ಕರ್ನಾಟಕ

ಬೆಳಗಾವಿಯಲ್ಲಿ ಕೊನೆಯ ಕ್ಷಣದಲ್ಲಿ ಗೆಲುವಿನ ನಗೆ ಬೀರಿದ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ; ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ ಸೋಲು

Pinterest LinkedIn Tumblr

ಬೆಳಗಾವಿ: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಕೊನೆಯ ಕ್ಷಣದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆದುಕೊಳ್ಳುತ್ತಿದ್ದ ಫಲಿತಾಂಶದಲ್ಲಿ ಮಂಗಳಾ ಅಂಗಡಿ ಕೊನೆಗೂ ವಿಜಯಲಕ್ಷ್ಮಿಯನ್ನು ಒಲಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸತೀಶ್‌ ಜಾರಕಿಹೊಳಿ ವೀರೋಚಿತ ಸೋಲು ಅನುಭವಿಸಿದ್ದಾರೆ.

12 ಸುತ್ತಿನ ಬಳಿಕ 47 ನೇ ಸುತ್ತಿನ ವರೆಗೂ ಮುನ್ನಡೆಯನ್ನು ಕಾಯ್ದುಕೊಂಡು ಬಂದಿದ್ದ ಮಂಗಳಾ ಅಂಗಡಿ ನಂತರದಲ್ಲಿ ಹಿನ್ನಡೆಯನ್ನು ಅನುಭವಿಸತೊಡಗಿದರು. ಆದರೆ ಬಳಿಕ ನಡೆದ ರೋಚಕ ತಿರುವಿನಲ್ಲಿ ಮಂಗಳಾ ಅಂಗಡಿ ಮುನ್ನಡೆಯನ್ನು ಸಾಧಿಸಿದರು.

77 ನೇ ಸುತ್ತಿನ ಬಳಿಕ ಸತೀಶ್ ಜಾರಕಿಹೊಳಿ ಮುನ್ನಡೆ ಕೇವಲ 1620 ಕ್ಕೆ ಬಂದು ತಲುಪಿತು. ಇದಾದ ಬಳಿಕ ಅಂತರ ಕಡಿಮೆ ಆಗುತ್ತಾ ಬಂತು. ಕೊನೆಯ ಗಳಿಗೆಯಲ್ಲಿ ಬಿಜೆಪಿಗೆ 2692 ಮತಗಳ ಮುನ್ನಡೆ ಸಿಕ್ಕಿತು. 84 ನೇ ಸುತ್ತಿನಲ್ಲಿ 3101 ಅಂತರದ ಮುನ್ನಡೆ ಪಡೆದುಕೊಂಡರೆ 85 ನೇ ಸುತ್ತಿನಲ್ಲಿ 3530 ಮತಗಳನ್ನು ಅಂತರದ ಮುನ್ನಡೆ ಪಡೆದುಕೊಂಡರು. 87 ನೇ ಸುತ್ತಿನಲ್ಲಿ ಮಂಗಳಾ ಅವರು 4081 ಮತಗಳ ಅಂತರದಲ್ಲಿ ಮುನ್ನಡೆ ಕಂಡುಕೊಂಡರು. ಆದರೆ 89 ನೇ ಸುತ್ತಿನಲ್ಲಿ ಮತ್ತೆ ಅಂತರದಲ್ಲಿ ಇಳಿಕೆ ಕಂಡು ಬಂದಿದ್ದು 2941 ಮತಗಳಲ್ಲಿ ಮಂಗಳಾ ಅಂಗಡಿ ಮುನ್ನಡೆ ಸಾಧಿಸಿದರು.

ಮಾಜಿ ಸಂಸದ ದಿವಂಗತ ಸುರೇಶ್ ಅಂಗಡಿಯವರ ತೆರವಾದ ಸ್ಥಾನಕ್ಕೆ ಅವರ ಪತ್ನಿ ಮಂಗಳಾ ಅಂಗಡಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಾರು ಮೂರು ಲಕ್ಷ ಅಂತರದಿಂದ ಸುರೇಶ್ ಅಂಗಡಿ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ನಿಧನದ ನಂತರದ ಉಪಚುನಾವಣೆಯಲ್ಲಿ ಅನುಕಂಪದ ಅಲೆ ಈ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದೇ ನಂಬಲಾಗಿತ್ತು. ಈ ನಡುವೆ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣವೂ ಸದ್ದು ಮಾಡಿತ್ತು. ಈ ಕಾರಣಕ್ಕಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆ ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು.

ಹಾವು -ಏಣಿಯ ಆಟ, ರೋಚಕ ಹಣಾಹಣಿ
ಬೆಳಗಾವಿ ಲೋಕಸಭಾ ಚುಣಾವಣಾ ಫಲಿತಾಂಶ ರೋಚಕವಾಗಿತ್ತು. ಹಾವು-ಏಣಿಯ ಆಟದಲ್ಲಿ ಕೊನೆಗೂ ಗೆಲುವಿನ ನಗೆ ಬೀರಲು ಮಂಗಳಾ ಅಂಗಡಿ ಯಶಸ್ವಿ ಆದರು. 12 ನೇ ಸುತ್ತಿನ ವರೆಗೆ ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಮುನ್ನಡೆ ಸಾಧಿಸಿದ್ದರು. ಆದರೆ ದಿಢೀರಾಗಿ ಮತಎಣಿಕೆಯಲ್ಲಿ ಬದಲಾವಣೆ ಕಾಣಿಸತೊಡಗಿತು. 12 ಸುತ್ತಿನ ಮತ ಎಣಿಕೆಯ ಬಳಿಕ ಮಂಗಳಾ ಅಂಗಡಿಯವರು ಮುನ್ನಡೆ ಕಾಯ್ದುಕೊಂಡರು.

ಮಂಗಳಾ ಅಂಗಡಿಯವರ ನಿರಂತರ ಮುನ್ನಡೆ 47 ನೇ ಸುತ್ತಿನ ವರೆಗೂ ಮುಂದುವರಿದಿತ್ತು. ಆದರೆ ಅಲ್ಲಿಂದ ಮತ್ತೆ ಫಲಿತಾಂಶದಲ್ಲಿ ಏರುಪೇರು ಕಾಣಿಸತೊಡಗಿತು. 48 ನೇ ಸುತ್ತಿನಲ್ಲಿ ಸತೀಶ್ ಜಾರಕಿಹೊಳಿ ಮತ್ತೆ ಮುನ್ನಡೆ ಸಾಧಿಸತೊಡಗಿದರು.

58 ನೇ ಸುತ್ತಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸತೀಶ್ ಜಾರಕಿಹೊಳಿ 8976 ಮತಗಳ ಮುನ್ನಡೆ ಕಾಯ್ದುಕೊಂಡರೆ 59 ನೇ ಸುತ್ತಿನಲ್ಲಿ ಕಾಂಗ್ರೆಸ್ 8971 ಮತಗಳ ಅಂತರದ ಮುನ್ನಡೆ ಕಾಯ್ದಕೊಂಡರು. 61 ನೇ ಸುತ್ತಿನಲ್ಲಿ ಮತ್ತೆ ಮುನ್ನಡೆ ಅಂತರ ಇಳಿಕೆ ಆಗತೊಡಗಿತು. 61 ನೇ ಸುತ್ತಿನಲ್ಲಿ 7947 ಮತಗಳ ಅಂತರದಿಂದ ಮುನ್ನಡೆ ಕಾಪಾಡಿಕೊಂಡರು.

63 ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಮತ್ತೆ ತಮ್ಮ ಮತಗಳ ಅಂತರವನ್ನು ಏರಿಕೆ ಮಾಡಿಕೊಂಡರು. 63 ನೇ ಸುತ್ತಿನಲ್ಲಿ ಸತೀಶ್ ಜಾರಕಿಹೊಳಿ 10,581 ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡರು. 72ನೇ ಸುತ್ತಿನಲ್ಲಿ 4475 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದರೆ ಮತ್ತೆ 74 ನೇ ಸುತ್ತಿನಲ್ಲಿ 6293 ಮತಗಳ ಅಂತರದ ಮುನ್ನಡೆ ಪಡೆದುಕೊಂಡರು.

ಹೀಗೆ ಫಲಿತಾಂಶ ತೀವ್ರ ಕುತೂಹಲದಿಂದ ಸಾಗುತ್ತಿತ್ತು. ಆದರೆ 80 ನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆಯ ಅಂತರ 488 ಕ್ಕೆ ತಲುಪಿತು. ಆದರೆ 83 ನೇ ಸುತ್ತಿನಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿತು. 85 ನೇ ಸುತ್ತಿನಲ್ಲಿ ಮಂಗಳಾ ಅಂಗಡಿ 3530 ಮತಗಳನ್ನು ಅಂತರದ ಮುನ್ನಡೆ ಪಡೆದುಕೊಂಡರು.

ಬಿಜೆಪಿಗೆ ಎಂಇಎಸ್‌ ಕಿರಿಕಿರಿ!
ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ್ದ ಸುರೇಶ್ ಅಂಗಡಿಯವರು 3 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದರು. ಆದರೆ ಈ ಬಾರಿ ಬಿಜೆಪಿ ಗೆಲುವಿಗೆ ಹಿನ್ನಡೆ ಆಗಿದ್ದಯ ಎಂಇಎಸ್‌ ಅಭ್ಯರ್ಥಿಯ ಸ್ಪರ್ಧೆ. ಎಂಇಎಸ್‌ ಅಭ್ಯರ್ಥಿ ಶುಭಂ ಶಳಕೆ 1 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದುಕೊಂಡಿದ್ದಾರೆ. ಈ ಮತಗಳು ಬಿಜೆಪಿ ಪಾಲಿಗೆ ಒಂದಿಷ್ಟು ಹಿನ್ನಡೆ ಉಂಟಾಗಲು ಕಾರಣವಾಗಿದೆ ಎಂಬುವುದು ಸ್ಪಷ್ಟವಾಗುತ್ತಿದೆ.

Comments are closed.