
ಬೆಂಗಳೂರು: ಗಾಂಜಾವನ್ನು ಅನೇಕರು ಬೆಂಗಳೂರಿನಲ್ಲಿ ಬೇರೆ ಬೇರೆ ರೂಪದಲ್ಲಿ ಕಳ್ಳ ಸಾಗಾಣಿಕೆ ನಡೆಸುತ್ತಿದ್ದಾರೆ. ಇದೇ ರೀತಿ ಕೆಲವು ಕಿಡಿಗೇಡಿಗಳು ಮೀನಿನ ಬಾಕ್ಸ್ ಒಳಗೆ ಮೀನಿನ ರೀತಿಯಲ್ಲಿ ಯಾರಿಗೂ ಅನುಮಾನ ಬರದಂತೆ ಗಾಂಜಾ ಸಾಗಾಟ ಮಾಡುತ್ತಿದ್ದರೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಾದನಾಯಕನಹಳ್ಳಿ ಪೊಲೀಸರು ಬರ್ಜರಿ ಕಾರ್ಯಾಚರಣೆ ನಡೆಸಿ ಇಂದು 11 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಮೂರು ಜನ ಆರೋಪಿಗಳನ್ನೂ ವಶಕ್ಕೆ ಪಡೆದಿದ್ದಾರೆ.
ಒರಿಸ್ಸಾ ಮೂಲದ ದಿವಾಕರ್, ಬೆಂಗಳೂರಿನ ಸುದರ್ಶನ್, ವಿಶ್ವನಾಥ್ ಬಂದಿತ ಆರೋಪಿಗಳು ಎಂದು ತಿಳಿದುಬಂದಿದೆ. ಮಾಜಿ ಸೈನಿಕನ ಪುತ್ರ ದಿವಾಕರ್ ಒರಿಸ್ಸಾದಿಂದ ಗಾಂಜಾ ಸಪ್ಲೈ ಮಾಡುತ್ತಿದ್ದ. ಒರಿಸ್ಸಾದ ಮಲ್ಕನರಿಗೆ ಬೆಟ್ಟದಲ್ಲಿ ಬೆಳೆಯುವ ಗಾಂಜಾವನ್ನು ಬೆಂಗಳೂರಿಗೆ ತಂದು ದುಬಾರಿ ಬೆಲೆಗೆ ಮಾರಾಟ ಮಾಡುವುದು ಈ ಜಾಲದ ಕೆಲಸ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ದಿವಾಕರ್‌ನಿಂದ ಗಾಂಜಾ ಪಡೆದು ಸುದರ್ಶನ್ ಮೂಲಕ ಮಾರಾಟ ಮಾಡಿಸುತ್ತಿದ್ದ ವಿಶ್ವನಾಥ್ ಬೆಂಗಳೂರಿನ ವಿವಿಧ ಕಾಲೇಜು, ಕಾರ್ಖಾನೆಗಳ ಬಳಿ ಯುವಕರನ್ನ ಟಾರ್ಗೆಟ್ ಮಾಡುತ್ತಿದ್ದ ಎನ್ನಲಾಗಿದೆ. ಕೊನೆಗೂ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದು, ದೊಡ್ಡ ಜಾಲವನ್ನು ಹೆಡೆಮುರಿ ಕಟ್ಟಿದ್ದಾರೆ. ಈ ಮೂಲಕ ಯುವಕರನ್ನು ತಪ್ಪು ದಾರಿಗೆ ಎಳೆಯುತ್ತಿದ್ದವರಿಗೆ ಜೈಲಿನ ದಾರಿ ತೋರಿಸಿದ್ದಾರೆ. ಈ ಪ್ರಕರಣದ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
Comments are closed.