ಕರ್ನಾಟಕ

ನಾವು ಸಂಘಪರಿವಾರದ ಹಿನ್ನೆಲೆಯಲ್ಲಿ‌ ಬೆಳೆದು ಬಂದವರು, ಹೀಗಾಗಿ ಖಾತೆ ವಿಚಾರದಲ್ಲಿ ಕ್ಯಾತೆ ತೆಗೆಯುವವರು ನಾವಲ್ಲ: ಸಚಿವ ಮುರುಗೇಶ್ ನಿರಾಣಿ

Pinterest LinkedIn Tumblr

ಬಾಗಲಕೋಟೆ: ‘ಖಾತೆಗಾಗಿ ಕ್ಯಾತೆ ತೆಗೆಯುವವರು ನಾವಲ್ಲ. ನಾನು ಮತ್ತು ಸಿಎಂ ಬಸವರಾಜ‌ ಬೊಮ್ಮಾಯಿ‌ ಒಂದೇ ಕಾಲೇಜಿನಲ್ಲಿ ಓದಿದವರು. ಅವರಿಗೆ ನನ್ನ ಬಗ್ಗೆ ಗೊತ್ತಿದೆ. ನಿನಗೆ ಯಾವ ಖಾತೆ ಬೇಕು ಅಂತ ಕೇಳಿದ್ರು. ಅದಕ್ಕೆ ನಾನು ನಿಮಗೆ ನನ್ನ ಬಗ್ಗೆ ಗೊತ್ತಿದೆ, ಯಾವ ಖಾತೆ ಕೊಟ್ಟರೂ ಸೂಕ್ತವಾಗಿ ನಿಭಾಯಿಸುತ್ತೇನೆ ಎಂದಿದ್ದೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ಬಾದಾಮಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಸಂಘಪರಿವಾರದ ಹಿನ್ನೆಲೆಯಲ್ಲಿ‌ ಬೆಳೆದು ಬಂದವರು. ಹೀಗಾಗಿ ಖಾತೆ ವಿಚಾರದಲ್ಲಿ ಕ್ಯಾತೆ ತೆಗೆಯುವವರು ನಾವಲ್ಲ ಎಂದರು.

ಎಲ್ಲರೂ ತೆಗೆದುಕೊಂಡು ಬಿಟ್ಟ ಖಾತೆಯನ್ನು ಕೊಟ್ಟರೂ ನಿಭಾಯಿಸುತ್ತೇನೆ ಎಂದು ಈ ಹಿಂದೆಯೂ ಹೇಳಿದ್ದೆ. ಈಗ ಮುಖ್ಯಮಂತ್ರಿಯವರು ಬೃಹತ್ ಕೈಗಾರಿಕೆ ಇಲಾಖೆ ನೀಡಿದ್ದಾರೆ. ಇದು ಅತ್ಯಂತ ದೊಡ್ಡ ಇಲಾಖೆ ಹಾಗೂ ಹೆಚ್ಚು ತೆರಿಗೆ ಒದಗಿಸುವ ಇಲಾಖೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡುವ ಇಲಾಖೆ. ಹೀಗಾಗಿ ಕೊಟ್ಟ ಜವಾಬ್ದಾರಿ ನಿಭಾಯಿಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.

ಬೃಹತ್ ಕೈಗಾರಿಕೆ ಇಲಾಖೆ ನಿಭಾಯಿಸಿ ಎಂಟು ವರ್ಷಗಳಾದವು. 2013ರಲ್ಲಿ ಈ ಖಾತೆಯನ್ನು ನಿಭಾಯಿಸಿದ್ದೆ. ಈಗ ಕೈಗಾರಿಕಾ ನೀತಿಗಳು ಸಾಕಷ್ಟು ಬದಲಾಗಿವೆ. ಅವುಗಳ ಬಗ್ಗೆ ತಿಳಿದುಕೊಂಡು, ನೀತಿಗಳಿಗೆ ತಿದ್ದುಪಡಿ ತರುವ ಮೂಲಕ‌ ಸರಳೀಕರಣಗೊಳಿಸಲಾಗುವುದು. ಉದ್ಯಮದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ಕೆಲಸ ನಿಭಾಯಿಸಲಾಗುವುದು. ಸರ್ಕಾರವೇ ಬಂಡವಾಳ ಹೂಡಿಕೆದಾರರ ಬಳಿ ಹೋಗುವಂತೆ ಹೊಸ ಹೊಸ ಯೋಜನೆಗಳನ್ನು ತರಲಾಗುವುದು ಎಂದರು.

ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಬರುವಂತೆ ಯೋಜನೆ ರೂಪಿಸಲಾಗುವುದು. ನಿರುದ್ಯೋಗ ಯುವಕ‌ ಯುವತಿಯರಿಗೆ ಉದ್ಯೋಗ ಕೊಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು. ಒಟ್ಟಾರೆ ಇಲಾಖೆಯ ಜವಾಬ್ದಾರಿಯನ್ನು ಸಮರ್ಥವಾಗಿ‌ ನಿಭಾಯಿಸಲಾಗುವುದು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ನೀಡಿದ್ದಕ್ಕೆ ಸಿಎಂ ಬೊಮ್ಮಾಯಿ ಹಾಗೂ ಪಕ್ಷದ ಹಾಗೂ ಪರಿವಾರದ ಹಿರಿಯರಿಗೆ ಧನ್ಯವಾದ ಸಲ್ಲಿಸುತ್ತೇನೆ. ಎಲ್ಲ ಹಿರಿಯರ ಮಾರ್ಗದರ್ಶನದಲ್ಲಿ ಈ ಖಾತೆಯ ಮೂಲಕ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ಕೆಲಸ ಮಾಡುತ್ತೇನೆ. ಈ ಹಿಂದಿನ ಸರ್ಕಾರದಲ್ಲಿ ಜಾಗತಿಕ ಬಂಡವಾಳ ಹೂಡಿಕೆಗೆ ಸಮಾವೇಶ ಮಾಡಿದ್ದೆ. ಇಡೀ ಜಗತ್ತೇ ಬೆಂಗಳೂರು ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ್ದೆ. ಈಗಲೂ ಹೆಚ್ಚಿನ ಕೆಲಸ ಮಾಡುತ್ತೇನೆ ಎಂದರು.

ನನ್ನ 20 ವರ್ಷದ ರಾಜಕಾರಣದಲ್ಲಿ ನಾನೆಂದೂ ಸಿಎಂ ಅಥವಾ ಸಚಿವ ಸ್ಥಾನ ಕೇಳಿಯೇ ಇಲ್ಲ. ನೀವೇ ಮಾಧ್ಯಮದವರೇ ಇದನ್ನೆಲ್ಲಾ ಹೇಳಿದ್ದು. ಅದನ್ನೆಲ್ಲಾ ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಗುರುತಿಸಿ ಕೊಡ್ತಾರೆ. ಈಗ ಹೊಸದಾಗಿ ಬಂದ ಮೂರ್ನಾಲ್ಕು ಜನರಿಗೆ ಒಳ್ಳೆಯ ಜವಾಬ್ದಾರಿ ಕೊಟ್ಟಿದ್ದಾರೆ. ಆದ್ರೆ ಅವರು ಯಾರೂ ಏನು ಕೇಳಿರಲಿಲ್ಲ.

ಸುನಿಲ್ ಕುಮಾರ್, ಆರಗ ಜ್ಞಾನೇಂದ್ರ ಹೊಸಬರಾದರೂ ಸಹ ಯಾವುದೇ ಖಾತೆ ಬೇಕು ಅಂದವರಲ್ಲ. ನಮ್ಮನ್ನು ಮಂತ್ರಿ ಮಾಡಿ ಎಂದವರೂ ಅಲ್ಲ. ನೀವೇ ಗಮನಿಸಿ, ನಾನು ಎಲ್ಲಿಯೂ ಲಾಬಿ ಮಾಡಿಲ್ಲ, ಮಾಡೋದು ಇಲ್ಲ. ಪಕ್ಷ ನನ್ನನ್ನು ಗುರುತಿಸಿ ಏನು ಕೆಲಸ ಕೊಡುತ್ತೋ ಅದನ್ನ ಮಾಡ್ತೀನಿ ಎಂದು ಹೇಳಿದರು.

Comments are closed.