ಕರಾವಳಿ

ಜಿಲ್ಲೆಯ ಪ್ರತಿ ಮನೆಯಲ್ಲೂ ಹೊಸತಂತ್ರಜ್ಞಾನಗಳೊಂದಿಗೆ 24X7 ಶುದ್ಧ ಕುಡಿಯುವ ನೀರಿನ ಪೂರೈಕೆ: ಡಾ. ಕುಮಾರ್

Pinterest LinkedIn Tumblr

ಮಂಗಳೂರು, ಮಾರ್ಚ್ 5 : ಜಿಲ್ಲೆಯ ಗ್ರಾಮೀಣ ಭಾಗದ ಪ್ರತೀ ಮನೆಗೂ ಶುದ್ಧ ಕುಡಿಯುವ ನೀರನ್ನು ಪೂರೈಸುವ ಕಾರ್ಯಾತ್ಮಕ ನಳ ಸಂಪರ್ಕವನ್ನು ಕಲ್ಪಿಸುವುದರ ಜೊತೆಗೆ ದಿನಪೂರ್ತಿ ನಿರಂತರ ನೀರು ಸರಬರಾಜು ಮಾಡಲು ಕಾರ್ಯಪ್ರವೃತರಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಡಾ. ಕುಮಾರ್ ತಿಳಿಸಿದರು.

ಅವರು ಇಂದು ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ತಮ್ಮ ಕಚೇರಿಯಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಜನರಿಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರು ಅತ್ಯವಶ್ಯಕ. ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಮುಂದಿನ 3 ವರ್ಷಗಳಲ್ಲಿ ಜಿಲ್ಲೆಯ ಗ್ರಾಮೀಣದ ಪ್ರತೀ ಮನೆಗಳಿಗೆ ಕಾರ್ಯಾತ್ಮಕ ನಳ ಒದಗಿಸುವುದರ ಜೊತೆಗೆ 24*7 ನಿರಂತರ ನೀರು ಪೂರೈಸಲು ಕಾಮಗಾರಿಗಳನ್ನು ಹೊಸತಂತ್ರಜ್ಞಾನಗಳನ್ನು ಬಳಕೆಯೊಂದಿಗೆ ಕೈಗೊಳ್ಳಬೇಕು ಎಂದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನ 269 ಜನವಸತಿ ಪ್ರದೇಶಗಳ 32872 ಮನೆಗಳಿವೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಗುರುತಿಸುವುದರೊಂದಿಗೆ ಯೋಜನೆಯ ಅನುಷ್ಠಾನಕ್ಕೆ 130ಕೋಟಿ ರೂ ಬಳಕೆ ಮಾಡಲಾಗುತ್ತದೆ ಎಂದರು.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 2.076 ಜನವಸತಿ ಪ್ರದೇಶಗಳಲ್ಲಿ 1.52.684 ಮನೆಗಳಿದ್ದು ಅವುಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಲು ಅಂದಾಜು ವೆಚ್ಚ ರೂ. 190.36 ಕೋಟಿ ರೂ ದಲ್ಲಿ ಕ್ರಿಯಾ ಯೋಜನೆ ರೂಪಿಸಲಾಗುತ್ತದೆ ಎಂದರು.

ನೂತನವಾಗಿ ನಿರ್ಮಾಣವಾಗುತ್ತಿರುವ ಇಂಡಿಯನ್ ಕೋಸ್ಟ್‍ಗಾರ್ಡ್ ಸಂಸ್ಥೆಗೆ ಮಳವೂರು ಕಿಂಡಿ ಅಣೆಕಟ್ಟುವಿನಿಂದ 3.5 ಎಂ.ಎಲ್.ಡಿ ನೀರು ಪೂರೈಕೆಗೆ ಬೇಡಿಕೆ ಇದೆ ಎಂದರು.

ಗ್ರಾಮೀಣ ಭಾಗದಲ್ಲಿ ಪ್ರತೀ ಶಾಲಾ-ಕಾಲೇಜು, ಅಂಗನವಾಡಿ ಹಾಗೂ ಸಾರ್ವಜನಿಕ ಶೌಚಾಲಯಗಳಿಗೆ ವ್ಯವಸ್ಥಿತವಾಗಿ ನೀರಿನ ಸೌಲಭ್ಯ ಕಲ್ಪಿಸಲು ಅಭಿಯಂತರರಿಗೆ ಸೂಚನೆನೀಡಿದರು.

ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ನರೇಂದ್ರ ಬಾಬು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯಾರಿ, ಜಂಟಿ ಕೃಷಿ ನಿರ್ದೇಶಕಿ ಸೀತಾ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಯೋಗೇಶ್ ಎಸ್. ಬಿ, ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Comments are closed.