ಕರ್ನಾಟಕ

ರಾಜಕಾರಣಿಗಳ ಸಿಡಿಯಿದೆ ಎಂದು ಬ್ಲ್ಯಾಕ್ ಮೇಲ್ ಮಾಡುತ್ತಿರುವವರನ್ನು ಒದ್ದು ಎರೋಪ್ಲೇನ್ ಹತ್ತಿಸಿ: ಎಚ್.ಡಿ.ಕೆ

Pinterest LinkedIn Tumblr

ಮೈಸೂರು: ರಾಸಲೀಲೆ ಸಿಡಿ ಬಹಿರಂಗವಾದ ಬೆನ್ನಲ್ಲೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿರುವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದಲ್ಲಿ 5 ಕೋಟಿ ಡೀಲ್ ನಡೆದಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಅವರು, ಕಳೆದು ಮೂರು ತಿಂಗಳಿಂದ ಈ‌ ಡೀಲ್ ವ್ಯವಹಾರ ನಡೆದಿದೆ. ದೊಡ್ಡ ದೊಡ್ಡವರೇ ಈ ಪ್ರಕರಣದಲ್ಲಿ ಇದ್ದಾರೆ. ಇದನ್ನ ತನಿಖೆ ಮಾಡಿಸುವ ಜವಾಬ್ದಾರಿ ಸರ್ಕಾರದ್ದು. ನಾನು ಈ ಪ್ರಕರಣ ನೋಡಿ ಖುಷಿ ಪಡುವವನಲ್ಲ. ಸರ್ಕಾರ ಬೀಳಿಸಿದರು ಎನ್ನುವ ಕಾರಣಕ್ಕೆ ನಾನು ಒಂದು ಕಲ್ಲು ಹೊಡೆಯಬೇಕು ಅಂತ ಹೊಡೆಯೋದಿಲ್ಲ ಎಂದು ಹೇಳಿದ್ದಾರೆ.

ರಾಜಕಾರಣಿಗಳ ಸಿಡಿ ಇದೆ ಎಂದು ಹೇಳಿ ಬ್ಲ್ಯಾಕ್ ಮೇಲ್ ಮಾಡುತ್ತಿರುವವರನ್ನು ಒದ್ದು ಎರೋಪ್ಲೇನ್ ಹತ್ತಿಸಿ. ಅವರನ್ನ ಬಂಧಿಸಿ ಅವರ ಬಳಿ ಇರುವ ಸಿಡಿಗಳನ್ನ ಸರ್ಕಾರವೇ ಜನರ ಮುಂದೆ ಬಿಡುಗಡೆ ಮಾಡಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು. ಸಿಡಿ ಇದೆ ಎಂದು ಕೆಲವರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಇದು ಬ್ಲ್ಯಾಕ್‌ಮೇಲ್‌ ಕಾರ್ಯತಂತ್ರ. ಇದಕ್ಕೆ ಪುಷ್ಠಿ ಕೊಟ್ಟು ಬೆಳಸಬೇಡಿ. ಅದ್ಯಾರೋ ಒಬ್ಬ ಮಾಜಿ ಸಿಎಂ ಅದೆಲ್ಲೋ ಹೋಗಿ ಬರುತ್ತಾರೆ. ಅದರ ಸಿಡಿ ನನ್ನ ಬಳಿ ಇದೆ ಎಂದು ಹೇಳುತ್ತಾನೆ. ರಾಜ್ಯದಲ್ಲಿ ದೇವೇಗೌಡ, ಎಸ್‌ಎಂ ಕೃಷ್ಣ ಹಾದಿಯಾಗಿ ತುಂಬಾ ಜನ ಮಾಜಿ‌ ಸಿಎಂ ಇದ್ದಾರೆ. ಯಾರು ಆ ಮಾಜಿ ಸಿಎಂ ಎಂದು ಆರೋಪ ಮಾಡುವರಿಂದ ಬಾಯಿ ಬಿಡಿಸಿ. ಸುಮ್ಮನೆ ನಾವು ಹೊರಗೆ ಓಡಾಡುವಾಗ ಮುಜುಗರವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡ್ರಗ್ಸ್ ಪ್ರಕರಣ ವಿಚಾರದಲ್ಲಿ ಹಿಂದೆ ಅದ್ಯಾವುದೋ ಆಂಕರ್ ವಿಚಾರದಲ್ಲೂ ನನ್ನ ಹೆಸರು ತಂದರು. ಆಗಲು ಸರಿಯಾಗಿ ಜಾಡಿಸಿದ್ದೇ‌ನೆ. ನನಗೆ ಈ ವಿಚಾರದಲ್ಲಿ ಯಾವುದೇ ಭಯವು ಇಲ್ಲ. ಈ ಪ್ರಕರಣದಲ್ಲಿ ನಾನು ತುಂಬಾ ಕ್ಲೀನ್ ಆಗಿದ್ದೇನೆ. ಆದರೆ ನನ್ನ ಉದ್ದೇಶ ಇಂತಹ ಬ್ಲ್ಯಾಕ್ ಮೇಲ್‌ಗಳು ನಿಲ್ಲಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದರು.

 

Comments are closed.