ಕರ್ನಾಟಕ

ಫಸ್ಟ್​ ನೈಟ್​ನಲ್ಲಿ ಪಾನಮತ್ತನಾಗಿ ಬಂದ ಪತಿ; ಮುಂದೇನಾಯಿತು ಗೊತ್ತಾ?

Pinterest LinkedIn Tumblr


ಬೆಂಗಳೂರು: ಮದುವೆಯ ಮೊದಲ ರಾತ್ರಿಯೇ ವಧುವೊಬ್ಬಳಿಗೆ ದೊಡ್ಡ ಆಘಾತ ಕಾದಿತ್ತು. ಕುಡಿದು ಬಂದ ಗಂಡನನ್ನು ನೋಡಿ ಆಕೆ ಆತಂಕಗೊಂಡಿದ್ದಳು. ನಂತರ ದಿನವೂ ಕಿರುಕುಳ ನೀಡುತ್ತಿದ್ದ ಗಂಡನ ಕಾಟ ತಾಳಲಾರದೆ ಆಕೆ ಕೊನೆಗೂ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಒಂದು ತಿಂಗಳ ಹಿಂದೆ ನಡೆದಿದ್ದ ಮದುವೆ ಇದೀಗ ಮುರಿದುಬಿದ್ದಿದೆ. .

ಬೆಂಗಳೂರಿನ ಹೆಚ್​ಎಎಲ್​ನ ಲಾಲ್​ ಬಹದ್ದೂರ್ ಶಾಸ್ತ್ರಿ ನಗರದಲ್ಲಿ ಈ ಘಟನೆ ನಡೆದಿದೆ. ಪತ್ನಿಯ ಮೇಲೆ ಹಲ್ಲೆ ಮಾಡಿದ ಪತಿ ಭರತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿಗೆ ಕಿರುಕುಳ ಕೊಟ್ಟ ಆರೋಪದಡಿ ಭರತ್​ ಜೈಲು ಸೇರಿದ್ದಾನೆ. ಒಂದು ತಿಂಗಳ ಹಿಂದೆ ಗುರು-ಹಿರಿಯರು ನಿಶ್ಚಯಿಸಿ ಭರತ್ ಮತ್ತು ಶ್ರಾವಣಿಯ ಮದುವೆ ಮಾಡಿದ್ದರು. ಆದರೆ, ಮೊದಲ ರಾತ್ರಿ ವೇಳೆ ಭರತ್ ಕುಡಿದು ಬಂದು, ಅನುಚಿತವಾಗಿ ವರ್ತಿಸಿದ್ದ ಎಂದು ಶ್ರಾವಣಿ ಆರೋಪಿಸಿದ್ದಾರೆ.

ಕುಡಿತದಿಂದ ಆತನ ಜೊತೆ ಇರಲು ಕಷ್ಟವಾಗುತ್ತಿದೆ ಎಂದು ಪತ್ನಿ ಶ್ರಾವಣಿ ಪೊಲೀಸರಿಗೆ ದೂರು ನೀಡಿದ್ದಾರೆ. ಕುಡಿತ ನಿಲ್ಲಿಸುವಂತೆ ಗಂಡನ ಜೊತೆ ಶ್ರಾವಣಿ ಜಗಳವಾಡಿದ್ದರು. ಇದಾದ ಬಳಿಕ ಭರತ್ ಹಾಗೂ ಆತನ ಅಪ್ಪ ಲೋಕೇಶ್ ರೆಡ್ಡಿ, ಅಮ್ಮ ಕೋಮಲಮ್ಮ ಶ್ರಾವಣಿಗೆ ಚಿತ್ರಹಿಂಸೆ ನೀಡಿದ್ದರು. ಮಾಟ-ಮಂತ್ರ ಮಾಡಿ ಚಿತ್ರಹಿಂಸೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಅಕ್ಟೋಬರ್ 29ರಂದು ಭರತ್-ಶ್ರಾವಣಿ ಮದುವೆಯಾಗಿದ್ದು, ನವೆಂಬರ್ 29ಕ್ಕೆ ಶ್ರಾವಣಿ ತನ್ನ ಗಂಡನ ವಿರುದ್ಧ ದೂರು ದಾಖಲಿಸಿದ್ದಾರೆ.

ವರದಕ್ಷಿಣೆಗೆ 1 ಕೋಟಿಯ E ಕ್ಲಾಸ್ ಬೆಂಜ್ ಕಾರ್ ನೀಡಲಾಗಿತ್ತು. 5 ಲಕ್ಷದ ಡೈಮಂಡ್ ರಿಂಗ್ ನೀಡಲಾಗಿತ್ತು. ಸುಮಾರು ಮೂರು ಕೋಟಿ ಖರ್ಚು ಮಾಡಿ ಮದುವೆ ಮಾಡಲಾಗಿತ್ತು. ಒಂದು‌ ಕೋಟಿಯ ಬೆಂಝ್ ಕಾರು ಸೇರಿ ಐದು ಕೆಜಿ ಚಿನ್ನಾಭರಣ ನೀಡಿ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಭರತ್ ಎಸ್​ಎಸ್​ಎಲ್​ಸಿ ಫೇಲ್ ಆಗಿದ್ದರೂ ಸಾಫ್ಟ್​ವೇರ್ ಇಂಜಿನಿಯರ್ ಎಂದು ಸುಳ್ಳು ಹೇಳಿದ್ದ. ಹಾಗೇ, ಮೊದಲ ಮದುವೆಯ ವಿಚಾರವನ್ನು ಮುಚ್ಚಿಟ್ಟಿದ್ದ ಎಂದು ಶ್ರಾವಣಿಯ ತಂದೆ ಬಾಬು ರೆಡ್ಡಿ ಆರೋಪಿಸಿದ್ದಾರೆ.

ಇದರ ಜೊತೆಗೆ ಪತಿ ಭರತ್ ಶ್ರಾವಣಿ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿರುವ ಆರೋಪವೂ ಕೇಳಿಬಂದಿದೆ. ಇದಕ್ಕೂ ಮೊದಲೇ ಭರತ್​ಗೆ ಮತ್ತೊಂದು ಮದುವೆಯಾದ ವಿಷಯ ತಿಳಿಸದೆ ನನ್ನನ್ನು ಮದುವೆಯಾಗಿ ವಂಚನೆ ಮಾಡಿದ್ದಾಗಿ ಶ್ರಾವಣಿ ದೂರು ದಾಖಲಿಸಿದ್ದಾರೆ. ಹೆಚ್​ಎಎಲ್​ ಪೊಲೀಸ್ ಠಾಣೆಯಲ್ಲಿ ಭರತ್ ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ಭರತ್​ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

Comments are closed.