ಕರ್ನಾಟಕ

ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಯ ಬರ್ತಡೇ ಆಚರಣೆ; ಜೈಲಿಗೆ ಮೊಬೈಲ್‌, ಕೇಕ್‌ ಬಂದಿದ್ದು ಹೇಗೆ?

Pinterest LinkedIn Tumblr


ಬೆಂಗಳೂರು: ಹತ್ತಾರು ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿರುವ ಹಾಗೂ ಗೂಂಡಾ ಕಾಯಿದೆಯಡಿ ಬಂಧಿತನಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ರೌಡಿಯೊಬ್ಬ ಜೈಲಿನಲ್ಲಿ ಕೇಕ್‌ ಕತ್ತರಿಸಿ ಭರ್ಜರಿಯಾಗಿ ಬರ್ತ ಡೇ ಆಚರಿಸಿದ್ದಾನೆ. ಸುಬ್ರಮಣ್ಯನಗರ ಠಾಣೆಯ ರೌಡಿ ರಿಜ್ವಾನ್‌ ಕೇಕ್‌ ಕಟ್‌ ಮಾಡಿ ಬರ್ತ ಡೇ ಆಚರಿಸಿರುವ ವಿಡಿಯೊ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಜೈಲಿನಲ್ಲಿ ಇದೆಲ್ಲಾ ಹೇಗೆ ಸಾಧ್ಯ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಕೊಲೆ, ಕೊಲೆ ಯತ್ನ ಸೇರಿದಂತೆ 14 ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪದ ಮೇರೆಗೆ ಬಂಧಿತನಾಗಿರುವ ಆರೋಪಿ ರಿಜ್ವಾನ್‌ ಮತ್ತು ಆತನ ಸಹಚರರು ಜೈಲು ಸೇರಿದ್ದಾರೆ. ಜೈಲಿಗೆ ಹೋಗಿ ಬಂದ ಬಳಿಕ ಮತ್ತೆ ಅಪರಾಧ ಕೃತ್ಯವೆಸಗುತ್ತಿದ್ದ ಕಾರಣ ಅಕ್ಟೋಬರ್‌ ತಿಂಗಳಲ್ಲಿ ಗೂಂಡಾ ಕಾಯಿದೆಯಡಿ ಬಂಧಿಸಲಾಗಿತ್ತು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಗಳಿಗೆ ಸ್ಮಾರ್ಟ್‌ಫೋನ್‌ ಹೇಗೆ ಸಿಕ್ಕಿತು ಮತ್ತು ಬರ್ತಡೇ ಕೇಕ್‌ ಹೇಗೆ ತರಿಸಲಾಯಿತು ಎಂಬುದು ಚರ್ಚೆಗೆ ಗ್ರಾಸವಾಗಿದೆ. ಜೈಲಿನಲ್ಲಿ ಕೈದಿಗಳಿಗೆ ಯಾವುದೇ ರೀತಿಯ ಸ್ಮಾರ್ಟ್‌ಫೋನ್‌ ಮತ್ತು ಫೋನ್‌ ಬಳಕೆಗೆ ಅವಕಾಶ ಇಲ್ಲ. ಆದರೂ, ಜೈಲಿನಲ್ಲಿರುವ ರೌಡಿಗಳಿಗೆ ಪೋನ್‌ ಸಿಕ್ಕಿದ್ದು ಹೇಗೆ ಎಂಬ ಚರ್ಚೆ ನಡೆದಿದೆ.

ರೌಡಿಗಳನ್ನು ಬಂಧಿಸಿ ಅವರ ಮನಪರಿವರ್ತನೆ ಮಾಡಿ ಒಳ್ಳೆಯ ಮನುಷ್ಯರನ್ನಾಗಿ ಬದಲಾಯಿಸಲು ಜೈಲಿಗೆ ಕಳುಹಿಸಲಾಗುತ್ತದೆ. ಆದರೆ, ಜೈಲಿನಲ್ಲಿಯೂ ಹೊರಗಿನಂತೆ ಸೌಲಭ್ಯಗಳಿದ್ದರೆ ರೌಡಿಗಳಿಗೆ ಯಾವುದೇ ಭಯ ಇರುವುದಿಲ್ಲ. ಜೈಲಿನಲ್ಲಿರಲಿ, ಹೊರಗೆ ಇರಲಿ ನಾನು ಚೆನ್ನಾಗಿಯೇ ಇರುತ್ತೇನೆ ಎಂಬ ಭಂಡತನದಿಂದ ಕ್ರಿಮಿನಲ್‌ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದರಿಂದ ಸಮಾಜಕ್ಕೆ ಯಾವ ಸಂದೇಶವನ್ನು ನೀಡಿದಂತಾಗುತ್ತದೆ. ಈ ರೀತಿಯ ಅಕ್ರಮಗಳಿಗೆ ಪೊಲೀಸರು ಅವಕಾಶ ಮಾಡಿಕೊಡಬಾರದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಜೈಲಿನ ಒಂದು ಬ್ಯಾರಕ್‌ನ ದ್ವಾರದಿಂದ ಪ್ರವೇಶಿಸುವ ಆತ ಕೇಕ್‌ ಇಟ್ಟಿರುವ ಜಾಗಕ್ಕೆ ಬರುತ್ತಾನೆ. ಅಲ್ಲಿಗೆ ಆತನ ಸಹಚರರು ಸ್ವಾಗತ ಕೋರಿ ಕೈ ಕುಲುಕುತ್ತಿದ್ದಾರೆ. ನಂತರ ಕೇಕ್‌ ಕಟ್‌ ಮಾಡುತ್ತಾನೆ. ರಿಜ್ವಾನ್‌ ಫೋಟೊ ಮತ್ತು ವಿಡಿಯೊಗಳಿಗೆ ಸಿನಿಮಾದ ಬ್ಯಾಕ್‌ಗ್ರೌಂಡ್‌ ಮ್ಯೂಸಿಕ್‌ ಬಳಸಿ ಹೀರೋ ಎಂಬಂತೆ ಬಿಂಬಿಸಿ ವಿಡಿಯೊವನ್ನು ಜಾಲತಾಣಗಳಿಗೆ ಹರಿಬಿಡಲಾಗಿದೆ.

Comments are closed.