾಲ ಜರಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಕೊಯ್ಯೂರು ನಂದಕುಮಾರ ತಂತ್ರಿಯವರ ನೇತೃತ್ವದಲ್ಲಿ ಗಣಹೋಮ, ಸಾರ್ವಜನಿಕ ನವಗ್ರಹ ಹೋಮ, ಅಶ್ಲೇಷ ಬಲಿ, ಪ್ರಸನ್ನ ಪೂಜೆ, ದೀಪ ಬಲಿ, ನಿತ್ಯ ಬಲಿ, ವಸಂತಕಟ್ಟಿ ಪೂಜೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಸೂಕ್ತ ಹೋಮ, ವಾಯುಸ್ತುತಿ ಹೋಮ, ಯಾತ್ರಾ ಹೋಮ, ಮಹಾಪೂಜೆ, ಸಾರ್ವಜನಿಕ ಮಹಾರಂಗ ಪೂಜೆ, ಮಹಾಭೂತ ಬಲಿ, ಭಜನೆ, ತೀರ್ಥ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಜರಗಿತು. ಕೊನೆಯ ದಿನ ಪೂರ್ವಾಹ್ನ ಧಾರ್ಮಿಕ ಪೂಜೆಗಳು ಜರಗಿದ್ದು ಸಾರ್ವಜನಿಕ ಅನ್ನ ಸಂತರ್ಪಣೆ ನಂತರ ಅಪರಾಹ್ನ ಉತ್ಸವ ಬಲಿ, ವಿಶೇಷ ಉತ್ಸವ ವಿಜ್ರಂಬಿತ ಮೆರವಣಿಗೆಯಲ್ಲಿ ಯಾತ್ರಾಮಹೋತ್ಸವ, ಧರ್ಮದೈವ ಕೊಡಮಣಿತ್ತಾಯಿ ದರ್ಶನ, ದೇವರ ಬೇಟೆ ಮತ್ತಿತರ ಧಾರ್ಮಿಕ ಕಾರ್ಯಕ್ರಮ ಜರಗಿತು. ಸಮೀಪದ ವಜಿರಾ ಶ್ರೀ ಗಣಪತಿ ದೇವಸ್ಥಾನಕ್ಕೆ ನಡೆದ ದೇವರ ಮೆರವಣಿಗೆಯಲ್ಲಿ ಅನೇಕ ಭಕ್ತಾಭಿಮಾನಿಗಳು ಭಾಗವಹಿಸಿದ್ದರು.
ಸ್ಥಳೀಯ ರಾಜಕಾರಿಣಿಗಳು, ಉದ್ಯಮಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿದ್ದು, ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಯರಾಜ ಎಸ್. ಶೆಟ್ಟಿ , ಕಣಜಾರು ಕೊಳಕೆಬೈಲು ಪ್ರದೀಪ ಸಿ. ಶೆಟ್ಟಿ, ಜಯಂತ ಶೆಟ್ಟಿ, ವೆಂಕಟರಮಣ ತಂತ್ರಿ ಮೊದಲಾದವರು ಸ್ವಾಗತಿಸಿದರು.
ಈ ಎಲ್ಲಾ ದಿನಗಳಲ್ಲಿ ಶ್ರೀ ಕ್ಷೇತ್ರಕ್ಕೆ ಸಾವಿರಾರು ಭಕ್ತಾಭಿಮಾನಿಗಳು ಆಗಮಿಸಿ ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿದರು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್











