ರಾಷ್ಟ್ರೀಯ

60 ವರ್ಷದಿಂದ ಬಳಸದಿರುವ ಖಾತೆ ವಿವರ ವರ್ಷಾಂತ್ಯ ಬಹಿರಂಗ

Pinterest LinkedIn Tumblr

swiss_bank

ಜೂರಿಚ್/ನವದೆಹಲಿ: ಸ್ವಿಸ್ ಬ್ಯಾಂಕುಗಳಲ್ಲಿ ಖಾತೆ ಹೊಂದಿರುವ ಭಾರತೀಯರು ಹಾಗೂ ವಿದೇಶಿ ಪ್ರಜೆಗಳ ಹೆಸರುಗಳನ್ನು ಬಹಿರಂಗಪಡಿಸಲು ಆರಂಭಿಸಿದ ಬೆನ್ನಲ್ಲೇ ಸ್ವಿಜರ್ಲೆಂಡ್ ಸರ್ಕಾರವು ಮೊತ್ತಮೊದಲ ಬಾರಿಗೆ ಸ್ಥಗಿತಗೊಂಡ ಖಾತೆಗಳ ಪಟ್ಟಿ ನೀಡಲು ಮುಂದಾಗಿದೆ. ಸುಮಾರು 60 ವರ್ಷಗಳಿಂದ ಬಳಸದೇ ಇರುವ (ವಹಿವಾಟು ನಡೆಯದ) ಖಾತೆಗಳ ಪಟ್ಟಿಯನ್ನು ವರ್ಷಾಂತ್ಯದಲ್ಲಿ ಪ್ರಕಟಿಸುವುದಾಗಿ ಸ್ವಿಸ್ ಬ್ಯಾಂಕಿಂಗ್ ಒಂಬಡ್ಸ್‍ಮನ್ ತಿಳಿಸಿದೆ. ಜತೆಗೆ, ಈ ಖಾತೆಗಳ ಕಾನೂನುಬದ್ಧ ಫಲಾನುಭವಿಗಳಿಗೆ ಕ್ಲೈಮ್ ಮಾಡುವ ಅವಕಾಶವನ್ನೂ ನೀಡಿದೆ.

ಯಾರದ್ದಿರಬಹುದು ಖಾತೆಗಳು?

1955ರಿಂದಲೂ ಹಲವು ವ್ಯಕ್ತಿಗಳು, ಸಂಸ್ಥೆಗಳು ಸ್ವಿಸ್ ಬ್ಯಾಂಕುಗಳಲ್ಲಿ ಖಾತೆ ತೆರೆದಿದ್ದರೂ ಅವುಗಳು ಈಗ ಬಳಸದೇ ನಿಷ್ಕ್ರಿಯವಾಗಿವೆ. ಭಾರತದ ಹಿಂದಿನ ರಾಜರುಗಳು, ರಾಜಾ ಡಳಿತವಿದ್ದ ಕುಟುಂಬಗಳ ಸದಸ್ಯರು ಅಥವಾ ಶ್ರೀಮಂತ ವ್ಯಕ್ತಿಗಳು ಆ ಸಮಯದಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿ ಖಾತೆ ತೆರೆದು, ಬಳಿಕ ಅವುಗಳ ಒಡೆತನವನ್ನು ತಮ್ಮ ಮಕ್ಕಳಿಗೆ ವರ್ಗಾಯಿಸದೇ ಇದ್ದಿರಬಹುದು. ಸ್ವಿಸ್‍ನಲ್ಲಿರುವ ನಿಷ್ಕ್ರಿಯ ಖಾತೆಗಳು ಅವೇ ಆಗಿರಬಹುದು ಎಂದು ಊಹಿಸಲಾಗಿದೆ. ಆದರೆ ಸ್ವಿಸ್ ಅಧಿಕಾರಿಗಳಾಗಲೀ, ಬ್ಯಾಂಕುಗಳಾಗಲೀ ಅಂತಹ ಖಾತೆದಾರರ ರಾಷ್ಟ್ರೀಯತೆಯ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಆದರೂ, ಈ ಖಾತೆಗಳ ಪೈಕಿ ಕೆಲವೊಂದು ಭಾರತೀಯರಿಗೆ ಸೇರಿದ್ದು, 2015ರ ಅಂತ್ಯದೊಳಗೆ ಸಂಪೂರ್ಣ ಪಟ್ಟಿಯನ್ನು ಒದಗಿಸುವುದಾಗಿ ಸ್ವಿಸ್ ಬ್ಯಾಂಕುಗಳು ಸ್ಪಷ್ಟಪಡಿಸಿವೆ. ಇದೇ

ವೇಳೆ, ಈ ಬಳಸದ ಖಾತೆಗಳ ಪಟ್ಟಿಯಲ್ಲಿ ಕನಿಷ್ಠ 500 ಸ್ವಿಸ್ ಬ್ಯಾಂಕ್( ರು. 33, 893)ನಷ್ಟು ಬ್ಯಾಲೆನ್ಸ್ ಇರುವ ಖಾತೆಗಳೂ ಸೇರಿವೆ ಎಂದು ಸ್ವಿಸ್ ಬ್ಯಾಂಕಿಂಗ್ ಒಂಬಡ್ಸ್‍ಮನ್ ತಿಳಿಸಿದೆ.

ಖಾತೆ ನಿಷ್ಕ್ರಿಯವಾಗುವುದು ಹೇಗೆ?

ಸ್ವಿಜರ್ಲೆಂಡ್‍ನ ಕಾನೂನು ಪ್ರಕಾರ, ಒಂದು ವೇಳೆ ಖಾತೆ ತೆರೆದ ಗ್ರಾಹಕನು 10 ವರ್ಷಗಳ ಕಾಲ ಬ್ಯಾಂಕಿನೊಂದಿಗೆ ಯಾವುದೇ ವಹಿವಾಟು ನಡೆಸದೇ ಇದ್ದರೆ, ಸಂಪರ್ಕ ಹೊಂದದೇ ಇದ್ದರೆ ಅಂತಹ ಖಾತೆಗಳನ್ನು ನಿಷ್ಕ್ರಿಯವೆಂದು ಘೋಷಿಸಲಾಗುತ್ತದೆ. 60 ವರ್ಷಗಳ ಕಾಲ ಖಾತೆಯು ನಿಷ್ಕ್ರಿಯವಾಗಿಯೇ ಉಳಿದರೆ ಆ ಖಾತೆಗಳ ವಿವರಗಳನ್ನು ಬಹಿರಂಗ

ಪಡಿಸಲಾಗುತ್ತದೆ. ಫಲಾನುಭವಿಗಳು ಯಾರೂ ಮುಂದೆ ಬರದೇ ಇದ್ದಲ್ಲಿ, ಆ ಖಾತೆಯನ್ನು ಸಮಾಪ್ತಿಗೊಳಿಸಿ, ಹಣವನ್ನು ಸ್ವಿಸ್ ಒಕ್ಕೂಟಕ್ಕೆ ವರ್ಗಾಯಿಸಲಾಗುತ್ತದೆ.

ಸಂದೇಹ ಪರಿಹರಿಸದಿದ್ದರೆ ದಂಡ

ಇನ್ನು ಮುಂದೆ ನೀವು ತೆರಿಗೆ ಇಲಾಖೆಯ ಸಂದೇಹಗಳನ್ನು ಪರಿಹರಿಸದೇ ಹೋದಲ್ಲಿ ರು. 2 ಲಕ್ಷ ದಂಡ ಪಾವತಿಸಬೇಕಾಗುತ್ತದೆ. ಇತ್ತೀಚೆಗಷ್ಟೇ ಸಂಸತ್‍ನ ಅನುಮೋದನೆ ಪಡೆದ ಹೊಸ ಕಪ್ಪುಹಣ ಕಾನೂನಿನ ಪ್ರಕಾರ, ತೆರಿಗೆದಾರರು ತೆರಿಗೆ ಇಲಾಖೆಯ ಎಲ್ಲ ಸಂದೇಹಗಳಿಗೆ ಉತ್ತರ ನೀಡಬೇಕಾದ್ದು ಕಡ್ಡಾಯ. ಉತ್ತರಿಸುವಲ್ಲಿ ವಿಫಲರಾದರೆ ಕನಿಷ್ಠ ರು.50 ಸಾವಿರದಿಂದ ರು. 2 ಲಕ್ಷದವರೆಗೆ ದಂಡ ಪಾವತಿಸಬೇಕಾಗುತ್ತದೆ. ತೆರಿಗೆದಾರನು ವಿದೇಶಗಳಲ್ಲಿ ಕಪ್ಪುಹಣ ಇಟ್ಟಿರಬಹುದು ಎಂಬ ಸಂದೇಹ ಬಂದಲ್ಲಿ ತೆರಿಗೆ ಇಲಾಖೆಯು ಈ ಬಗ್ಗೆ ತೆರಿಗೆದಾರನಿಗೆ ಅಂಚೆ, ಇಮೇಲ್ ಅಥವಾ ಫಾಕ್ಸ್ ಮೂಲಕ ನೋಟಿಸ್ ಅಥವಾ ಸಮನ್ಸ್ ಕಳುಹಿಸುತ್ತದೆ. ಇಲಾಖೆಯ ಪ್ರಶ್ನೆಗಳಿಗೆ ತೃಪ್ತಿದಾಯಕ ಉತ್ತರ ನೀಡದೇ ಇದ್ದಲ್ಲಿ ದಂಡ ಪಾವತಿಸಬೇಕಾದ್ದು ಕಡ್ಡಾಯವಾಗುತ್ತದೆ. ಈ ಹೊಸ ಕಪ್ಪುಹಣ ಕಾಯ್ದೆಗೆ ರಾಷ್ಟ್ರಪತಿ ಪ್ರಣಬ್ ಅವರು ಅಂಕಿತ ಹಾಕಿದ್ದು, 2016ರ ಏ.1ರಿಂದ ಜಾರಿಯಾಗಲಿದೆ. ಮೇ 13ರಂದು ಈ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿತ್ತು.

Write A Comment