ಕರ್ನಾಟಕ

ಕಮಲ ಪಾಳಯಕ್ಕೆ ಎಂಟ್ರಿ ಕೊಟ್ಟ ಬಿಎಸ್​ಪಿ ಉಚ್ಛಾಟಿತ ಕೊಳ್ಳೆಗಾಲ ಶಾಸಕ ಎನ್. ಮಹೇಶ್: ಅಧೀಕೃತ ಸೇರ್ಪಡೆ

Pinterest LinkedIn Tumblr

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಶಾಸಕ ಎನ್. ಮಹೇಶ್ ಇಂದು(ಆ.5 ಗುರುವಾರ) ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಇಂದು ಬೆಳಗ್ಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ನೂತನ ಸಚಿವರ ಸಮ್ಮುಖದಲ್ಲಿ ಎನ್. ಮಹೇಶ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಬಿಎಸ್​ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎನ್. ಮಹೇಶ್ 71,792 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದ್ದರು. ಆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಬಿಎಸ್​ಪಿ ಮೈತ್ರಿ ಮಾಡಿಕೊಂಡಿತ್ತು. ಇದೇ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಬಿಎಸ್​ಪಿಯಿಂದ ಎನ್. ಮಹೇಶ್ ಶಾಸಕರಾಗಿ ಆಯ್ಕೆಯಾಗುವ ಮೂಲಕ ಹೊಸ ದಾಖಲೆ ಬರೆದಿದ್ದರು.

ಆ ಚುನಾವಣೆಯಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಬಹುಮತ ಸಾಬೀತುಪಡಿಸಲು ವಿಫಲವಾಗಿತ್ತು. ತದನಂತರ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಿ ಹೆಚ್​ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಆ ಸರ್ಕಾರದಲ್ಲಿ ಎನ್. ಮಹೇಶ್ ಅವರಿಗೂ ಸಚಿವ ಸ್ಥಾನ ನೀಡಲಾಗಿತ್ತು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ಎನ್. ಮಹೇಶ್ 2018ರ ಅಕ್ಟೋಬರ್​ನಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಆಪರೇಷನ್ ಕಮಲದ ಹಿನ್ನೆಲೆ 17 ಶಾಸಕರು ರಾಜೀನಾಮೆ ನೀಡಿದ್ದರಿಂದ ಮೈತ್ರಿ ಸರ್ಕಾರ ಪತನವಾಗುವ ವೇಳೆ ಮೈತ್ರಿ ಸರ್ಕಾರದ ಶಾಸಕರನ್ನು ಬಿಜೆಪಿಯವರು ಆಪರೇಷನ್ ಕಮಲದ ಮೂಲಕ ಮುಂಬೈಗೆ ಕರೆದುಕೊಂಡು ಹೋದ ಬಳಿಕ ಸದನದಲ್ಲಿ ವಿಶ್ವಾಸಮತ ಯಾಚನೆ ವೇಳೆಗೆ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಬೇಕೆಂದು ಬಿಎಸ್​ಪಿ ನಾಯಕರು ಎನ್. ಮಹೇಶ್​ಗೆ ಸೂಚನೆ ನೀಡಿದ್ದರೂ ಅವರು ತಟಸ್ಥರಾಗಿ ಉಳಿದಿದ್ದರಿಂದ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು.

ಬಿಎಸ್​ಪಿ ಉಚ್ಛಾಟಿತ ಶಾಸಕ ಎನ್. ಮಹೇಶ್ ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದು, ತಾವು ಯಾವುದೇ ಷರತ್ತುಗಳನ್ನೂ ಬಿಜೆಪಿಗೆ ವಿಧಿಸುವುದಿಲ್ಲ. ನಾನು ಯಾವುದೇ ಅಧಿಕಾರದ ಆಕಾಂಕ್ಷಿಯಲ್ಲ ಎಂದಿದ್ದಾರೆ.

Comments are closed.