ಕರ್ನಾಟಕ

ಕೈಮುಗಿಯುತ್ತೇನೆ, ಯಾರೂ ಗೋ ಮಾಂಸ ಸೇವಿಸಬೇಡಿ; ಸಿ.ಎಂ. ಇಬ್ರಾಹಿಂ

Pinterest LinkedIn Tumblr


ಹುಬ್ಬಳ್ಳಿ: ಎಲ್ಲರಿಗೂ ಕೈಮುಗಿದು ಬೇಡಿಕೊಳ್ಳುತ್ತೇನೆ. ದಯಮಾಡಿ ಗೋವನ್ನು ತಿನ್ನಬೇಡಿ ಎಂದು ಸಿ.ಎಂ. ಇಬ್ರಾಹಿಂ ಮನವಿ ಮಾಡಿದ್ದಾರೆ.

ಮೈತ್ರಿ ಸರ್ಕಾರ, ಲವ್ ಜಿಹಾದ್, ಗೋ ಹತ್ಯಾ ನಿಷೇಧ.. ಹೀಗೆ ಹಲವು ವಿಷಯಗಳಿಗೆ ಹುಬ್ಬಳ್ಳಿಯಲ್ಲಿ ಶನಿವಾರ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸುತ್ತ ಹೇಳಿದರು.

ಎಲ್ಲದಕ್ಕೂ ತಮ್ಮದೇ ಧಾಟಿಯಲ್ಲಿ ವಿಭಿನ್ನವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೆಡಿಎಸ್​-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನ ಕುರಿತು ಇತ್ತೀಚೆಗೆ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ನೀಡಿದ್ದ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿರುವ ಇಬ್ರಾಹಿಂ, ಮೈತ್ರಿ ಸರ್ಕಾರ ಪತನಕ್ಕೆ ಯಾರು ಕಾರಣ ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ, ಆ ಬಗ್ಗೆ ನಾನ್ಯಾಕೆ ವಿಶ್ಲೇಷಣೆ ಮಾಡಲಿ ಎಂಬುದಾಗಿ ಹೇಳಿದ್ದಾರೆ. ನಾವೇನಿದ್ದರೂ ಸೇರಿಸುವುದಕ್ಕೆ ನೋಡುವವರೇ ಹೊರತು ಮುರಿಯವವರಲ್ಲ ಎಂದಿರುವ ಅವರು, ಮತ್ತೆ ಪುನರ್ ವಿವಾಹಕ್ಕೆ ಸಾಧ್ಯ ಇದೆಯಾ ಎನ್ನುವುದನ್ನೂ ನೋಡುತ್ತಿದ್ದೇವೆ ಎಂಬುದಾಗಿ ಹೇಳಿದ್ದಾರೆ.

ರಾಜಕೀಯ ಒಂದು ರೀತಿ ರೈಲ್ವೇ ಜಂಕ್ಷನ್ ಥರ ಆಗಿದೆ. ಯಾರು ಹತ್ತಿ ಹೋಗುತ್ತಾರೋ ಅವರು ದಡ ಸೇರುತ್ತಾರೆ ಎಂದಿರುವ ಅವರು ಲವ್ ಜಿಹಾದ್ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಲವ್ ಜಿಹಾದ್ ಕಾನೂನು ತಂದು ಏನು ಮಾಡಲು ಸಾಧ್ಯ? ಲವ್ ಜಿಹಾದ್ ಗಂಡ-ಹೆಂಡತಿ ರಾಜಿಯಾದರೆ ಯಾರು ಏನು ಮಾಡುವುದಕ್ಕೆ ಆಗುತ್ತದೆ? ಒತ್ತಾಯಪೂರ್ವಕವಾಗಿ ಮಾಡಿದರೆ ಮಾತ್ರ ಕ್ರಮಕೈಗೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ಬಳಿಕ ಗೋಹತ್ಯಾ ನಿಷೇಧದ ಕುರಿತೂ ಸಿ.ಎಂ. ಇಬ್ರಾಹಿಂ ಮಾತನಾಡಿದ್ದಾರೆ. ಗೋಹತ್ಯೆ ನಿಷೇಧಕ್ಕೆ ನಮ್ಮ ಬೆಂಬಲ ಇದೆ. ಮುಸ್ಲಿಮರಿಗೆ ನಾನು ಕೈ ಮುಗಿದು ಬೇಡಿಕೊಳ್ಳುತ್ತೇನೆ, ಯಾರೂ ಗೋವನ್ನು ತಿನ್ನಬಾರದು ಎಂದು ಕೇಳಿಕೊಂಡರು. ಜತೆಗೆ ಬಂಜೆಯಾದ ಗೋವನ್ನು ನೋಡಿಕೊಳ್ಳುವವರು ಯಾರು? ಎಂದು ಪ್ರಶ್ನಿಸಿದ ಅವರು, ಸರ್ಕಾರ ಅದಕ್ಕಾಗಿ ಪ್ರತಿ ಪಂಚಾಯತ್​ಗೆ ಒಂದು ಗೋಶಾಲೆ ತೆರೆಯಬೇಕು. ಗೋಸಾಕಣಿಕೆಯ ವ್ಯವಸ್ಥೆಯನ್ನು ಸರ್ಕಾರ ಮಾಡಿಕೊಡಲಿ ಎಂದು ಹೇಳಿದರು. ಇನ್ನು ಕೊಡವರ ಗೋಮಾಂಸ ಸೇವನೆ ಸಂಬಂಧ ಸಿದ್ದರಾಮಯ್ಯ ಅವರ ಆರೋಪ ಸಂಬಂಧ ಪ್ರತಿಕ್ರಿಯಿಸಿದ ಇಬ್ರಾಹಿಂ, ಅದು ನನಗೆ ಗೊತ್ತಿಲ್ಲ, ಯಾವುದೇ ವಿವಾದದ ಬಗ್ಗೆ ನಾನು ಮಾತನಾಡುವುದಿಲ್ಲ. ಅದರ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ ಎಂದು ಹೇಳಿದರು.

Comments are closed.