ಮುಂಬೈ

ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಶಿವಸೇನೆ; ಲಂಗೋಟಿಯಲ್ಲಿ ಇಂಡಿಯಾಗೇಟ್ ಮುಂದೆ ನಿಲ್ಲಿ

Pinterest LinkedIn Tumblr

rahul

ಮುಂಬೈ: ಕೇಂದ್ರವನ್ನು ಸೂಟ್- ಬೂಟ್‌ ಸರ್ಕಾರ ಎಂದು ಪದೇ ಪದೇ ಹೀಯಾಳಿಸುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಶಿವಸೇನೆ ಖಾರವಾಗಿ ವಾಗ್ದಾಳಿ ನಡೆಸಿದೆ. “100 ರಾಹುಲ್ ಹುಟ್ಟಿ ಬಂದರು ಕೂಡ ಅವರು ಪ್ರಧಾನಿ ಮೋದಿಯವರ ವರ್ಚಸ್ಸಿಗೆ ಸಮನಾಗಲಾರು” ಎಂದು ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಸೇನೆ ಬರೆದಿದೆ.

“ಸೂಟ್‌ಕೇಸ್ ತುಲನೆಯಲ್ಲಿ ಸೂಟ್-ಬೂಟ್ ಸರ್ಕಾರವೇ ಉತ್ತಮವಾಗಿದೆ. ದೇಶದ ಉದ್ಯೋಗಪತಿಗಳು, ಕಾರ್ಪೋರೇಟ್ ಕ್ಷೇತ್ರದವರು ಸೂಟ್- ಬೂಟ್ ತ್ಯಜಿಸಿ ಲಂಗೋಟಿಯಲ್ಲಿ ಸುತ್ತಬೇಕು ಎಂಬುದು ಕಾಂಗ್ರೆಸ್ ಬಯಕೆಯಾಗಿದ್ದರೆ, ಅವರು ಉತ್ತಮ ಬಟ್ಟೆ ತೊಡುವುದು ಕಾಂಗ್ರೆಸ್‌ಗೆ ಸಮಸ್ಯೆ ಎನಿಸಿದರೆ ಎಲ್ಲರಿಗಿಂತ ಮೊದಲು ರಾಹುಲ್, ಮನಮೋಹನ್ ಸಿಂಗ್ ಮತ್ತು ಅಹಮದ್ ಪಟೇಲ್ ಲಂಗೋಟಿ ಉಟ್ಟುಕೊಂಡು ಇಂಡಿಯಾಗೇಟ್ ಮುಂದೆ ಬಂದು ನಿಂತು ತೋರಿಸಲಿ, ಈ ಮೂಲಕ ಆದರ್ಶವನ್ನು ನಿರ್ಮಿಸಲಿ”, ಎಂದು ಸೇನೆ ಸವಾಲು ಹಾಕಿದೆ.

“100 ರಾಹುಲ್ ಗಾಂಧಿ ಬಂದು ನಿಂತರೂ ಮೋದಿಯವರಿಗೆ ಸಮನಾಗಲಾರರು. 56 ದಿನಗಳ ರಹಸ್ಯಮಯ ರಜೆಗಳನ್ನು ಕಳೆದು ಬಂದ ನಂತರ ರಾಹುಲ್ ಚಲಿಸಲು, ಅಲುಗಾಡಲು, ಮಾತನಾಡಲು ಪ್ರಾರಂಭಿಸಿದ್ದಾರೆ. ಈ ಕಾರಣದಿಂದ ಕಾಂಗ್ರೆಸ್‌ನಲ್ಲಿ ಚೈತನ್ಯದ ಝರಿ ಹರಿಯ ಹತ್ತಿದೆ. ಆದರೆ ಮೋದಿ ಎಂಬ ಮಹಾ ಅಲೆಯ ಮುಂದೆ ಈ ಝರಿಯದೇನು ನಡೆಯುವುದಿಲ್ಲ”, ಎಂದು ಸೇನೆ ಅಣಕವಾಡಿದೆ.

ಮೋದಿಯವರನ್ನು ಅಪಾರವಾಗಿ ಶ್ಲಾಘಿಸಿರುವ ಸೇನೆ, “ಕೇವಲ ಒಂದು ವರ್ಷದಲ್ಲಿ ಕೈಗೊಂಡ ಮಹತ್ವದ ನಿರ್ಣಯಗಳ ಮೂಲಕ ಪ್ರಧಾನಿ ದೇಶದ ಹಿರಿಮೆಯನ್ನು ಜಾಗತಿಕವಾಗಿ ಎತ್ತರಕ್ಕೇರಿಸಿದ್ದಾರೆ”, ಎಂದು ಹೇಳಿದೆ.

Write A Comment