ಕರ್ನಾಟಕ

ಮಾಜಿ ಮುಖ್ಯಮಂತ್ರಿ ಎಸ್.ಆರ್. ಕಂಠಿ ಮಡದಿ ಶತಾಯುಷಿ ಮರಿಬಸಮ್ಮ ನಿಧನ

Pinterest LinkedIn Tumblr


ಬಾಗಲಕೋಟೆ : ಮಾಜಿ ಮುಖ್ಯಮಂತ್ರಿ ದಿ.ಎಸ್.ಆರ್. ಕಂಠಿ ಅವರ ಪತ್ನಿ ಮರಿಬಸಮ್ಮ ಎಸ್. ಕಂಠಿ (102) ಅವರು ಮಂಗಳವಾರ ನಿಧನರಾಗಿದ್ದಾರೆ.

ಮಾಜಿ ಸಿಎಂ ಎಸ್.ಆರ್. ಕಂಠಿ ಅವರು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಸ್ಥಾಪಿಸಿರುವ ಸೈನಿಕ ಶಾಲೆಯಲ್ಲಿ ಪುತ್ರನೊಂದಿಗೆ ವಾಸಿಸುತ್ತಿದ್ದ ಮರಿಬಸಮ್ಮ ಅವರು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ನಿಧರಾಗಿದ್ದಾರೆ. ಶತಾಯುಷಿ ಆಗಿದ್ದ ಮರಿಬಸಮ್ಮ ಅವರಿಗೆ ಇಬ್ಬರು ಪುತ್ರರಿದ್ದು, ಓರ್ವ ಪತ್ರ ಮಹೇಂದ್ರ ಕಂಠಿ ಅವರು ಸೈನಿಕ ಶಾಲೆಯ ಚೇರಮನ್‌ರಾಗಿದ್ದಾರೆ. ಮತ್ತೊರ್ವ ಪುತ್ರ ಈ ಹಿಂದೆಯೇ ನಿಧನರಾಗಿದ್ದಾರೆ.

ಮರಿಬಸಮ್ಮ ಪಾರ್ಥಿವ ಶರೀರವನ್ನು ಬೆಳಗಾಗಿ ಜಿಲ್ಲೆಯ ಕಿತ್ತೂರಿನ ಸೈನಿಕ ಶಾಲೆಯ ಆವರಣದಲ್ಲಿ ಬೆಳಗ್ಗೆ 8ರಿಂದ 10ರ ವರೆಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅವರ ಸ್ವಂತ ಊರು ಬಾಗಲಕೋಟೆ ಜಿಲ್ಲೆಯ ಇಳಕಲ್ಲ ನಗರದಲ್ಲಿರುವ ಅವರ ಪತಿ ಎಸ್.ಆರ್. ಕಂಠಿ ಅವರ ಸಮಾಧಿ ಪಕ್ಕದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲು ತೀರ್ಮಾನಿಸಲಾಗಿದೆ.

ಬಿ.ಡಿ. ಜತ್ತಿ ಅವರ ಬಳಿಕ ಎಸ್.ಆರ್. ಕಂಠಿ ಅವರು ಅಲ್ಪಾವಧಿ ಕಾಲ 1962ರ ಮಾರ್ಚ್ 14ರಿಂದ 1962 ಜೂನ್ 20ರ ವರೆಗೆ ರಾಜ್ಯದ (ಮೈಸೂರು ರಾಜ್ಯ) ಮುಖ್ಯಮಂತ್ರಿಯಾಗಿದ್ದರು. ಅವರ ಬಳಿಕ ಎಸ್. ನಿಜಲಿಂಗಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

ಇಡೀ ಆಸ್ತಿ ದಾನ :
ಮಾಜಿ ಮುಖ್ಯಮಂತ್ರಿ ದಿ.ಶಿವಲಿಂಗಪ್ಪ ರುದ್ರಪ್ಪ ಕಂಠಿ ಅವರು ತಮ್ಮ ಇಡೀ ಆಸ್ತಿಯನ್ನು ಸರ್ಕಾರಕ್ಕೆ ದಾನವಾಗಿ ನೀಡಿದ್ದಾರೆ. ಇಳಕಲ್ ನಗರದಲ್ಲಿ ಎಸ್.ಆರ್. ಕಂಠಿ ಹೆಸರಿನಲ್ಲಿ ಸರ್ಕಾರಿ ಕಾಲೇಜು ಸ್ಥಾಪಿಸಿದ್ದು, ಅದು ಕಂಠಿ ಅವರು ದಾನವಾಗಿ ನೀಡಿದ ಸ್ಥಳದಲ್ಲೇ ನಿರ್ಮಾಣಗೊಂಡಿದೆ. ಈ ಕಾಲೇಜಿನ ಆವರಣದಲ್ಲಿಯೇ ಎಸ್.ಆರ್. ಕಂಠಿ ಅವರ ಸಮಾಧಿಯೂ ಇದ್ದು, ಅದೇ ಸ್ಥಳದಲ್ಲಿ ಅವರ ಪತ್ನಿ ಮರಿಬಸಮ್ಮ ಕಂಠಿ ಅವರ ಅಂತ್ಯಕ್ರಿಯೆ ನಡೆಯಲಿದೆ.

Comments are closed.