ಚೆನ್ನೈ: ರಭಸವಾಗಿ ದೋಣಿಗೆ ಬಡಿಯುತ್ತಿದ್ದ ಭಾರೀ ಅಲೆಗಳ ನಡುವೆ ಸಾಗರದ ಮಧ್ಯದಲ್ಲಿ ಉಸಿರುಬಿಗಿಹಿಡಿದು ದೋಣಿಯಲ್ಲಿ ಕುಳಿತಿದ್ದರು. ಉಪ್ಪುನೀರು, ಮೂತ್ರ ಮತ್ತು ಹಸಿ ಮೀನನ್ನು ತಿಂದು 8 ದಿನಗಳ ಕಾಲ ಜೀವವುಳಿಸಿಕೊಂಡಿದ್ದರು. ಸ್ಥಳೀಯ ಮೀನುಗಾರರು ಆಂಧ್ರದ ಮಚಲೀಪಟ್ನಂ ತೀರದಲ್ಲಿ ಅವರನ್ನು ಪತ್ತೆಹಚ್ಚಿದರು. ಕಾಸಿಮೇಡುವಿನ ಐವರು ಮೀನುಗಾರರು ದೋಣಿಯಲ್ಲಿ ನಾಪತ್ತೆಯಾದಾಗ ಸತ್ತಿದ್ದಾರೆಂದೇ ಭಾವಿಸಲಾಗಿತ್ತು. ಆದರೆ ಆಶ್ಚರ್ಯಕರ ರೀತಿಯಲ್ಲಿ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದರು. ವಿಜಯವಾಡದಿಂದ 200 ಕಿಮೀ ದೂರದ ಮಚಲೀಪಟ್ನಂನಿಂದ ಭಾನುವಾರ ಬೆಳಿಗ್ಗೆ ಅವರನ್ನು ಮನೆಗೆ ಕರೆತರಲಾಯಿತು.
ಮೇ 22 ರ ಮಧ್ಯಾಹ್ನ ಸೋದರರಾದ ಕಾಡುಂಬಡಿ ಮತ್ತು ಮಾಯಂಡಿ, ಶಕ್ತಿವೇಲ್, ಸುರೇಶ್ ಮತ್ತು ಮಣಿ 30 ಅಡಿ ಉದ್ದದ ಫೈಬರ್ ದೋಣಿಯಲ್ಲಿ ಕಾಸಿಮೇಡು ಬಂದರಿನಿಂದ ಸಮುದ್ರಕ್ಕೆ ಇಳಿದಿದ್ದರು. ದಡದಿಂದ 20 ಕಿಮೀ ದೂರದವರೆಗೆ ಸಾಗಿದ್ದ ಅವರು ಮತ್ತೆ ವಾಪಸಾಗುವಾಗ ಸಮುದ್ರ ಉಕ್ಕೇರಿತು. ಭಾರೀ ಅಲೆಯೊಂದು ಅಪ್ಪಳಿಸಿ ದೋಣಿಯನ್ನು ತಲೆಕೆಳಗು ಮಾಡಿತು. ದೋಣಿಯಲ್ಲಿದ್ದ ಎಲ್ಲವೂ ನೀರುಪಾಲಾಗಿ ಜೀವವೊಂದು ಉಳಿದಿತ್ತು ಎಂದು ಮಾಯಂಡಿ ಬಂದರಿನಲ್ಲಿ ಹೇಳುವಾಗ ನಿಟ್ಟುಸಿರು ಬಿಟ್ಟಿದ್ದ.
ಕೆಲವು ದಿನಗಳಲ್ಲಿ ದೇಹದ ನೀರಿನಾಂಶ ಕರಗಿತು. ಅವರ ಮೂತ್ರವನ್ನೇ ಕುಡಿದು ಜೀವವುಳಿಸಿಕೊಂಡರು. ಹಸಿ ಮೀನು ಎಂದೂ ತಿನ್ನದವರು ಅದನ್ನೂ ತಿಂದರು.
ಸಾಯುವುದಾದರೆ ಎಲ್ಲರೂ ಒಟ್ಟಿಗೆ ಸಾಯುವುದೆಂದು ಶಪಥ ಮಾಡಿದೆವು. ಎಷ್ಟೊಂದು ಘೋರ ಹಸಿವಿತ್ತೆಂದರೆ ನಮ್ಮಲ್ಲಿ ಯಾರಾದರೊಬ್ಬರು ಸತ್ತಿದ್ದರೆ ಉಳಿದವರು ಮೃತದೇಹದ ಮಾಂಸವನ್ನು ಕಿತ್ತು ತಿಂದು ನರಭಕ್ಷಕರಾಗುತ್ತಿದ್ದೆವು ಎಂದು ಶಕ್ತಿವೇಲು ಹೇಳಿದರು.
ಅವರ ದೋಣಿಯ ಅಂಚುಗಳಿಗೆ ಅಪ್ಪಳಿಸಿದ ಅಲೆಗಳಿಂದ ದೇಹಗಳು ಜರ್ಜರಿತಗೊಂಡರೂ ಈ ದುಃಸ್ವಪ್ನದಿಂದ ಮೀನುಗಾರರೇನೂ ಹೆದರಿಲ್ಲ.ಮತ್ತೆ ತಮ್ಮ ಕಾಯಕ ಮುಂದುವರಿಸಲು ಸಮುದ್ರಕ್ಕೆ ಇಳಿಯಲು ಸಿದ್ಧವಾಗಿದ್ದಾರೆ.