ಕರ್ನಾಟಕ

ಸಿಎಂ ಬದಲಾವಣೆ ಮಾಡಿದ್ರೆ ಬಿಜೆಪಿ ಪಕ್ಷದ ಮೇಲೆ ಬಹುದೊಡ್ಡ ಹೊಡೆತ ಬೀಳಲಿದೆ: ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ

Pinterest LinkedIn Tumblr

ರಾಯಚೂರು: ರಾಜಕೀಯದಲ್ಲಿ ಸಂಘರ್ಷ ಇರುವುದು ಸಹಜ, ಯಾರು ಏನೇ ಹೇಳಲಿ ನಮಗೆ ಆತ್ಮವಿಶ್ವಾಸವಿದೆ. ಇರುವಂತ ಅವಧಿವರೆಗೆ ಯಡಿಯೂರಪ್ಪನವರೇ ಸಿಎಂ ಆಗಿ ಇರುತ್ತಾರೆ. ಆಕಸ್ಮಿಕವಾಗಿ ಸಿಎಂ ಬದಲಾವಣೆ ಮಾಡಿದ್ರೆ ಬಿಜೆಪಿ ಪಕ್ಷದ ಮೇಲೆ ಬಹುದೊಡ್ಡ ಹೊಡೆತ ಬೀಳುವುದು ಅಂತ ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಭಾಗವತ್ಪಾದರು ಹೇಳಿದ್ದಾರೆ.

ರಾಯಚೂರಿನಲ್ಲಿ ಮಾತನಾಡಿ ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಶ್ರೀಗಳು ತಮ್ಮ ಸ್ಪಷ್ಟನೆ ನೀಡಿದರು. ಯಡಿಯೂರಪ್ಪ ಇಳಿ ವಯಸ್ಸಿನಲ್ಲಿಯೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪಗೆ ಎಲ್ಲಾ ಜನಾಂಗದವರು ಬೆಂಬಲ ಕೊಟ್ಟಿದ್ದಾರೆ. ಬಿಎಸ್ ವೈ ಜನಪರ ಕಾಳಜಿ ಬಗ್ಗೆ ಯಾರು ಅಲ್ಲೆಗಳೆಯುವಂತೆ ಇಲ್ಲ. ನಾವು ಅಷ್ಟೇ ಅಲ್ಲ ಸುತ್ತೂರು ಶ್ರೀಗಳು, ಆದಿಚುಂಚನಗಿರಿ ಶ್ರೀಗಳು ಸಹ ಬೆಂಬಲ ಸೂಚಿಸಿದ್ದಾರೆ ಅಂತ ರಂಭಾಪುರಿ ಶ್ರೀಗಳು ಹೇಳಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆಯ ಸುದ್ದಿ ಹಲವಾರು ದಿನಗಳಿಂದ ಹರಿದಾಡುತ್ತಿತ್ತು. ಈ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇದೀಗ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

ಆಡೀಯೋದಲ್ಲಿ ಯಾರಿಗೂ ಹೇಳಬೇಡ ಸಚಿವರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಅವರ ಟೀಮ್‍ನ್ನು ತೆಗೆಯುತ್ತೇವೆ. ಹೊಸ ತಂಡವನ್ನು ಕಟ್ಟುತ್ತೇವೆ. ಈಗ ಸದ್ಯಕ್ಕೆ ಯಾರಿಗೂ ಹೇಳಬೇಡ. ದೆಹಲಿಯಿಂದನೇ ಮಾಡುತ್ತಾರೆ. ಏನೂ ಸಮಸ್ಯೆ ಇಲ್ಲ, ಭಯಪಡಬೇಡ, ನಾವಿದ್ದೇವೆ. ಯಾರೇ ಆದ್ರೂ ಎಲ್ಲ ನಮ್ಮ ಕೈಯಲ್ಲೇ ಇರುತ್ತೆ. ಮೂರು ಹೆಸರು ಇದೆ, ಇದರಲ್ಲಿ ಯಾರಾದರೂ ಆಗುವ ಚಾನ್ಸ್ ಇದೆ ಎಂದು ಹೇಳಲಾಗಿದೆ. ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ ಎನ್ನಲಾದ ಆಡಿಯೋ ಇದು ಎಂದು ವೈರಲ್ ಆಗುತ್ತಿದ್ದು, ಆದರೆ ಇದು ನಕಲಿ ಆಡಿಯೋ ಎಂದು ಕಟೀಲ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಈ ಬಗ್ಗೆ ತನಿಖೆಗೆ ಕೂಡ ಆಗ್ರಹಿಸಿದ್ದಾರೆ.

Comments are closed.