ಮುಂಬೈ

ಒಬಾಮಾ ಆಯಸ್ಸಿನಲ್ಲಿ ಆರು ಗಂಟೆ ಕಸಿದ ದಿಲ್ಲಿ ಮಾಲಿನ್ಯ!

Pinterest LinkedIn Tumblr

modi obama

ಮುಂಬಯಿ: ಗಣರಾಜ್ಯೋತ್ಸವದ ಅತಿಥಿಯಾಗಿ ಭಾರತಕ್ಕೆ ಬಂದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಆಯುಷ್ಯವು ಆರು ತಾಸು ಕ್ಷೀಣಿಸಿದೆಯಂತೆ! ಇದಕ್ಕೆ ಕಾರಣ ದಿಲ್ಲಿಯಲ್ಲಿನ ವಾಯು ಮಾಲಿನ್ಯ.

ರಾಜಧಾನಿಯಲ್ಲಿರುವ ವಿಷಕಾರಿ ಗಾಳಿಯ ಸೇವನೆಯಿಂದ ದಿನಕ್ಕೆ ಕನಿಷ್ಟ ಎರಡು ಗಂಟೆ ಎಂದರೂ, ಒಬಾಮಾ ಅವರ ಆಯುಷ್ಯ ಸುಮಾರು ಆರು ಗಂಟೆಗಳಷ್ಟು ಕಡಿಮೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಒಬಾಮಾ ಅವರು ಏರ್‌ಫೋರ್ಸ್ ಒನ್ ವಿಮಾನ ಬಂದಿಳಿದಾಗ ದಿಲ್ಲಿಯಲ್ಲಿ ಭಾರಿ ಹೊಗೆ ಹಾಗೂ ದಟ್ಟ ಮಂಜು ಆವರಿಸಿತ್ತು. ಇದು ಕೇವಲ ಒಂದು ದಿನದ ಪರಿಸ್ಥಿತಿಯಲ್ಲ. ದಿಲ್ಲಿಯನ್ನು ಹತ್ತಿರದಿಂದ ಬಲ್ಲವರಿಗೆ ಅಲ್ಲಿನ ವಾಯು ಮಾಲಿನ್ಯದ ಕರಾಳ ರೂಪ ಗೊತ್ತೇ ಇದೆ.

ವಿಶ್ವದಲ್ಲೇ ಅತಿ ಹೆಚ್ಚು ವಿಷಕಾರಿ ಗಾಳಿಯು ದಿಲ್ಲಿಯಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಅಧ್ಯಯನದಿಂದ ದೃಢಪಟ್ಟಿದೆ. ಇಲ್ಲಿನ ಗಾಳಿಯಲ್ಲಿ ಮಿಳಿತವಾಗಿರುವ ಧೂಳಿನ ಕಣಗಳ ಪ್ರಮಾಣವನ್ನು ‘ಪಿಎಂ 2.5’ ಎಂದು ತಾಂತ್ರಿಕ ಭಾಷೆಯಲ್ಲಿ ಹೇಳುತ್ತಾರೆ. ಅಥವಾ ಇಂಗ್ಲಿಷ್‌ನಲ್ಲಿ ಇದನ್ನು ‘ಚ್ಟಠಿಜ್ಚ್ಠ್ಝಿಠಿಛಿ ಞಠಿಠಿಛ್ಟಿ’ ಎನ್ನಬಹುದು. ಈ ಕಣಗಳು ಶ್ವಾಸಕೋಶಕ್ಕೆ ಲಗ್ಗೆ ಇಟ್ಟರೆ ಮನುಷ್ಯ ಶ್ವಾಸಕೋಶ ಕ್ಯಾನ್ಸರ್ ಇಲ್ಲವೇ ಹೃದಯಾಘಾತಕ್ಕೆ ಈಡಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಒಬಾಮಾ ಅವರು ದಿಲ್ಲಿಯಲ್ಲಿದ್ದ ವೇಳೆ ಅಲ್ಲಿನ ಪ್ರತೀ ಘನ ಮೀಟರ್‌ನಲ್ಲೂ ಸರಾಸರಿ 76 ರಿಂದ 86 ಮೈಕ್ರೋಗ್ರಾಂನಷ್ಟು ಧೂಳಿನ ಕಣಗಳಿತ್ತು ಎಂದು ಭಾರತೀಯ ಭೂವಿಜ್ಞಾನ ಸಚಿವಾಲಯ ನೀಡಿರುವ ವರದಿಯಿಂದ ತಿಳಿದುಬಂದಿದೆ. ಈ ಲೆಕ್ಕದಲ್ಲಿ 24 ತಾಸು ಉಸಿರಾಟದಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮವನ್ನು ಅಂದಾಜಿಸಿ ಅಮೆರಿಕ ಅಧ್ಯಕ್ಷರು ಕನಿಷ್ಠವೆಂದರೂ 6 ತಾಸಿನಷ್ಟು ಆಯುಷ್ಯ ಕಳೆದುಕೊಂಡಿದ್ದಾರೆ ಎಂದು ಕೇಂಬ್ರಿಡ್ಜ್ ವಿವಿಯ ಸಂಶೋಧಕರಾದ ಡೇವಿಡ್ ಸ್ಪೈಗೆಲ್ಹಾಲ್ಟರ್ ತಿಳಿಸಿದ್ದಾರೆ.

ಔದ್ಯಮೀಕರಣ ಸೇರಿದಂತೆ ಪ್ರಗತಿಗೆ ಎಷ್ಟೇ ಒತ್ತು ನೀಡಿದರೂ ನಗರಗಳಲ್ಲಿ ಮಾಲಿನ್ಯದ ಮಿತಿ ಮೀರದಂತೆ ಎಚ್ಚರಿಕೆವಹಿಸಬೇಕು ಎಂದು ವಿಶ್ವಸಂಸ್ಥೆ ಮಾನದಂಡವೊಂದನ್ನು ನಿಗದಿಪಡಿಸಿದೆ. ಆದರೆ, ದಿಲ್ಲಿನ ಮಾಲಿನ್ಯ ಪ್ರಮಾಣ ವಿಶ್ವಸಂಸ್ಥೆ ನಿಗದಿಪಡಿಸಿದ್ದಕ್ಕಿಂತ 15ರಿಂದ 20 ಪಟ್ಟು ಹೆಚ್ಚಿದೆಯಂತೆ.

ವಿಶ್ವದ 1,600 ನಗರಗಳಲ್ಲಿನ ಮಾಲಿನ್ಯದ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ 2008ರಿಂದ 2013ರವರೆಗೆ ಸಮೀಕ್ಷೆ ನಡೆಸಿ ಪಟ್ಟಿಯೊಂದನ್ನು ಸಿದ್ಧಪಡಿಸಿದೆ. ಇದರ ಪ್ರಕಾರ ಅತೀ ಹೆಚ್ಚು ವಾಯು ಮಾಲಿನ್ಯವಿರುವ 20 ನಗರಗಳು ಭಾರತವೊಂದರಲ್ಲೇ ಇವೆ. ಇದಕ್ಕೆ ಅಮೆರಿಕವೂ ಹೊರತಾಗಿಲ್ಲ.ಫ್ರಸ್ನೊ, ಕ್ಯಾಲಿಫೋರ್ನಿಯಾದಲ್ಲೂ ಮಾಲಿನ್ಯದ ಪರಿಸ್ಥಿತಿ ಹೀಗೇ ಇದೆ ಎಂದು ಸಮೀಕ್ಷೆ ಹೇಳುತ್ತದೆ.

ಎಂಟು ಸಿಗರೇಟುಗಳಿಗೆ ಸಮ ದಿಲ್ಲಿಯಲ್ಲಿನ ವಿಷಕಾರಿ ಗಾಳಿಯನ್ನು ಒಂದು ದಿನ ಉಸಿರಾಡುವುದು ಎಂಟು ಸಿಗರೇಟುಗಳನ್ನು ಸೇದಿದ್ದಕ್ಕೆ ಸಮವಾಗುತ್ತದೆ ಎಂದು ತಜ್ಞರಾದ ಡೇವಿಡ್ ಅಭಿಪ್ರಾಯಪಡುತ್ತಾರೆ. ”ದಿಲ್ಲಿ ಒಂದು ಅದ್ಭುತ ನಗರ. ಅಲ್ಲಿರುವ ತಾಣಗಳು ಯಾರನ್ನಾದರೂ ಆಕರ್ಷಿಸುತ್ತವೆ. ಆದರೆ, ವಾತಾವರಣದಲ್ಲಿರುವ ವಿಷಕಾರಿ ಗಾಳಿಯು ಸ್ಥಳೀಯರನ್ನು ನಿಧಾನವಾಗಿ ಸಾವಿನ ದಡಕ್ಕೆ ದೂಕುತ್ತಿದೆ,” ಎಂದು ಡೇವಿಡ್ ಅವರು ಇ ಮೇಲ್‌ವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

1800 ಪ್ಯೂರಿಫಯರ್‌ಗಳ ಖರೀದಿ ವಾಯುಮಾಲಿನ್ಯ ಪ್ರಮಾಣ ವಿಪರೀತವಿದ್ದ ಕಾರಣದಿಂದ ಒಬಾಮಾ ಅವರು ದಿಲ್ಲಿಗೆ ಬರಲು ಹಿಂದೇಟುಹಾಕುತ್ತಿದ್ದಾರೆ ಎಂಬ ವರದಿಗಳು ಹೊರಬಿದ್ದಾಗ ಇದೊಂದು ಸುಳ್ಳಿನ ಕಂತೆ ಎಂದು ಕೆಲವರು ಜರೆದಿದ್ದರು. ಇದಕ್ಕೆ ಸ್ಪಷ್ಟನೆ ನೀಡಿರುವ ಒಬಾಮಾ ಅವರ ಸಲಹೆಗಾರ ಜಾನ್ ಪೊಡೆಸ್ಟಾ ಅವರು. ”ವಾಯುಮಾಲಿನ್ಯದ ಕಾರಣದಿಂದಾಗಿಯೇ ನಾವು ಈ ಭೇಟಿಯನ್ನು ರದ್ದು ಮಾಡುವಂತೆ ಸಲಹೆ ನೀಡಿದ್ದೆವು. ಒಬಾಮಾ ಅವರು ಬೀಜಿಂಗ್ ಸೇರಿದಂತೆ ವಾತಾವರಣ ಹದಗೆಟ್ಟಿರುವ ಇಂತಹ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಅದೂ ಅಲ್ಲದೆ ಒಬಾಮಾ ಅವರ ಭೇಟಿಗೂ ಮುನ್ನ ಹೊಸದಿಲ್ಲಿಯಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯು 1800 ಸ್ವೀಡನ್ ಏರ್ ಪ್ಯೂರಿಫಯರ್‌ಗಳನ್ನು ಖರೀದಿಸಿತ್ತು,” ಎಂದು ಪೊಡೆಸ್ಟಾ ತಿಳಿಸಿದ್ದಾರೆ.

Write A Comment