ಮಂಗಳೂರು: ಉಪ್ಪಿನಂಗಡಿ ಠಾಣೆಯ ಮುಂಭಾಗದಲ್ಲಿ ಪಿಎಫ್‌ಐ ಮತ್ತು ಎಸ್.ಡಿ.ಪಿ.ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಪರಿಸ್ಥಿತಿಕೈ ಮೀರುವ ಹಂತಕ್ಕೆ ತಲುಪಿದಾಗ ಪ್ರತಿಯಾಗಿ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಸದ್ಯ ಘಟನೆ ನಡೆದ ಉಪ್ಪಿನಂಗಡಿ ಆಸುಪಾಸು ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಪಿಎಫ್ಐ ಕಾರ್ಯಕರ್ತರ ಬಂಧನ ಖಂಡಿಸಿ ಠಾಣೆ ಮುತ್ತಿಗೆ ಯತ್ನ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಠಾಣೆ ಎದುರು ನಡೆದಿತ್ತು. ಡಿಸೆಂಬರ್ 6ರಂದು ನಡೆದ ಯುವಕರಿಬ್ಬರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು ನಿನ್ನೆ ಮೂವರನ್ನು ವಶಕ್ಕೆ ಪಡೆದಿದ್ದರು. ಇದನ್ನು ವಿರೋಧಿಸಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರು ಉಪ್ಪಿನಂಗಡಿ ಠಾಣೆ ಮುಂದೆ ಪ್ರತಿಭಟನೆ ನಡೆಸಿ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಸಂಜೆಯಾಗುತ್ತಲೂ ಪ್ರತಿಭಟನಾ ಧರಣಿ ನಡೆಯುತ್ತಲೇ ಇತ್ತು. ಈ ವೇಳೆ ಮತ್ತೊಂದು ಗುಂಪು ಕೂಡ ಠಾಣೆ ಮುಂದೆ ಜಮಾಯಿಸಿತ್ತು.
ಪೊಲೀಸರು ಎಷ್ಟು ಮನವಿ ಮಾಡಿಕೊಂಡರೂ ಕೂಡ ಪ್ರತಿಭಟನಕಾರರು ಜಾಗ ಬಿಟ್ಟು ಕದಲಿಲ್ಲ. ಸಾವಿರಾರು ಮಂದಿ ಠಾಣೆ ಬಳಿ ಜಮಾಯಿಸಿದರು. ಈ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಿತು. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಗುಂಪು ಚದುರಿಸಲು ಲಾಠಿ ಚಾರ್ಜ್ ನಡೆಸಿದರು. ಈ ವೇಳೆ ಹತ್ತಕ್ಕೂ ಹೆಚ್ಚು ಕಾರ್ಯಕರ್ತರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ಬಂದೋಬಸ್ತ್‌ಗೆ ತೆರಳಿದ್ದ ಬಂಟ್ವಾಳ ನಗರ ಠಾಣೆ ಎಸ್‌ಐ ಪ್ರಸನ್ನಗೆ ದುಷ್ಕರ್ಮಿಗಳು ಚೂರಿ ಇರಿದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಸ್‌ಐ ಉಮೇಶ್, ಮಹಿಳಾ ಎಸ್‌ಐ ಸೇರಿದಂತೆ ಹಲವು ಪೊಲೀಸರು ಕಲ್ಲಿನೇಟಿನಿಂದಾಗಿ ಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದ್ದು ಪ್ರತಿಭಟನಾ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಉಪ್ಪಿನಂಗಡಿ ಠಾಣೆ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದ್ದು ಮತ್ತೆ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚೆರಿಕಾ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ.
Comments are closed.