ಕರ್ನಾಟಕ

ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ; ನಾಳೆ ಜನ್ಮದಿನದಂದು ಹಾರ-ತುರಾಯಿ, ಕೇಕ್ ಕತ್ತರಿಸುವ ಸಂಭ್ರಮ ಬೇಡ: ಎಚ್.ಡಿ.ಕುಮಾರಸ್ವಾಮಿ

Pinterest LinkedIn Tumblr

ಬೆಂಗಳೂರು : ಕೋವಿಡ್-19 ಹಿನ್ನೆಲೆಯಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಮಳೆ-ನೆರೆ ವಿಕೋಪಗಳಿಂದ ತತ್ತರಿಸಿದ್ದಾರೆ. ಈ ಬಾರಿ ಅದ್ದೂರಿಯಿಂದ ಹುಟ್ಟುಹಬ್ಬ ಮಾಡುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಡಿಸೆಂಬರ್ 16ರಂದು ನನ್ನ ಜನ್ಮದಿನ. ಕಳೆದೆರಡು ವರ್ಷಗಳಿಂದ ಕೋವಿಡ್‌-19 ಕಾರಣಕ್ಕೆ ನಾವೆಲ್ಲರೂ ಸಂಕಷ್ಟದಲ್ಲಿದ್ದೇವೆ. ಸಾವು-ನೋವು ಕಂಡಿದ್ದೇವೆ. ಮಳೆ-ನೆರೆ ವಿಕೋಪಗಳಿಂದ ತತ್ತರಿಸಿದ್ದೇವೆ. ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಈ ಕಷ್ಟದ ಸಮಯದಲ್ಲಿ ಅದ್ಧೂರಿ ಜನ್ಮದಿನ ಆಚರಣೆ ನನ್ನ ಮನಸ್ಸಿಗೆ ಒಪ್ಪುವ ವಿಚಾರವಲ್ಲ. ಹಾರ-ತುರಾಯಿ ಹಾಕಿ, ಕೇಕ್‌ ಕತ್ತರಿಸಿ ಸಂಭ್ರಮಿಸುವುದು ಬೇಡ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

ನನ್ನ ಪಕ್ಷದ ಎಲ್ಲ ಕಾರ್ಯಕರ್ತರು, ಮುಖಂಡರು, ಹಿತೈಷಿಗಳಲ್ಲಿ ನನ್ನದೊಂದು ಕಳಕಳಿಯ ಮನವಿ. ಅಭಿಮಾನಿಗಳು, ಕಾರ್ಯಕರ್ತರು ಹಣ ಖರ್ಚು ಮಾಡಿಕೊಂಡು ನನ್ನಲ್ಲಿಗೆ ಬರುವುದು ಬೇಡ. ನೀವಿದ್ದಲ್ಲಿಯೇ ಬಡವರಿಗೆ, ದೀನ ದಲಿತರಿಗೆ, ಮಳೆ-ನೆರೆಯಿಂದ ತತ್ತರಿಸಿದ ಜನರಿಗೆ ನೆರವಾಗುವ ಮೂಲಕ ನನ್ನ ಜನ್ಮದಿನಕ್ಕೆ ಸಾರ್ಥಕತೆ ತನ್ನಿ. ಅದ್ಧೂರಿ ಹುಟ್ಟುಹಬ್ಬ ನನಗೆ ಇಷ್ಟವಿಲ್ಲ. ಆ ಅದ್ಧೂರಿತನದಲ್ಲಿ ಕಂಗೆಟ್ಟಿರುವ ಜನರನ್ನು ಅಣಕಿಸುವುದು ಬೇಡ. ನೀವೆಲ್ಲರೂ ಇದ್ದಲ್ಲಿಂದಲೇ ನನ್ನನ್ನು ಆಶೀರ್ವದಿಸಿ, ಹಾರೈಸಿ. ಹೊಸ ಚೈತನ್ಯ ಮತ್ತು ದೃಢ ಸಂಕಲ್ಪದೊಂದಿಗೆ ಪಕ್ಷವನ್ನು ಕಟ್ಟೋಣ. ಸವಾಲುಗಳನ್ನು ಮೆಟ್ಟಿ ನಿಲ್ಲೋಣ ಎಂದಿದ್ದಾರೆ.

Comments are closed.