ಕರ್ನಾಟಕ

ಸಾರಿಗೆ ನೌಕರರೊಂದಿಗೆ ಸಂಧಾನ ಸಕ್ಸಸ್, ಮಧ್ಯರಾತ್ರಿಯಿಂದ ಬಸ್ ಸಂಚಾರ ಆರಂಭ..!

Pinterest LinkedIn Tumblr


ಬೆಂಗಳೂರು : ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಸಾರಿಗೆ ನೌಕರರ ಮುಷ್ಕರ ಕೊನೆಗೂ ಸುಖಾಂತ್ಯ ಕಂಡಿದೆ. ಇದರಿಂದಾಗಿ ನಾಲ್ಕು ದಿನಗಳಿಂದ ಬಸ್ ಗಳಿಲ್ಲದೆ,ಪರದಾಡುತ್ತಿದ್ದ ರಾಜ್ಯದ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಸಂಧಾನ ಯಶಸ್ವಿಯಾಗುತ್ತಿದ್ದಂತೆ ರಾಜ್ಯಾದ್ಯಂತ ಬಸ್ ಗಳು ರಸ್ತೆಗಿಳಿದವು. ತಮ್ಮನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು ಎಂಬುದೂ ಸೇರಿದಂತೆ ಪ್ರತಿಭಟನಾಕಾರರು ಸುಮಾರು 10 ಬೇಡಿಕೆಗಳನ್ನು ಮುಂದಿಟ್ಟಿದ್ದರು.ಇದರಲ್ಲಿ ಬಹುಪಾಲು ಬೇಡಿಕೆಗಳಿಗೆ ಸರಕಾರ ಅಸ್ತು ಎಂದ ಹಿನ್ನೆಲೆಯಲ್ಲಿ ನೌಕರರ ಮುಷ್ಕರ ಅಂತ್ಯಗೊಂಡಿದೆ.

ಸಾರಿಗೆ ಸಂಸ್ಥೆಗಳ ನೌಕರರ ಹತ್ತು ಬೇಡಿಕೆಗಳ ಪೈಕಿ ಹಣಕಾಸಿನ ಇತಿಮಿತಿಯಲ್ಲಿ ಸಾಧ್ಯವಿರುವ ಬೇಡಿಕೆಗಳನ್ನು ಈಡೇರಿಸುವುದಾಗಿ ಸರಕಾರ ಭರವಸೆ ನೀಡಿದ ಮೇಲೆ ಮುಷ್ಕರ ಹಿಂದಕ್ಕೆ ಪಡೆಯುವ ನಿರ್ಧಾರಕ್ಕೆ ಬರಲಾಗಿದೆ.

ಈಗಿನ ಸಂದರ್ಭದಲ್ಲಿ ಕೂಡಲೇ ನೌಕರರಿಗೆ ಸರಕಾರಿ ನೌಕರರ ಸ್ಥಾಣಮಾನ ನೀಡುವುದು ಕಷ್ಟಸಾಧ್ಯ ಎಂಬ ವಿಚಾರವನ್ನು ಸಂಧಾನಕಾರರು ನೌಕರರ ಗಮನಕ್ಕೆ ತಂದರು. ಸಾರಿಗೆ ನೌಕರರ ಪ್ರತಿಭಟನೆಯು ಕ್ಣಣಕ್ಣಣಕ್ಕೂ ಹೊಸ ತಿರುವು ಪಡೆದುಕೊಳ್ಳುತ್ತಿದ್ದ ಕಾರಣ, ಇಂದು ಮೇರಾಥನ್ ಸಭೆ ನಡೆಸಿದ ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ನೌಕರರು ಮುಂದಿಟ್ಟಿದ್ದ ಕೆಲವು ಬೇಡಿಕೆಗಳನ್ನು ಈಡೇರಿಸಲು ಒಪ್ಪಿದರು.

ಇದರ ಬೆನ್ನಲ್ಲೇ ರಾಜ್ಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಹೋರಾಟ ನಡೆಸುತ್ತಿದ್ದ ನೌಕರರು ತಮ್ಮ ಮುಷ್ಕರ ಕೈ ಹಿಂತೆಗೆದುಕೊಂಡು ತಕ್ಷಣವೇ ಕರ್ತವ್ಯಕ್ಕೆ ಹಾಜರಾಗುವುದಾಗಿ ಘೋಷಣೆ ಮಾಡಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರು,ನೌಕರರು ಮುಂದಿಟ್ಟಿದ್ದ ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಮಾತ್ರ ಈಡೇರಿಸಲು ಒಪ್ಪಿದ್ದೇವೆ.ರಾತ್ರಿಯಿಂದಲೇ ಬಸ್ ಗಳು ಕಾರ್ಯಾರಂಭ ಮಾಡಲಿವೆ.ಮುಷ್ಕರ ಹಿಂಪಡೆಯಲು ತೀರ್ಮಾನಿಸದ್ದಾರೆಂದು ತಿಳಿಸಿದರು.ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿಸಬೇಕು ಎಂಬ ಬೇಡಿಕೆಯನ್ನು ಒಪ್ಪಿಕೊಂಡಿಲ್ಲ.ವೇತನ ಪರಿಷ್ಕರಣೆ ಮಾಡಲು ಸಮಿತಿ ರಚನೆ ಮಾಡಲಾಗುವುದು.

6 ನೇ ವೇತನ ಆಯೋಗಕ್ಕೆ ಸೇರ್ಪಡೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು.ಓಟಿ, ಭತ್ಯೆ ಸೇರಿದಂತೆ ಕೆಲವು ಸವಲತ್ತುಗಳನ್ನು ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಸೂಕ್ತ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದರು. ಸಾರಿಗೆ ನೌಕರರು ಕೊರೊನಾದಿಂದ ಮೃತಪಟ್ಟರೆ 30 ಲಕ್ಷ ಪರಿಹಾರ ನೀಡುವುದು,ನೌಕರರನ್ನು ಆರೋಗ್ಯ ಸಂಜೀವಿನಿ ವ್ಯಾಪ್ತಿಗೆ ಸೇರಿಸಲಾಗುವುದಾಗಿ ಘೋಷಣೆ ಮಾಡಿದರು.

ಸಾಕಷ್ಟು ನೌಕರರಿಗೆ ಕೆಲಸದ ಸಮಯ ಸಿಗುತ್ತಿಲ್ಲ, ಸಿಗದೆ ಇದ್ದರೂ ಹಾಜರಾತಿ ನೀಡುವುದು, ಸಾರಿಗೆ ನಿಗಮಗಳಲ್ಲಿ ವಾಹನಗಳ ಕಾರ್ಯಾಚರಣೆ ಯಥಾಸ್ಥಿತಿಗೆ ಬರುವವರೆಗೂ ಕಾರ್ಮಿಕರಿಗೆ ಪೂರ್ಣ ವೇತನ,ಕಾರ್ಮಿಕರು ಗಳಿಸಿದ್ದ ರಜೆಗಳನ್ನು ಅವರ ಖಾತೆಗೆ ಪುನ: ವಾಪಸ್​ ನೀಡಲಾಗುವುದು ಎಂದು ಸವದಿ ತಿಳಿಸಿದರು.

ಕೋವಿಡ್ ಪಾಸಿಟಿವ್ ಬಂದು ಕ್ವಾರಂಟೈನ್ ಆದ ಅವಧಿ ಹಾಗೂ ಚಿಕಿತ್ಸೆ ಪಡೆದ ಅವಧಿಯಲ್ಲಿ ವೇತನ ಸಹಿತ ರಜೆ ನೀಡುವ ಆದೇಶ,ಕೋವಿಡ್​ನಿಂದ ನಿಧನರಾದ ಕುಟುಂಬದವರಿಗೆ 30 ಲಕ್ಷ ಹಣ,ಬಿಎಂಟಿಸಿ ನಿಗಮದಲ್ಲಿ ಪಾಳಿಯಲ್ಲಿ ಮಾರ್ಗ ಕಾರ್ಯಾಚರಣೆ ಮಾಡಲು ಆರಂಭಿಸುವುದು,ನಿಗಮದಿಂದ ನಿಗಮಕ್ಕೆ ವರ್ಗಾವಣೆ ಸೇರಿದಂತೆ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸಮ್ಮತಿಸಿದೆ.

ಸಾರಿಗೆ ನಿಗಮಗಳಿಗೆ ಸರ್ಕಾರ ನೀಡಬೇಕಾಗಿರುವ ಬಾಕಿ ಹಣವನ್ನು ಕೂಡಲೇ ನೀಡಬೇಕು. ಖಾಸಗಿ ಸಹಭಾಗಿತ್ವದ ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆ ರದ್ದು ಮಾಡಿ, ಸರ್ಕಾರದ ಒಡೆತನದಲ್ಲಿಯೇ ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆ ಮಾಡಿ ಕೋವಿಡ್​ನಿಂದ ಮೃತಪಟ್ಟ ಕುಟುಂಬದವರಿಗೆ ಉದ್ಯೋಗ ನೀಡುವುದು ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಪರಿಗಣಿಸುವುದಾಗಿ ಆಶ್ವಾಸನೆ ನೀಡಿದರು.

ಕೆಎಸ್ ಆರ್ ಟಿಸಿ ಸಂಘದ ಅಧ್ಯಕ್ಷ ಚಂದ್ರು ಮಾತನಾಡಿ, ಸಚಿವರ ಜೊತೆ ನಡೆಸಿರುವ ಸಂಧಾನ ಬಹುತೇಕ ಯಶಸ್ವಿಯಾಗಿದೆ.ಜನವರಿ ತಿಂಗಳಿನಿಂದ ಕೆಲವು ವಿಶೇಷ ಭತ್ಯೆಗಳನ್ನು ನೀಡಲು ಸರ್ಕಾರ ಸಮ್ಮತಿಸಿದೆ. ನಾವು ತಕ್ಷಣವೇ ಮುಷ್ಕರ ಹಿಂಪಡೆಯುವುದಾಗಿ ಪ್ರಕಟಿಸಿದರು. ನಿಗಮದ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ, ಅಂತರ್ ರಾಜ್ಯ ವರ್ಗಾವಣೆ, ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿಕೊಂಡಿದೆ. ರಾತ್ರಿಯಿಂದಲೇ ಮುಷ್ಕರ ಹಿಂಪಡೆಯುವುದಾಗಿ ಘೋಷಿಸಿದರು.

ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಸಾರಿಗೆ ನೌಕರರ ಜೊತೆ ನಡೆಸಿರುವ ಮಾತುಕತೆ ಯಶಸ್ವಿಯಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆಯಂತೆ ನೌಕರ ಸಂಘಟನೆಗಳ ಮುಖಂಡರ ಜೊತೆ ಸಂಧಾನ ನಡೆಸಲಾಗಿದೆ. ಸಾರ್ವಜನಿಕರಿಗೆ ಉಂಟಾಗುತ್ತಿದ್ದ ತೊಂದರೆ ಗಮನಿಸಿ ಸಮಸ್ಯೆಯನ್ನು ಇತ್ಯಾರ್ಥ ಪಡಿಸಲು ಎಲ್ಲರೂ ಪ್ರಯತ್ನ ನಡೆಸಿದರು. ಬಿಕ್ಕಟ್ಟು ಇತ್ಯಾರ್ಥವಾಗಿರುವುದರಿಂದ ರಾತ್ರಿಯಿಂದಲೇ ಬಸ್ ಗಳು ಕಾರ್ಯಾರಂಭ ಮಾಡಲಿವೆ ಎಂದರು.

ಇದಕ್ಕೂ ಮುನ್ನ ಲಕ್ಷ್ಮಣ್ ಸವಧಿ ಅವರು, ಬೆಳಗ್ಗೆ ನಡೆಸಿದ ಸಭೆ ಅರ್ಧಕ್ಕೆ ನಿಂತಿತ್ತು.ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಆರ್.ಅಶೋಕ್, ಬಸವರಾಜ್ ಬೊಮ್ಮಯಿ,ಕೆಎಸ್‌ಆರ್ ಟಿಸಿ ವ್ಯವಸ್ಥಾಪಕ ನಿದೇರ್ಶಕ ಶಿವಯೋಗಿ ಕಳಸದ್, ಬಿಎಂಟಿಸಿ ವ್ಯವಸ್ಥಾಪಕ ನಿದೇರ್ಶಕಿ ಶಿಖಾ , ಸೇರಿದಂತೆ ಮತ್ತಿತರರ ಜೊತೆ ಸವಧಿ ಮಾತುಕತೆ ನಡೆಸಿದರು.

ಪ್ರತಭಟನೆ ನಡೆಸುತ್ತಿರುವ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂಬ ಬೇಡಿಕೆಯನ್ನು ಹೊರೆತುಪಡಿಸಿ ಉಳಿದ ಬೇಡಿಕೆಯನ್ನು ಹಣಕಾಸಿನ ಲಭ್ಯತೆ ನೋಡಿಕೊಂಡು ಸಮಸ್ಯೆ ಇತ್ಯರ್ಥ ಪಡಿಸಲು ಸಿ.ಎಂ.ಅವರು ಸವಧಿಗೆ ಸೂಚನೆ ನೀಡಿದರು.

ಇದರ ಬೆನ್ನಲ್ಲೇ ಮತ್ತೆ ವಿಕಾಸಸೌದದಲ್ಲಿ ಅಧಿಕಾರಿಗಳು ಹಾಗೂ ಐದು ಸಾರಿಗೆ ಸಂಘಟನೆಯ ಮುಖಂಡರ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸಿದ ಸವಧಿ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದರು.

Comments are closed.