ರಾಷ್ಟ್ರೀಯ

ಕೇಂದ್ರದೊಂದಿಗೆ ಷರತ್ತುಬದ್ಧ ಮಾತುಕತೆಗೆ ಹೋರಾಟನಿರತ ರೈತರ ಸಮ್ಮತಿ

Pinterest LinkedIn Tumblr


ಹೊಸದಿಲ್ಲಿ: ಕೇಂದ್ರ ಸರಕಾರದ ಜತೆ ಮಾತುಕತೆಗೆ ಮುಂದಾಗಿರುವ ಪ್ರತಿಭಟನಾನಿರತ ರೈತರು, ಕೃಷಿ ಕಾಯಿದೆಗಳ ರದ್ದತಿ ಹಾಗೂ ಕನಿಷ್ಠ ಬೆಂಬಲ ಬೆಲೆ ವಿಷಯಗಳನ್ನೂ ಮಾತುಕತೆಯ ಕಾರ್ಯಸೂಚಿಯಲ್ಲಿ ಸೇರ್ಪಡೆ ಮಾಡಬೇಕು ಎಂಬ ಷರತ್ತು ವಿಧಿಸಿದೆ.

ದಿಲ್ಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ 40 ರೈತ ಸಂಘಟನೆಗಳ ಒಕ್ಕೂಟವಾದ ‘ಸಂಯುಕ್ತ ಕಿಸಾನ್‌ ಮೋರ್ಚಾ’ ಪದಾಧಿಕಾರಿಗಳು ಶನಿವಾರ ಮಧ್ಯಾಹ್ನ ಮಾತುಕತೆ ಕುರಿತಂತೆ ಸುದೀರ್ಘ ಚರ್ಚೆ ನಡೆಸಿದರು. ಆದರೆ, ಈ ಎರಡು ವಿಷಯಗಳ ಕುರಿತಾಗಿಯೂ ಮಾತುಕತೆ ನಡೆಯಬೇಕು ಎಂಬ ಷರತ್ತು ವಿಧಿಸುವ ತೀರ್ಮಾನ ಕೈಗೊಂಡರು.

“ಕೃಷಿ ಕಾಯಿದೆಗಳ ರದ್ದತಿ ಇಲ್ಲ, ಅಗತ್ಯ ತಿದ್ದುಪಡಿಗಳಿಗೆ ಸಿದ್ಧ,” ಎಂದು ಕೇಂದ್ರ ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಹಾಗೆಯೇ ಮಾತುಕತೆಗೆ ದಿನಾಂಕ ನಿಗದಿಪಡಿಸುವಂತೆ ಕೋರಿ ಪತ್ರ ಬರೆದಿದ್ದ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್‌ ಅಗರ್‌ವಾಲ್‌ ಅವರು, ಕಾರ್ಯಸೂಚಿಯಲ್ಲಿ ಬೆಂಬಲ ಬೆಲೆ ವಿಷಯ ಕೈ ಬಿಡಬೇಕು ಎಂದು ಸೂಚಿಸಿದ್ದರು.

“ಸರಕಾರದ ಜತೆ ಮಾತುಕತೆ ಆರಂಭಿಸಬೇಕು ಎನ್ನುವುದು ಎಲ್ಲ 40 ಸಂಘಟನೆಗಳ ಒಮ್ಮತದ ತೀರ್ಮಾನವಾಗಿದೆ. ಬಿಕ್ಕಟ್ಟಿನ ಮೂಲ ಇರುವುದೇ ಬೆಂಬಲ ಬೆಲೆ ವಿಷಯದಲ್ಲಿ. ಹೀಗಾಗಿ ಮಾತುಕತೆ ವೇಳೆ ಅದು ಪ್ರಧಾನವಾಗಿ ಪ್ರಸ್ತಾಪಗೊಳ್ಳಲಿದೆ. ಮೂರು ಕಾಯಿದೆಗಳು ರದ್ದುಪಡಿಸಬೇಕು ಎನ್ನುವುದು ರೈತರ ಬೇಡಿಕೆಯಾಗಿದೆ. ಆದರೆ, ಈ ಬಾರಿ ಸರಕಾರ ನೀಡುವ ಭರವಸೆ ಆಧರಿಸಿ ನಮ್ಮ ನಿಲುವಿನಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಮಾಡಿಕೊಳ್ಳಲಾಗುವುದು. ಸಮಸ್ಯೆ ಇತ್ಯರ್ಥಗೊಳ್ಳಬೇಕು ಎನ್ನುವ ಹಂಬಲ ನಮಗೂ ಇದೆ. ಅದಕ್ಕೆ ಪೂರಕವಾಗಿ ಸರಕಾರ ಭರವಸೆಯಿಂದ ವರ್ತಿಸಬೇಕು,” ಎಂದು ಟಿಕಾಯತ್‌ ಹೇಳಿದರು.

ದಿಲ್ಲಿ ಗಡಿಯತ್ತ ಇನ್ನಷ್ಟು ರೈತರು
ಕಡು ಚಳಿ ದಿಲ್ಲಿ ಆವರಿಸಿರುವುದರಿಂದ ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಬೀಡುಬಿಟ್ಟಿರುವ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರಂತರ ಕುಳಿತು ಪ್ರತಿಭಟನೆ ನಡೆಸುವುದು ಅನೇಕರ ಪಾಲಿಗೆ ಸವಾಲು ಎನ್ನಿಸಿದೆ. ಆದ್ದರಿಂದ ಕೆಲವರು ಪಾಳಿ ಆಧಾರದಲ್ಲಿ ಪ್ರತಿಭಟನಾ ಸ್ಥಳಕ್ಕೆ ಬಂದು ಹೋಗುತ್ತಿದ್ದಾರೆ. ಶನಿವಾರ ಪಂಜಾಬಿನಿಂದ ದೊಡ್ಡ ಸಂಖ್ಯೆಯ ಮತ್ತೊಂದು ರೈತರ ದಂಡು ದಿಲ್ಲಿ ಗಡಿ ತಲುಪಿದೆ. ಶುಕ್ರವಾರ ಉತ್ತರ ಪ್ರದೇಶದಿಂದ ಸಾವಿರಾರು ರೈತರು ಪ್ರತಿಭಟನೆಗೆ ಸೇರಿಕೊಂಡಿದ್ದರು. ವಾರ ಕಾಲ ಸಾಕಾಗುವಷ್ಟು ದಿನಸಿಯ ಮೂಟೆಗಳನ್ನು ಹೊತ್ತು ಇನ್ನೂ ಕೆಲವು ರೈತರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದಾರೆ.

ರಾಜಸ್ಥಾನ ಶಿಕ್ಷಕರ ಬೆಂಬಲ
ರೈತರ ಪ್ರತಿಭಟನೆಗೆ ರಾಜಸ್ಥಾನದ ಶಿಕ್ಷಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಶಿಕ್ಷಕರ ಸಂಘದ ಪದಾಧಿಕಾರಿಗಳು ಸಿಂಘು ಗಡಿಯಲ್ಲಿನ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರಲ್ಲದೇ, ಸಂಘವು ರಾಜಸ್ಥಾನದಲ್ಲಿ ಧರಣಿ ನಡೆಸಲಿದೆ ಎಂದು ಘೋಷಿಸಿದರು.

ಆಯವ್ಯಯ ಆರು ಪಟ್ಟು ಹೆಚ್ಚಳ
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಆಯವ್ಯಯ ಕಳೆದ ಆರು ವರ್ಷಗಳಲ್ಲಿ ಆರು ಪಟ್ಟು ಹೆಚ್ಚಳವಾಗಿದೆ ಎದು ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ ತಿಳಿಸಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಸ್ವಾಮಿನಾಥನ್‌ ಸಮಿತಿಯ ಶಿಫಾರಸಿನಂತೆ ರೈತರಿಗೆ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಹೆಚ್ಚು ಗರಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಮಾಡಿದೆ. ಎಂಎಸ್‌ಪಿ ವ್ಯವಸ್ಥೆಯಲ್ಲಿ ಬೆಳೆ ಖರೀದಿಗೆ ಮಾಡಿರುವ ವೆಚ್ಚವು 2009-14ಕ್ಕೆ ಹೋಲಿಸಿದರೆ 2014-19ರಲ್ಲಿ ಶೇ.85ರಷ್ಟು ಹೆಚ್ಚಳವಾಗಿದೆ,” ಎಂದು ತಿಳಿಸಿದ್ದಾರೆ.

1950ರಲ್ಲಿ ರಾಷ್ಟ್ರೀಯ ಒಟ್ಟು ಉತ್ಪನ್ನಕ್ಕೆ ಭಾರತದ ಕೃಷಿ ವಲಯ ಶೇ.52ರಷ್ಟು ಕೊಡುಗೆ ನೀಡುತ್ತಿತ್ತು. ಜೊತೆಗೆ ನಮ್ಮ ಒಟ್ಟು ಜನಸಂಖ್ಯೆಯ ಶೇ.70ರಷ್ಟು ಜನರಿಗೆ ಉದ್ಯೋಗ ಕಲ್ಪಿಸಿತ್ತು. ಈ ವಲಯ 2019ರಲ್ಲಿ ನಮ್ಮ ದೇಶದ ಒಟ್ಟು ಜನಸಂಖ್ಯೆಯ ಶೇ.42ರಷ್ಟು ಜನರಿಗೆ ಉದ್ಯೋಗ ನೀಡಿದೆ. ಆದರೆ ಜಿಡಿಪಿಗೆ ಕೇವಲ ಶೇ.16ರಷ್ಟು ಕೊಡುಗೆ ನೀಡಿದೆ. ಹೀಗಾಗಿ ಕೃಷಿ ವಲಯದ ಅಭಿವೃದ್ಧಿ ಮತ್ತು ರೈತರ ಸಬಲೀಕರಣ ಕೇಂದ್ರ ಸರಕಾರದ ಉದ್ದೇಶವಾಗಿದೆ,” ಎಂದು ವಿವರಿಸಿದ್ದಾರೆ.

Comments are closed.