
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೇಜ್ ತ್ರಿ ಪಾರ್ಟಿಗಳು ಸೇರಿದಂತೆ ಡ್ರಗ್ಸ್ ದಂಧೆಕೋರರಿಗೆ ಕೊಕೇನ್ ಸರಬರಾಜು ಮಾಡುತ್ತಿದ್ದ ವಿದೇಶಿ ಕಿಂಗ್ ಪಿನ್ ಓರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯಾ ಮೂಲದ ಚಿಡಿಬೇರ್ ಅಂಬ್ರೋಸ್ ನನ್ನು ಬಂಧಿತ ಕಿಂಗ್ ಪಿನ್.ಕೆಲ ದಿನಗಳಿಂದ ನಿರಂತರವಾಗಿ ಡ್ರಗ್ಸ್ ಪ್ರಕರಣದಲ್ಲಿ ನೈಜೀರಿಯಾ ಮೂಲಕ ಪೆಡ್ಲರ್’ಗಳು ಸಿಸಿಬಿ ಗಾಳಕ್ಕೆ ಬಿದ್ದಿದ್ದರು. ಈ ಪೆಡ್ಲರ್’ಗಳ ವಿಚಾರಣೆಗೆ ನಡೆಸಿದಾ ಆಂಬ್ರೋಸ್ ಎಂಬಾತ ಕೊಕೇನ್ ಪೂರೈಸುತ್ತಿದ್ದ ಎಂಬ ಮಾಹಿತಿ ಬಾಯ್ಬಿಟ್ಟಿದ್ದಾರೆ.
5 ವರ್ಷಗಳ ವ್ಯವಹಾರಿಕ ವೀಸಾದ ಅಡಿಯಲ್ಲಿ ನಗರಕ್ಕೆ ಬಂದಿದ್ದ ಆಂಬ್ರೋಸ್, ಬಾಣಸವಾಡಿಯಲ್ಲಿ ನೆಲೆಸಿದ್ದ. ಅಂತರಾಷ್ಟ್ರೀಯ ಮಾದಕ ವಸ್ತು ಮಾರಾಟ ಜಾಲದ ಜೊತೆ ನಂಟು ಹೊಂದಿದ್ದ ಈತ, ಬೆಂಗಳೂರಿನಲ್ಲಿ ಪ್ರಮುಖ ಕೊಕೇನ್ ಪೂರೈಕೆದಾರನಾಗಿ ಕುಖ್ಯಾತಿ ಪಡೆದಿದ್ದ.
ವಿದೇಶದಿಂದ ಕಳ್ಳ ಮಾರ್ಗದಲ್ಲಿ ಕೊಕೇನ್ ತರಿಸಿಕೊಳ್ಳುತ್ತಿದ್ದ ಆರೋಪಿ, ನಂತರ ನೈಜೀರಿಯಾ ಪೆಡ್ಲರ್’ಗಳ ಮೂಲಕ ಗ್ರಾಹಕರಿಗೆ ತಲುಪಿಸುತ್ತಿದ್ದ. ಮೂರು ತಿಂಗಳಿನಿಂದ ನಿರಂತರ ಡ್ರಗ್ಸ್ ದಂಧೆ ವಿರುದ್ಧ ಕಾರ್ಯಾಚರಣೆಯಲ್ಲಿ ಕೆಲವು ನೈಜೀರಿಯ ಪೆಡ್ಲರ್’ಗಳು ಸೆರೆಯಾಗಿದ್ದರು. ಆಗ ವಿಚಾರಣೆ ವೇಳೆ ಆಂಬ್ರೋಸ್ ಪಾತ್ರದ ಬಗ್ಗೆ ಮಾಹಿತಿ ದೊರೆತಿತ್ತು. ಆದರೆ, ತನ್ನ ಸಹಚರರರು ಬಂಧಿತರಾದ ಬಳಿಕ ಆರೋಪಿ ಭೂಗತನಾಗಿದ್ದ, ಕೊನೆಗೂ ಎರಡು ತಿಂಗಳ ಸತತ ಪ್ರಯತ್ನದ ಫಲವಾಗಿ ಆರೋಪಿಯ ಬಂಧನವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿ ಪೆಡ್ಲರ್ಸ್ ಗೆ ಕೊಕೇನ್ ಸರಬರಾಜು ಮಾಡುವ ಮೂಲಕ ಸಂಪರ್ಕದಲ್ಲಿದ್ದನು. ಅಲ್ಲದೇ ಈತ ಡ್ರಗ್ಸ್ ಪ್ರಕರಣಗಳಲ್ಲೂ ಭಾಗಿಯಾಗಿದ್ದು, ಈತನ ಕುರಿತು ಸಂಪೂರ್ಣ ಮಾಹಿತಿ ಪಡೆದ ನಂತರವೇ ಬಂಧಿಸಲಾಗಿದೆ. ಸದ್ಯ ತನಿಖೆ ಮುಂದುವರೆದಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಬಾಣಸವಾಡಿಯಲ್ಲಿರುವ ಮನೆಯಲ್ಲಿ ಆರೋಪಿ ಸಭೆ ನಡೆಸುತ್ತಿದ್ದ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಯೋಜನೆಯಂತೆ ರೈಲ್ವೇ ಪೊಲೀಸರ ಜೊತೆಗೂಡಿ ಅಧಿಕಾರಿಗಳ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿತು. ಬಳಿಕ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಬಳಿ ಒಟ್ಟು 28 ಸಿಮ್ ಕಾರ್ಡ್ ಗಳನ್ನು ವಶಕ್ಕೆ ಪಡೆಯಲಾಗಿದ್ದು, ಈತ ಆಗಾಗ ತನ್ನ ಮೊಬೈಲ್ ಸಂಖ್ಯೆಯನ್ನು ಬದಲಿಸುತ್ತಿದ್ದ. ಇದಕ್ಕಾಗಿ ಪ್ರತೀ ಬಾರಿ ಒಂದೊಂದು ಸಿಮ್ ಕಾರ್ಡ್’ಗಳನ್ನು ಬಳಕೆ ಮಾಡುತ್ತಿದ್ದ. ಈ ಮೂಲಕ ಪ್ರತಿಯೊಬ್ಬರ ಬಳಿ ನಿರಂತರವಾಗಿ ಸಂಪರ್ಕದಲ್ಲಿರುತ್ತಿದ್ದ ಎನನಲಾಗಿದೆ.
Comments are closed.