ರಾಷ್ಟ್ರೀಯ

ಸುಳ್ಳು ರೇಪ್ ಕೇಸ್ ಹಾಕಿದರೆ ಶಿಕ್ಷೆ: ದಿಲ್ಲಿ ಕೋರ್ಟ್

Pinterest LinkedIn Tumblr

court

ಹೊಸದಿಲ್ಲಿ: ಮಹಿಳೆಯರು ಸುಳ್ಳು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಿದರೆ ಅವರಿಗೆ ಶಿಕ್ಷೆಯಾಗಲೇಬೇಕು. ಸುಳ್ಳು ಪ್ರಕರಣ ದಾಖಲಿಸಿವ ಮಹಿಳೆಯನ್ನು ಸಂತ್ರಸ್ತೆ ಎಂದು ಪರಿಗಣಿಸದೆ ಪೀಡಕಿ ಎಂದು ಪರಿಗಣಿಸಬೇಕು ಎಂದು ದಿಲ್ಲಿ ಕೋರ್ಟ್ ಹೇಳಿದೆ.

ನ್ಯಾಯಾಲಯಗಳು ಸುಳ್ಳು ಅತ್ಯಾಚಾರ ಪ್ರಕರಣಗಳನ್ನು ಸೂಕ್ತವಾಗಿ ನಿರ್ವಹಿಸಬೇಕಾದ ದಿನಗಳು ಬಂದಿವೆ. ಸುಳ್ಳು ಪ್ರಕರಣಗಳು ದಾಖಲಾಗುವುದರಿಂದ ಅತ್ಯಾಚಾರ ಪ್ರಮಾಣ ಹೆಚ್ಚಳಗೊಂಡಂತೆ ಕಾಣಿಸುತ್ತದೆ. ಅಪರಾಧಗಳ ಅಂಕಿ-ಅಂಶ ಏರುಪೇರುಗೊಳ್ಳುವ ಜತೆಗೆ ಅತ್ಯಾಚಾರ ಅನ್ನುವುದು ಸಾಮಾನ್ಯ ಎಂಬ ಸನ್ನಿವೇಶವನ್ನು ಹುಟ್ಟು ಹಾಕಲು ಕಾರಣವಾಗುತ್ತದೆ. ಇಂಥ ಪ್ರಕರಣಗಳಲ್ಲಿ ಅತ್ಯಾಚಾರ ಕಾಯಿದೆಗೆ ಬಲಿಯಾಗುವ ಸಂತ್ರಸ್ತರು ತೀವ್ರತರ ಭಾವನಾತ್ಮಕ ನೋವಿನ ಜತೆಗೆ ಸಮಾಜದಲ್ಲಿ ಬಹಳಷ್ಟು ಅವಮಾನ ಅನುಭವಿಸುತ್ತಾರೆ. ಎಲ್ಲರಿಂದಲೂ ಎಲ್ಲಾ ರೀತಿಯ ತುಚ್ಛೀಕರಣಕ್ಕೆ ಒಳಗಾಗುತ್ತಾರೆ ಎಂದು ಕೋರ್ಟ್ ವಿಶ್ಲೇಷಿಸಿದೆ.

ಅತ್ಯಾಚಾರ ಪ್ರಕರಣದ ಬಲಿಪಶು ಅಸಹನೀಯ ಯಾತನೆ, ಅವಮಾನ ಅನುಭವಿಸುವಂತೆಯೇ ಸುಳ್ಳು ಪ್ರಕರಣದಲ್ಲಿ ಆರೋಪಿಯಾಗುವ ಸಂತ್ರಸ್ತ ಕೂಡ ಅಷ್ಟೇ ಅವಮಾನ, ನಾಚಿಕೆ, ಮಾನಸಿಕ ಹಿಂಸೆ ಅನುಭವಿಸುತ್ತಾನೆ ಎಂದು ಕೋರ್ಟ್ ಹೇಳಿದೆ.

ದಿಲ್ಲಿಯ ವ್ಯಾಪಾರಿಯೊಬ್ಬರ ಜತೆಗೆ ವ್ಯವಹಾರ ಇತ್ಯರ್ಥಪಡಿಸಬೇಕಿದ್ದವರ ಪರವಾಗಿ ಮಹಿಳೆಯೊಬ್ಬರು ವ್ಯಾಪಾರಿ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ವ್ಯಾಪಾರಿಯನ್ನು ಖುಲಾಸೆಗೊಳಿಸಿದ ಕೋರ್ಟ್, ಈ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸುವಂತೆ ನಿರ್ದೇಶನ ನೀಡಿದೆ. ಆರೋಪಿ ವಿರುದ್ಧ ಸುಳ್ಳು ಸಾಕ್ಷ್ಯಗಳನ್ನು ನೀಡಿರುವ ಮಹಿಳೆ ವಿರುದ್ಧ ಸೂಕ್ತ ವಿಚಾರಣೆ ನಡೆಸದಿದ್ದರೆ ಕೋರ್ಟ್ ತನ್ನ ಕರ್ತವ್ಯದಲ್ಲಿ ವಿಫಲವಾಗುತ್ತದೆ ಎಂದು ಪೀಠ ಹೇಳಿದೆ.

ಈ ಪ್ರಕರಣದಲ್ಲಿ ತಮ್ಮ ವ್ಯವಹಾರ ಕುದುರಿಸಿಕೊಳ್ಳಲು ಕೆಲವರು ಮಹಿಳೆಯನ್ನು ದಾಳವಾಗಿ ಬಳಸಿಕೊಂಡು ವ್ಯಾಪಾರಿಯ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವಂತೆ ಮಾಡಿದ್ದಾರೆ ಎಂದು ಪೀಠ ತಿಳಿಸಿದೆ.

Write A Comment