ಮುಂಬಯಿ: “ಮೊದಲನೆದಾಗಿ ಅಂದಿನ ಕಾಲದಲ್ಲಿ ರಾತ್ರಿ ಶಾಲೆಯನ್ನು ಸ್ಥಾಪಿಸಿದ ನಮ್ಮ ಹಿರಿಯರನ್ನು ನೆನಪಿಸೋಣ. ಯಾಕೆಂದರೆ ಆ ಕಾಲದಲ್ಲಿ ಊರಿಂದ ಆಗಮಿಸಿದ ನಮ್ಮವರು ವಿದ್ಯೆಯಿಂದ ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ ನಮ್ಮ ಹಿರಿಯರು ಈ ರಾತ್ರಿ ಶಾಲೆಗಳನ್ನು ಪ್ರಾರಂಭಿಸಿದ್ದಾರೆ. ಬಾಷೆ ಕೇವಲ ಒಂದು ಮಾಧ್ಯಮವಾಗಿದ್ದು ರಾತ್ರಿ ಶಾಲೆ, ಕನ್ನಡ ಮಾಧ್ಯಮದ ಬಗ್ಗೆ ಕೀಳರಿಮೆ ಬೇಡ, ರಾತ್ರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತವರು ಅನೇಕರು ಇಂದು ದೊಡ್ಡ ಉದ್ಯಮಿಗಳಾಗಿದ್ದಾರೆ ಮಾತ್ರವಲ್ಲದೆ ಉನ್ನತ ಮಟ್ಟದ ಉದ್ಯೋಗದಲ್ಲಿರುವರು. ರಾತ್ರಿ ಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಾದ ನಿಮಗೂ ಉತ್ತಮ ಭವಿಷ್ಯವಿದೆ” ಎಂದು ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಬಂಟರ ಸಂಘದ ಮುಖವಾಣಿ ಬಂಟರವಾಣಿ ಅಂತರ್‌ಶಾಲಾ-ಕಾಲೇಜು ಪ್ರತಿಭಾ ಸ್ಪರ್ಧೆ ಹಾಗೂ ಸಂಘದ ರಾತ್ರಿ ಶಾಲೆಗಳಾದ ಕರ್ನಾಟಕ ಫ್ರೀ ನೈಟ್ ಹೈಸ್ಕೂಲ್ ಘಾಟ್‌ಕೋಪರ್, ಶ್ರೀ ನಿತ್ಯಾನಂದ ಫ್ರೀ ನೈಟ್ ಹೈಸ್ಕೂಲ್ ಇದರ ವಾರ್ಷಿಕೋತ್ಸವ ಸಮಾರಂಭವು ಫೆ. 14 ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಆಡಿಟೋರಿಯಂನಲ್ಲಿ ಜರಗಿದ್ದು ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ಬಂಟರವಾಣಿ ಪತ್ರಿಕೆಯು ಚೆನ್ನಾಗಿ ಬರುತ್ತಿದ್ದು ಬಂಟರವಾಣಿಯ ಸಂಪಾದಕೀಯ ಮಂಡಳಿ ಹಾಗೂ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯವನ್ನು ಅಭಿನಂದಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಮುಲುಂಡ್ ಬಂಟ್ಸ್ ನ ಅಧ್ಯಕ್ಷ, ಡಾ| ಸತ್ಯಪ್ರಕಾಶ್ ಶೆಟ್ಟಿ ಆಗಮಿಸಿದ್ದು, ಸ್ಪರ್ಥೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳನ್ನು ಅಭಿನಂದಿಸುತ್ತಾ , ಸ್ಪರ್ಥೆ ಪ್ರಗತಿಗೆ ಪೂರಕ, ಸೋಲು ಗೆಲುವು ಮುಖ್ಯವಲ್ಲ. ಬಂಟರ ಸಂಘವು ಹಲವಾರು ರೀತಿಯಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹವನ್ನು ನೀಡುತ್ತಿದ್ದು ಈ ಬಗ್ಗೆ ಒಂದು ಕ್ರಾಂತಿಯನ್ನೇ ಮಾಡುತ್ತಿದೆ. ವಿದ್ಯೆಯಿಂದ ಬಡತನ ನಿವಾರಣೆ ಸಾಧ್ಯ ಎಂದ ಅವರು. ಪ್ರಾಮಾಣಿಕತೆ, ಪ್ರಯತ್ನ ಹಾಗೂ ಪ್ರತಿಭೆಯಿಂದ ಜೀವನದಲ್ಲಿ ಯಸಸ್ಸನ್ನು ಗಳಿಸಬಹುದು ಎಂದರು. ಬಂಟರವಾಣಿ ಪತ್ರಿಕೆಯು ಸಮುದಾಯವನ್ನು ಒಂದೆಡೆ ಸೇರಿಸುವ ಮಾಧ್ಯಮವಾಗಿದೆ, ಇದಕ್ಕೆ ಉಜ್ವಲ ಭವಿಷ್ಯವಿದೆ. ಮಕ್ಕಳು ಮೊದಲು ಮಾತೃಪ್ರೇಮಿಗಳಾಗಿ, ದೇಶ ಪ್ರೇಮಿಗಳಾಗಿ ಎಳೆಯ ವಯಸ್ಸಲ್ಲೇ ಮಕ್ಕಳಿಗೆ ಮಾತೃ ಭಾಷೆಯನ್ನು ಕಲಿಸಿರಿ. ಅದೇ ರೀತಿ ನಮ್ಮ ರಾಜ್ಯದ ಭಾಷೆ ಹಾಗೂ ಇತರ ಬಾಷೆಗಳನ್ನು ಕಲಿಯುವಂತಾಗಲಿ ಎಂದು ಮಕ್ಕಳಿಗೆ ಶುಭ ಹಾರೈಸಿದರು.
ಪ್ರತಿಭಾ ಸ್ಪರ್ಧೆಯ ತೀರ್ಪುಗಾರರಾಗಿ ವಿಶ್ವನಾಥ ನಿಡ್ಡೋಡಿ, ಎನ್. ಶಿವರಾಜ್, ಯಮುನಾ ಆರ್. ಶೆಟ್ಟಿ ಮತ್ತು ನವೀನ್ ಶೆಟ್ಟಿ ಯವರು ಸಹಕರಿಸಿದರು. ಪ್ರತಿಭಾ ಸ್ಪರ್ಧೆಯನ್ನು ಡಾ. ಸುನಿತಾ ಶೆಟ್ಟಿ, ಲತಾ ಪಿ. ಶೆಟ್ಟಿ ಮತ್ತು ಚಿತ್ರ ಆರ್. ಶೆಟ್ಟಿಯವರು ನಿರ್ವಹಿಸಿದರು.
ಬಂಟರವಾಣಿಯ ಅಂತರ್‌ಶಾಲಾ-ಕಾಲೇಜು ಪ್ರತಿಭಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ಹಾಗೂ ಚಲಿತ ಫಲಕಗಳನ್ನು ಸಂಘದ ವಿವಿಧ ಉಪಸಮಿತಿಗಳ ಕಾರ್ಯಾಧ್ಯಕ್ಷರು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿಶ್ವಸ್ಥರು, ಮಾಜಿ ಅಧ್ಯಕ್ಷರುಗಳು, ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಮಹಿಳಾ ವಿಭಾಗದ, ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯರು ವಿತರಿಸಿದರು.
ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ ಅವರು ಸ್ವಾಗತಿಸಿ ಬಂಟರವಾಣಿ ಪತ್ರಿಕೆ ನಡೆದು ಬಂದ ದಾರಿಯ ಬಗ್ಗೆ ವಿವರ ನೀಡುತ್ತಾ ಪತ್ರಿಕೆಯ ಯಶಸ್ಸಿಗೆ ಶ್ರಮಿಸಿದ ಎಲ್ಲರನ್ನು ನೆನಪಿಸಿಕೊಂಡರು.
ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಎನ್. ವಿವೇಕ್ ಶೆಟ್ಟಿ ಅವರು ಮಾತನಾಡಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಸಮಾರಂಭಕ್ಕೆ ಅನಿರೀಕ್ಷಿತವಾಗಿ ಆಗಮಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಂಗಳೂರಿನ ಸಮಾಜ ಸೇವಕ ಮೊನಪ್ಪ ಭಂಡಾರಿಯನ್ನು ಸನ್ಮಾನಿಸಲಾಯಿತು.
ಬಂಟರವಾಣಿಯ ಸಂಪಾದಕ ಪ್ರೇಮನಾಥ ಮುಂಡ್ಕೂರು ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಭಾಸ್ಕರ ಶೆಟ್ಟಿ ಕಾರ್ನಾಡ್ ವಂದನಾರ್ಪಣೆಗೈದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ, ಕೋಶಾಧಿಕಾರಿ ಸಿಎ ಐ. ಆರ್. ಶೆಟ್ಟಿ, , ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಉಪಕಾರ್ಯಾಧ್ಯಕ್ಷ ಅಪ್ಪಣ್ಣ ಎಂ. ಶೆಟ್ಟಿ, ಕೋಶಾಧಿಕಾರಿ ಸಿಎ ರಮೇಶ್ ಶೆಟ್ಟಿ, ಬಂಟರವಾಣಿಯ ಸಂಪಾದಕ ಪ್ರೇಮನಾಥ ಶೆಟ್ಟಿ ಮುಂಡ್ಕೂರು, ಶಾಲೆಯ ಸೂಪರ್‌ವೈಸರ್ ಸಂಜೀವ ಎಂ. ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು. ಖ್ಯಾತ ರಂಗ ಕಲಾವಿದ ತೋನ್ಸೆ ವಿಜಯ ಕುಮಾರ್ ಶೆಟ್ಟಿಯವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್